
- ರಾಜಕೀಯದಲ್ಲಿ ಸಂಚಲನ ಮೂಡಿಸಿದ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ
- ಚಿಲುಮೆ ಸಂಸ್ಥೆಯಲ್ಲಿ ಸಿಸಿಬಿ ತಂಡದಿಂದ ಡಿಲೀಟ್ ಆಗಿರುವ ಡೇಟಾ ರಿಟ್ರೀವ್
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ದೂರು ಆಧರಿಸಿ ಪೊಲೀಸರು ಶುಕ್ರವಾರ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣದ ಸಂಬಂಧ ಮಲ್ಲೇಶ್ವರಂನಲ್ಲಿರುವ ಚಿಲುವೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೇಲೆ ಪೊಲೀರು ದಾಳಿ ಮಾಡಿದ್ದಾರೆ. ಹಲಸೂರು ಗೇಟ್ ಪೊಲೀಸರಿಂದ ದಾಳಿ ನಡೆದಿದ್ದು, ಚಿಲುಮೆ ಕಚೇರಿಯನ್ನು ಪರಿಶೀಲಿಸಿದ್ದಾರೆ.
ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ಚಿಲುವೆ ಸಂಸ್ಥೆ ವಿರುದ್ಧ ಹಲಸೂರುಗೇಟ್ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣೆ ಪೊಲೀಸರು ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಪಿಎಸ್ ಐ ಕುಮಾರ್, ಹೆಡ್ ಕಾನ್ ಸ್ಟೇಬಲ್ ರಾಮಕೃಷ್ಣ ಹಾಗು ಏಳು ಜನರ ತಂಡ ಚಿಲುಮೆ ಕಚೇರಿಯನ್ನು ಪರಿಶೀಲಿಸುತ್ತಿದೆ.
ಚಿಲುಮೆ ಸಂಸ್ಥೆಯ ಸಿಬ್ಬಂದಿಗಳಾದ ರೇಣುಕಾಪ್ರಸಾದ್, ಧರ್ಮೇಶ್, ಸುಧಾಕರ್ ಹಾಗೂ ರಕ್ಷಿತ್ ಎಂಬುವರು ಬಂಧನಕ್ಕೆ ಒಳಗಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ.
ಈ ಸುದ್ದಿ ಓದಿದ್ದೀರಾ? ನಮ್ಮ ಅವಧಿಯಲ್ಲಿ ಮತದಾರರ ಮಾಹಿತಿ ದುರ್ಬಳಕೆ ಮಾಡಿದ್ದರೆ ನಮ್ಮನ್ನೂ ಬಂಧಿಸಲಿ: ಡಿ ಕೆ ಶಿವಕುಮಾರ್
ಡಿಲೀಟ್ ಆಗಿರುವ ಡೇಟಾ ರಿಟ್ರೀವ್
ಸಿಸಿಬಿ ಟೆಕ್ನಿಕಲ್ ತಂಡ ಕೂಡ ಚಿಲುಮೆ ಸಂಸ್ಥೆಯ ಕಚೇರಿಗೆ ಭೇಟಿ ನೀಡಿದೆ. ಚಿಲುಮೆ ಕಚೇರಿಯ ಕಂಪ್ಯೂಟರ್ನಲ್ಲಿರುವ ಡೇಟಾ ಪರಿಶೀಲನೆ ಮಾಡುತ್ತಿದ್ದು, ಸಿಸಿಬಿ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ನೇತೃತ್ವದ ತಂಡ ಡಿಲೀಟ್ ಆಗಿರುವ ಡೇಟಾ ರಿಟ್ರೀವ್ ಮಾಡುತ್ತಿದೆ ಎನ್ನುವ ಮಾಹಿತಿ ಸದ್ಯಕ್ಕೆ ತಿಳಿದುಬಂದಿದೆ.
ವರದಿಯಲ್ಲಿ ಸ್ಫೋಟಕ ಮಾಹಿತಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ಸ್ಫೋಟಕ ಮಾಹಿತಿಗಳು ಇದೆ ಎನ್ನಲಾಗಿದೆ. ರಾಜಧಾನಿಯ ವಿಧಾನಸಭಾ ಕ್ಷೇತ್ರದಲ್ಲಿ ಮತದಾರ ಕಾರ್ಡ್ ಪರಿಷ್ಕರಣೆಯಲ್ಲಿ ಅಕ್ರಮ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣೆಗೆ ಆಯೋಗ ಈ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿಗೆ ಸೂಚಿಸಿತ್ತು.
ಚಿಲುಮೆ ಸಂಸ್ಥೆಗೆ ವೋಟರ್ ಐಡಿ, ಆಧಾರ್ ಲಿಂಕ್ ಮಾಡುವ ಹೊಣೆ ನೀಡಲಾಗಿತ್ತು. ಉಚಿತವಾಗಿ ಜೋಡಣೆ ಮಾಡುವುದಾಗಿ ‘ಚಿಲುಮೆ’ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಚಿಲುಮೆ ಸಂಸ್ಥೆಗೆ ವೋಟರ್ ಐಡಿ ಮತ್ತು ಆಧಾರ್ ಲಿಂಕ್ ಮಾಡುವ ಜವಾಬ್ದಾರಿ ನೀಡಲಾಗಿತ್ತು ಎಂದು ಚುನಾವಣೆ ಆಯೋಗಕ್ಕೆ ಬಿಬಿಎಂಪಿ ತಿಳಿಸಿದೆ.
ಮಹದೇವಪುರ ವಲಯದ ಆರ್ಒ ಸಸ್ಪೆಂಡ್
ಬೆಂಗಳೂರಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಬಿಎಂಪಿ, ಇದೀಗ ಮಹದೇವಪುರ ವಲಯದ ಆರ್ಒ ಚಂದ್ರಶೇಖರ್ ಅವರನ್ನು ಸಸ್ಪೆಂಡ್ ಮಾಡಿದೆ.