ಬೆಳಗಾವಿ | ಲಿಂಗಾಯತ ಧರ್ಮ ಬೇರೆ, ಹಿಂದೂ ಧರ್ಮವೇ ಬೇರೆ: ಧಾರ್ಮಿಕ ಚಿಂತಕ ಕರಡಿಗುದ್ದಿ

  • ಲಿಂಗಾಯತ ಧರ್ಮ ಸ್ವತಂತ್ರ ಮತ
  • ನ.27ರಂದು ಬಸವಣ್ಣವರ ವಚನಕಟ್ಟು ಮೆರವಣಿಗೆ

ಲಿಂಗಾಯತ ಧರ್ಮ ಬೇರೆ, ಹಿಂದೂ ಧರ್ಮವೇ ಬೇರೆ. ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ಏಕಸ್ವಾಮ್ಯ ಶೋಷಣೆಯಿದೆ. ಮಹಿಳೆಯರನ್ನು ಶೂದ್ರರ ಹಾಗೆ ಕಾಣಲಾಗುತ್ತಿದೆ. ಆದರೆ, ಲಿಂಗಾಯತ ಧರ್ಮದಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಲಾಗುತ್ತದೆ ಎಂದು ಧಾರ್ಮಿಕ ಚಿಂತಕ ಆರ್.ಎಂ ಕರಡಿಗುದ್ದಿ ಅಭಿಪ್ರಾಯಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಮಾಸಿಕ ಸತ್ಸಂಗದಲ್ಲಿ ಮಾತನಾಡಿದ ಅವರು, "ಲಿಂಗಾಯತ ಧರ್ಮದಲ್ಲಿ ಮಹಿಳೆಯರಿಗೆ ಒಳ್ಳೆಯ ಸ್ಥಾನಮಾನಗಳಿವೆ. ಧರ್ಮವು ಯಾರಿಗೂ ಭಯವನ್ನು ಉಂಟು ಮಾಡಬಾರದು. ಧರ್ಮದಲ್ಲಿ ಸರಳ ಆಚರಣೆಗಳಿರಬೇಕು. ಇಂತಹ ಅನೇಕ ವಿಷಯಗಳು ಲಿಂಗಾಯತ ಧರ್ಮದಲ್ಲಿವೆ. ಆದರೆ, ಹಿಂದೂ ಧರ್ಮದಲ್ಲಿ ಬ್ರಾಹ್ಮಣರು ಮಾತ್ರ ಪುರೋಹಿತರಾಗಿದ್ದಾರೆ. ದೇವತೆಗಳು ಹಿಂದೂ ಧರ್ಮದಲ್ಲಿ ಶೂದ್ರರಾಗಿದ್ದಾರೆ" ಎಂದರು.

"ಹಿಂದೂ ಧರ್ಮದ ಎಲ್ಲ ಸಮಸ್ಯೆಗಳಿಗೆ ಬ್ರಾಹ್ಮಣರೇ ಮೂಲ ಕಾರಣವೆಂದು ಅಂಬೇಡ್ಕರರು ಅಭಿಪ್ರಾಯ ಪಟ್ಟಿದ್ದರು. ಲಿಂಗಾಯತ ಧರ್ಮ ಜಾಗತಿಕವಾಗಿ ಬೆಳೆಯಬೇಕೆಂದರೆ ಆಹಾರದ ನಿಯಮದಲ್ಲಿ ಬದಲಾವಣೆಯಾಗಬೇಕು" ಎಂದು ಸಲಹೆ ನೀಡಿದರು. 

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮತ್ತು ನ್ಯಾಯವಾದಿ ಬಸವರಾಜ ರೊಟ್ಟಿ ಮಾತನಾಡಿ, "ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಿ ಲಿಂಗಾಯತ ಏಕೀಕರಣ ಮಾಡುವುದು. 12ನೇ ಶತಮಾನದಲ್ಲಿ ಬಸವಣ್ಣನವರಿಂದ ಸ್ಥಾಪಿತವಾತ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಿಸುವುದು. ಮಕ್ಕಳಿಗೆ ಲಿಂಗಾಯತ ಧರ್ಮದ ಸಂಸ್ಕಾರ ತಿಳಿಸುವುದು ಲಿಂಗಾಯತ ಮಹಾಸಭಾದ ಉದ್ದೇಶವಾಗಿದೆ. ಹಾಗಾಗಿ ನ.27ರಂದು ಬೆಳಗಾವಿ ನಗರದಲ್ಲಿ ನಡೆಯುವ ಬಸವಣ್ಣವರ ವಚನಕಟ್ಟು ಮೆರವಣಿಗೆಯಲ್ಲಿ ಲಿಂಗಾಯತರೆಲ್ಲರೂ ಭಾಗವಹಿಸಬೇಕು" ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಲ್ಲಿಕಾರ್ಜುನ ಓಂ ಗುರುಜಿ ಮಾತನಾಡಿ, "ಲಿಂಗಾಯತರು ಒಗ್ಗಟಾಗಿದ್ದರೆ ದೇಶದ ಚುಕ್ಕಾಣಿಯನ್ನು ಹಿಡಿಯಬಹುದು ಎಂದು ರಾಮಕೃಷ್ಣ ಹೆಗಡೆಯವರು ಅಭಿಪ್ರಾಯ ಪಟ್ಟಿದ್ದರು. ಆದ್ದರಿಂದ ಲಿಂಗಾಯತರು ಒಗ್ಗಟಾಗಿರಬೇಕು. ತಮ್ಮ ಮಕ್ಕಳಿಗೆ ಲಿಂಗಾಯತ ತತ್ವವನ್ನು ತಿಳಿಸಬೇಕು" ಎಂದು ಸಲಹೆ ನೀಡಿದರು.

ಶರಣೆ ರತ್ನಾ ಬೆಣಚಮರ್ಡಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಬಸವಣ್ಣವರ ವಚನ ಪಠಣೆಯಲ್ಲಿ ಸಾಧನೆ ಮಾಡಿದ ಶರಣೆ ಶಕುಂತಲಾ ಹೂಗಾರ, ಮಹಾಲಕ್ಷ್ಮಿ ಕುಂದಗೊಳ, ರಾಜಶ್ರೀ ದೆಗನ್ನವರ  ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಿಯ ಬಸವ ಸೇನೆಯ ಅಧ್ಯಕ್ಷ ಶಂಕರ ಗುಡಸ, ಸಿ.ಎಂ.ಬೂದಿಹಾಳ, ಮುರಗೆಪ್ಪ ಬಾಳಿ,  ಲಿಂಗಾಯತ ಮಹಾಸಭಾದ ಪಧಾದಿಕಾರಿಗಳು, ಸದಸ್ಯರು ಮತ್ತು ಮಹಿಳೆಯರು  ಉಪಸ್ಥಿತರಿದ್ದರು.

ಬೆಳಗಾವಿಯ ಮಾಸ್ ಮೀಡಿಯಾ ಸಂಯೋಜಕ ಸುನೀಲ್ ಮಾಹಿತಿ ಆಧಾರಿತ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180