ಮಂಡ್ಯ | ಎಫ್‌ಆರ್‌ಪಿ ದರ ₹3050 ಸಾಕಾಗುವುದಿಲ್ಲ, ಹೆಚ್ಚುವರಿ ದರ ನಿಗದಿ ಮಾಡಿ: ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಪ್ರತಿಭಟನಾನಿರತ ಮಂಡ್ಯ ರೈತರಿಗೆ ಸಿದ್ದರಾಮಯ್ಯ ಬೆಂಬಲ
  • ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಮಾಜಿ ಸಿಎಂ
  • ಸಿದ್ದರಾಮಯ್ಯ ಮನವಿಗೆ ಸ್ಪಂದಿಸದ ಸಕ್ಕರೆ ಖಾತೆ ಸಚಿವ

ಮಂಡ್ಯದಲ್ಲಿ ರೈತರು ಕಬ್ಬಿಗೆ ನ್ಯಾಯೋಚಿತ ಮತ್ತು ಲಾಭದಾಯಕ ದರ ನಿಗದಿ ಮಾಡಬೇಕು ಎಂದು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಿದರು. 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರು ಕಬ್ಬು ಬೆಳೆಗೆ ದರ ನಿಗದಿ ಸೇರಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ.

Eedina App

ರೈತರೊಂದಿಗೆ ಚರ್ಚಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, "ಈ ಹಿಂದೆ ರೈತರ ನಿಯೋಗ ಬಂದು ನನ್ನನ್ನು ಭೇಟಿ ಮಾಡಿ ಕಬ್ಬಿಗೆ ದರ ನಿಗದಿ ಕುರಿತು ಸರ್ಕಾರದ ಮೇಲೆ ಒತ್ತಡ ತನ್ನಿ ಎಂದು ಮನವಿ ಮಾಡಿತ್ತು. ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ" ಎಂದರು.

"ರೈತರ ಕಬ್ಬಿಗೆ ಈಗ ಕೊಡುತ್ತಿರುವ ಎಫ್‌ಆರ್‌ಪಿ ದರ ₹3050 ಸಾಕಾಗುವುದಿಲ್ಲ. ಹಲವು ವರ್ಷಗಳಿಂದ ಒಂದೇ ದರ ಇದೆ. ಉಳುಮೆ, ಬಿತ್ತನೆ ಬೀಜ, ಗೊಬ್ಬರ ಹೀಗೆ ಎಲ್ಲದರ ಬೆಲೆ ಹೆಚ್ಚಾಗಿದೆ. ಹಾಗಾಗಿ ರೈತರು ಬೆಳೆಯುವ ಕಬ್ಬಿಗೆ ದರ ಹೆಚ್ಚಳ ಮಾಡಿ ರೈತರ ಸಂಕಷ್ಟ ವಿವರಿಸಿದ್ದೇನೆ. ಅಲ್ಲದೆ, ವಿಧಾನಸಭೆಯಲ್ಲೂ ಪ್ರಸ್ತಾಪ ಮಾಡಿ ಸರ್ಕಾರದ ಗಮನ ಸೆಳೆಯುತ್ತೇನೆ" ಎಂದು ಅವರು ಭರವಸೆ ನೀಡಿದರು. 

AV Eye Hospital ad

ಈ ಸುದ್ದಿ ಓದಿದ್ದೀರಾ? ಕಬ್ಬು ಬೆಳೆಗೆ ದರ ನಿಗದಿ -2 | ಎಸ್‌ಎಪಿ, ಎಫ್‌ಆರ್‌ಪಿ ಎಂದರೇನು? ರೈತರಿಗೆ ಆಗುತ್ತಿರುವ ದ್ರೋಹವೇನು?

ಅಲ್ಲದೆ, "ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಜೊತೆಗೂ ಮಾತನಾಡಿದ್ದೇನೆ. 2013ರಲ್ಲಿ ನಮ್ಮ ಸರ್ಕಾರ ಇದ್ದಾಗ ಸಕ್ಕರೆ ದರ ಕುಸಿದಿತ್ತು. ಆಗ ರೈತರಿಗೆ ಸರ್ಕಾರದಿಂದ ಬೆಂಬಲ ಬೆಲೆ ₹300 ಕೊಟ್ಟಿದ್ದೇವೆ. ನೀವು ಕಾರ್ಖಾನೆಯವರನ್ನು ಸಭೆ ಕರೆದು ದರ ನಿಗದಿ ಮಾಡಿ ಎಂದು ಹೇಳಿದ್ದೆ. ಆದರೆ, ಇದುವರೆಗೂ ಅವರು ಆ ಬಗ್ಗೆ ಚಿಂತಿಸಿಲ್ಲ. ಡಿ.12ಕ್ಕೆ ಅಧಿವೇಶನ ಆರಂಭವಾಗಲಿದೆ. ಆದರೆ, ಅದಕ್ಕಿಂತ ಮುಂಚೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ" ಎಂದು ಸಿದ್ದರಾಮಯ್ಯ ತಿಳಿಸಿದರು. 

ಮಾಜಿ ಸಚಿವರುಗಳಾದ ಡಾ ಎಚ್ ಸಿ ಮಹಾದೇವಪ್ಪ, ಆತ್ಮಾನಂದ ಸಹ ಧರಣಿ ನಿರತ ರೈತರನ್ನು ಭೇಟಿ ಮಾಡಿ ಬೆಂಬಲ ನೀಡಿದ್ದಾರೆ. ಅಲ್ಲದೆ, ನಾಗಮಂಗಲ ತಾಲೂಕಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app