ಮಂಡ್ಯ | ತಮಿಳುನಾಡು ಮೀನುಗಾರರು ಮತ್ತು ಕರ್ನಾಟಕ ಅರಣ್ಯಾಧಿಕಾರಿಗಳ ನಡುವಿನ ಕಲಹಕ್ಕೆ ಅಂತ್ಯ

Fishing
  • ಅರಣ್ಯಾಧಿಕಾರಿಗಳು ಮೀನುಗಾರರ ತೆಪ್ಪ ಮತ್ತು ಬಲೆ ಹಾನಿ ಮಾಡಿದ್ದಾರೆಂಬ ಆರೋಪ
  • ಗಡಿಯಲ್ಲಿರುವ ಚೆಕ್ ಪೋಸ್ಟ್‌ಗೆ ಮುತ್ತಿಗೆ ಹಾಕಿದ ಮೀನುಗಾರರು

ಕಾವೇರಿ ನದಿಯಲ್ಲಿ ಗಡಿದಾಟಿ ಕರ್ನಾಟಕ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೀನುಗಾರರು ಮತ್ತು ಕರ್ನಾಟಕದ ಅರಣ್ಯಾಧಿಕಾರಿಗಳ ನಡುವಿನ ಕಲಹ ಶುಕ್ರವಾರ ಅಂತ್ಯ ಕಂಡಿದೆ.

"ಕಾವೇರಿ ನದಿಯಲ್ಲಿ ರಾಜ್ಯದ ಗಡಿದಾಟಿ ಮೀನುಗಾರಿಕೆ ಮಾಡಿದ್ದಕ್ಕಾಗಿ ಕರ್ನಾಟಕ ಅರಣ್ಯಾಧಿಕಾರಿಗಳು ತಮ್ಮ ಮೀನುಗಾರಿಕಾ ಬಲೆಗಳು ಮತ್ತು ತೆಪ್ಪಗಳನ್ನು ಹಾನಿ ಮಾಡಿದ್ದರು" ಎಂದು ತಮಿಳುನಾಡು ಮೀನುಗಾರರು ಬುಧವಾರ ಆರೋಪಿಸಿದ್ದರು.

ಬುಧವಾರದಿಂದ ಮೂರು ದಿನಗಳ ಕಾಲ ಮೀನುಗಾರರು ಮತ್ತು ಅರಣ್ಯಾಧಿಕಾರಿಗಳ ನಡುವೆ ವಾಗ್ವಾದಗಳು ನಡೆದಿತ್ತು. ಕರ್ನಾಟಕ ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿ 200ಕ್ಕೂ ಹೆಚ್ಚು ಮೀನುಗಾರರು  ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಚೆಕ್ ಪೋಸ್ಟ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.

ಈ ಸುದ್ದಿ ಓದಿದ್ದೀರಾ?: ಅತ್ಯಾಚಾರ ಪ್ರಕರಣದ ಅತ್ಯುತ್ತಮ ತನಿಖೆಗಾಗಿ ಸಿಐಡಿ ಶಂಕರ್‌ಗೆ ಕೇಂದ್ರ ಗೃಹ ಸಚಿವರ ಪದಕ

“ಮೆಟ್ಟೂರು ಮೀನುಗಾರರು ಕಾವೇರಿ ನದಿಯ ಗಡಿ ದಾಟಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಮೀನುಗಾರಿಕೆ ಚಟುವಟಿಕೆಗಳಿಗೆ ನಾಡ ಬಾಂಬ್‌ಗಳನ್ನು ಬಳಸುತ್ತಿದ್ದಾರೆ” ಎಂದು ಕರ್ನಾಟಕ ಅರಣ್ಯಾಧಿಕಾರಿಗಳು ಆರೋಪಿಸಿದ್ದಾರೆ.

“ಮೆಟ್ಟೂರು, ಕೊಳತ್ತೂರ್ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳ ಮೀನುಗಾರರು ಮೀನುಗಾರಿಕೆ ಮಾಡಲು ಕಾವೇರಿ ನದಿಗೆ ಹೋಗಿದ್ದಾರೆ. ಕೆಲವೊಮ್ಮೆ ಕಣ್ಣು ತಪ್ಪಿ ಗಡಿದಾಟುತ್ತೇವೆ. ಅದಕ್ಕೆ ಬಲೆ ಮತ್ತು ತೆಪ್ಪವನ್ನು ಹಾನಿ ಮಾಡುವ ಅಗತ್ಯವಿರಲಿಲ್ಲ” ಎಂದು ಮೀನುಗಾರರಲ್ಲಿ ಒಬ್ಬರಾದ ಎಂ ಗೋಪಾಲ್ ಹೇಳಿದ್ದಾರೆಂದು ಪತ್ರಿಕೆಯೊಂದು ಉಲ್ಲೇಖಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್