ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಯಿಂದ ಅಕ್ರಮ ತಡೆಯಲು ಸಾಧ್ಯ : ವಂದಿತಾ ಶರ್ಮಾ

  • ಚುನಾವಣಾ ಸುಧಾರಣೆಗಳ ಉದ್ಘಾಟಿಸಿದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ
  • ಮತದಾನದ ಕುರಿತು ಜನರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ

“ಭಾರತ ಚುನಾವಣಾ ಆಯೋಗವು ಹಲವು ಸುಧಾರಣೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಯಾದರೆ ಚುನಾವಣೆಯಲ್ಲಿ ಮೋಸ ಮಾಡುವುದನ್ಡನು ತಡೆಗಟ್ಟಬಹುದಾಗಿದೆ. ಮತದಾನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ಮತದಾನ ಮಾಡಲು ಪ್ರೇರೇಪಿಸಬೇಕು" ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅಭಿಪ್ರಾಯಪಟ್ಟರು.

ವಿಕಾಸಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚುನಾವಣಾ ಸುಧಾರಣೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, “ಚುನಾವಣಾ ಸುಧಾರಣೆಗಳ ಕುರಿತು ರಾಜ್ಯದ ಜನತೆಗೆ ಅರಿವು ಮೂಡಿಸಬೇಕು. ಚುನಾವಣಾ ಸುಧಾರಣೆಗಳನ್ನು ಕಾರ್ಯಗತಗೊಳಿಸಿದರೆ, ರಾಜ್ಯಕ್ಕೆ ಒಳ್ಳೆಯ ಹೆಸರು ಬರುತ್ತದೆ. ಆದ್ದರಿಂದ ಸರ್ಕಾರಿ ನೌಕರರಾದ ನಾವು ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಸಬೇಕು. ನಂತರ ಜನತೆಗೆ ಪ್ರಚಾರ ಮಾಡಬೇಕು” ಎಂದು ಹೇಳಿದರು.

“ರಾಜ್ಯದಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಅದನ್ನು ಬಳಸಿಕೊಂಡು ಚುನಾವಣಾ ಪ್ರಕ್ರಿಯೆಗಳನ್ನು ಸರಳೀಕರಿಸಬೇಕು. ವೋಟರ್ ಹೆಲ್ಪ್‌ಲೈನ್ ಆಫ್ ಡೌನ್‌ಲೋಡ್‌ ಮಾಡಿಕೊಂಡು ಮತದಾರರ ಗುರುತಿನ ಚೀಟಿ ಪಡೆಯುವಂತಾಗಬೇಕು” ಎಂದು ತಿಳಿಸಿದರು.

ಏನೇನು ಸುಧಾರಣೆಗಳಾಗಿವೆ ?

1950ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 14(ಬಿ) ಮತ್ತು 23 ರಲ್ಲಿನ ಕಾನೂನು ತಿದ್ದುಪಡಿಗಳ ಅನುಸಾರವಾಗಿ ಭಾರತದ ಚುನಾವಣಾ ಆಯೋಗವು ವಿಧಾನಸಭೆ ಮತ್ತು ಲೋಕಸಭೆ ಮತ ಕ್ಷೇತ್ರದ ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅನೇಕ ಬದಲಾವಣೆ ತರಲು ಪ್ರಕ್ರಿಯೆ ಪ್ರಾರಂಭಿಸಿದೆ.

ಸುಧಾರಣೆಯ ಪ್ರಮುಖಾಂಶಗಳೆಂದರೆ, ಮತದಾರರ ಪಟ್ಟಿಗೆ ನೋಂದಾಯಿಸಲು ಯುವ ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡುವುದು. ಮತದಾರರ ಪಟ್ಟಿಗೆ ನೋಂದಾಯಿಸಲು ವರ್ಷದಲ್ಲಿ ನಾಲ್ಕು ಅವಕಾಶ ನೀಡಿದ್ದು, ಮೊದಲಿದ್ದಂತೆ ಜನವರಿ 01 ರವರೆಗೂ ಕಾಯಬೇಕಾಗಿಲ್ಲ. 17 ವರ್ಷ ಮೇಲ್ಪಟ್ಟ ಯುವಕರಿಗೆ ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ. ಆಗಸ್ಟ್ 01ರಿಂದ ಮತದಾರರ ನೋಂದಣಿಗಾಗಿ ಹೊಸ ಸರಳೀಕರಿಸಿದ ಅರ್ಜಿ ನಮೂನೆಗಳು ದೊರೆಯಲಿವೆ.

ಮತದಾರರ ಪಟ್ಟಿಯ ಹೆಸರು, ಇನ್ನಿತರ ತಿದ್ದುಪಡಿಗಳಿಗಾಗಿ ಹೊಸ ನಮೂನೆ 8 ಲಭ್ಯವಾಗಲಿದೆ. ಮತದಾರರ ಪಟ್ಟಿಗೆ ಸ್ವಯಂಪ್ರೇರಿತ ಆಧಾರ್ ಜೋಡಣೆ ಸೌಲಭ್ಯ ಇರಲಿದೆ. ಒಂದೇ ತರಹದ ಹೆಸರು ಅಥವಾ ಫೋಟೋ ಹೊಂದಿರುವ ಮತದಾರರ ಪರಿಶೀಲನೆಗೆ ಆದ್ಯತೆ ನೀಡಲಾಗುತ್ತಿದೆ. ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಆರೋಗ್ಯಕರ ಮತದಾರರ ಪಟ್ಟಿಯನ್ನು ಖಾತರಿಪಡಿಸುವ ಉದ್ದೇಶದಿಂದ ಪರಿಶೀಲನೆ ಮತ್ತು ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಈ ಎಲ್ಲಾ ತಿದ್ದುಪಡಿಗಳು ಆಗಸ್ಟ್ 1 ರಿಂದಲೇ ಜಾರಿಗೆ ಬರಲಿವೆ. 

18 ವರ್ಷ ತುಂಬಿದ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಜತೆಗೆ ಮತದಾರರ ಭಾವಚಿತ್ರದ ಗುರುತಿನ ಚೀಟಿಯನ್ನು ವಿತರಿಸಲಾಗುವುದು. 2023ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ 2023ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ಕ್ಕೆ 18 ವರ್ಷ ತುಂಬುವ ಯುವ ಮತದಾರರು ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಇದರಿಂದ 18 ವರ್ಷಗಳನ್ನು ಪೂರೈಸಿದ ಯುವಕರು ನೋಂದಣಿಗಾಗಿ ಮುಂದಿನ ವರ್ಷದವರೆಗೆ ಕಾಯುವ ಅಗತ್ಯವಿಲ್ಲ. ಅವರಿಗೆ ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾವಣೆಗೆ ಅವಕಾಶ ಸಿಗಲಿದೆ.

ಮೊದಲು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಒಂದು ಕ್ಷೇತ್ರದಿಂದ ಮತ್ತೊಂದು ವಿಧಾನ ಸಭಾ ಕ್ಷೇತ್ರಕ್ಕೆ ಮತದಾರರ ವರ್ಗಾವಣೆಗಾಗಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದನ್ನು ಪರಿಷ್ಕರಿಸಿ ನಮೂನೆ-6 ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭಿಸಿದ ರಾಜ್ಯ ಚುನಾವಣೆ ಆಯೋಗ

ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಜೋಡಣೆ ಮಾಡಿ ದೃಢೀಕರಿಸಲು ಅವಕಾಶ ನೀಡಲಾಗಿದೆ. ಇದು ಮತದಾರರಿಗೆ ಸ್ವಯಂಪ್ರೇರಿತ ಅವಕಾಶವಿದ್ದು, ಒಂದು ವೇಳೆ ಆಧಾರ್ ಮಾಹಿತಿ ಒದಗಿಸಲು ಸಾಧ್ಯವಾಗದಿದ್ದಲ್ಲಿ ಉಳಿದ ಈ ಕೆಳಗಿನ 11 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಒದಗಿಸಿ 2022ರ ಆಗಸ್ಟ್ 1 ರಿಂದ 2023ರ ಮಾರ್ಚ್ 31ರ ಒಳಗೆ ದೃಢೀಕರಿಸಲು ಅವಕಾಶ ಕಲಿಸಲಾಗಿದೆ.

1. ಮನ್ರೇಗಾ ಉದ್ಯೋಗ ಕಾರ್ಡ್ 
2. ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ನೀಡಿದ ಭಾವಚಿತ್ರವಿರುವ ಪಾಸ್ ಪುಸ್ತಕ 
3. ಕಾರ್ಮಿಕ ಮಂತ್ರಾಲಯದ ಯೋಜನೆಯಡಿಯಲ್ಲಿ ನೀಡಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ 
4. ವಾಹನ ಚಾಲನಾ ಪರವಾನಗಿ
5. ಪಾನ್ ಕಾರ್ಡ್ 
6. ಎನ್‌ಪಿಆರ್ ಅಡಿಯಲ್ಲಿ ಆರ್ ಜಿ ಐ ಮೂಲಕ ನೀಡಲಾದ ಸ್ಮಾರ್ಟ್‌ ಕಾರ್ಡ್
7. ಇಂಡಿಯನ್ ಪಾಸ್ ಪೋರ್ಟ್
8. ಭಾವಚಿತ್ರವಿರುವ ಪಿಂಚಣಿ ದಾಖಲೆ
9. ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆಗಳು, ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಿಚಿತ್ರವಿರುವ ಸೇವಾ ಗುರುತಿನ ಚೀಟಿ.
10. ಸಂಸತ್ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
11. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) 

ನಿಮಗೆ ಏನು ಅನ್ನಿಸ್ತು?
0 ವೋಟ್