
- ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಮುಂದುವರಿದ ರೈತ ಸಮರ
- ಸರ್ಕಾರಿ ವ್ಯವಸ್ಥೆಗಳಿಗೆ ಕೃಷಿ ಉತ್ಪನ್ನಗಳನ್ನೇ ಖರೀದಿಸಬೇಕೆಂದು ಆಗ್ರಹ
ರಾಜ್ಯದಲ್ಲಿ ರೈತರು ಬೆಳೆಯುವ ಪ್ರತಿ ಟನ್ ಕಬ್ಬಿಗೆ ₹4,500 ದರ ನಿಗದಿ ಮಾಡಬೇಕು, ಕಾರ್ಖಾನೆಗಳು ಹಳೆ ಬಾಕಿ ಪಾವತಿಸಬೇಕು ಎನ್ನುವುದೂ ಸೇರಿದಂತೆ ರೈತರ ನಾನಾ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಧರಣಿಗೆ ಎರಡನೇ ದಿನ ಪೂರೈಸಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಬಡಗಲಪುರ ಬಣ) ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಮಂಗಳವಾರ ಸಂಘಟನೆಯ ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ, ಹಬ್ಬದ ಮಾರನಹಳ್ಳಿ, ಹಂಪಾಪುರ, ಕೆಬ್ಬಳ್ಳಿಗಳ ಮಹಿಳಾ ಘಟಕಗಳ ರೈತ ಮಹಿಳೆಯರು ಭಾಗವಹಿಸಿದ್ದರು. ಅಲ್ಲದೆ, ನಂಜನಗೂಡು, ಮೈಸೂರು ಸೇರಿದಂತೆ ಹಲವೆಡೆಯಿಂದ ಬಂದ ರೈತರು ಹೋರಾಟದಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡಿದರು.
"ಕೆಆರ್ಎಸ್ ಸುತ್ತ-ಮುತ್ತ 20ಕಿಮೀ ವ್ಯಾಪ್ತಿಯಲ್ಲಿ ಹಾಗೂ ಕೆಆರ್ಎಸ್ಗೆ ಸಂಪರ್ಕ ಕಲ್ಪಿಸುವ ಎಲ್ಲ ನಾಲೆಗಳ ಒಂದು ಕಿಮೀ ಅಂತರದಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧ ಮಾಡಿ ಕನ್ನಂಬಾಡಿ ಅಣೆಕಟ್ಟನ್ನು ಉಳಿಸಬೇಕು. ವಿದ್ಯುತ್ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾದ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಹಾಗೂ ಖಾಸಗೀಕರಣ ರದ್ದುಪಡಿಸಬೇಕು" ಎಂದು ರೈತರು ಆಗ್ರಹಿಸುತ್ತಿದ್ದಾರೆ.
"ರಾಜ್ಯದಲ್ಲಿ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಫಲಾನುಭವಿಗಳಿಂದ ವಿದ್ಯುತ್ ಬಾಕಿಯನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ಕೈಬಿಡಬೇಕು. ಕರ ನಿರಾಕರಣೆ ಸಂದರ್ಭದಲ್ಲಿ ಉಳಿಸಿಕೊಂಡಿರುದ ಗೃಹ ವಿದ್ಯುತ್ ಬಾಕಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ರೈತರು ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಕೈಬಿಟ್ಟು ಏಕರೂಪದ ವಿದ್ಯುತ್ ಸರಬರಾಜು ಮಾಡುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು" ಎಂದು ಹಕ್ಕೊತ್ತಾಯ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ʼರೈತರ ಹಿತ ಕಾಯದ ಸರ್ಕಾರ, ಸಚಿವರು, ಶಾಸಕರು ಎಮ್ಮೆ ಕಾಯಲಷ್ಟೇ ಲಾಯಕ್ಕುʼ
ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಮಾತನಾಡಿ, "ರಾಜ್ಯ ಸರ್ಕಾರ ರೈತರ ಕೃಷಿ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಈ ಹೋರಾಟ ನಿರಂತರವಾಗಿ ನಡೆಯಲಿದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ" ಎಂಬ ಸ್ಪಷ್ಟ ನಿಲುವನ್ನು ಪ್ರಕಟಿಸಿದ್ದಾರೆ.

ಪ್ರತಿಭಟನಾನಿರತ ರೈತರು ಆಗ್ರಹಿಸುತ್ತಿರುವ ಬೇಡಿಕೆಗಳ ಪಟ್ಟಿ ಹೀಗಿದೆ:
- ಆಹಾರ ಪದಾರ್ಥಗಳ ಮೇಲೆ ಹಾಗೂ ಬೆಲ್ಲಕ್ಕೆ ವಿಧಿಸಿರುವ ಜಿಎಸ್ಟಿ ಕೈಬಿಡಬೇಕು
- ಈಗಾಗಲೇ ಕೇಂದ್ರ ಸರ್ಕಾರವು ಮೂರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆದಿದ್ದು, ಅದರ ಭಾಗವಾಗಿಯೇ ತಂದಿರುವ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ರದ್ದುಪಡಿಸಬೇಕು
- ಡಾ ಸ್ವಾಮಿನಾಥನ್ ವರದಿ ಪ್ರಕಾರ ರೈತರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಶಾಸನಬದ್ಧಗೊಳಿಸಬೇಕು
- ಮ೦ಡ್ಯ ಹಾಲು ಒಕ್ಕೂಟದಲ್ಲಿ ನಡೆದಿರುವ ನೀರು ಹಾಲು ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಲೆ ನೀಡಲಾಗುವುದಿಲ್ಲ ಎನ್ನುವ ಮನ್ಮುಲ್ ಹೊಸದಾಗಿ ನೇಮಕಾತಿ ಮಾಡುವುದಕ್ಕೆ ಸರ್ಕಾರ ಅವಕಾಶ ನೀಡಬಾರದು
- ಕೊಳ್ಳೇಗಾಲದ ಜಾಗೇರಿಯ ಹಾಗೂ ರಾಜ್ಯಾದ್ಯಂತ ಇರುವ ಬಗರ್ ಹುಕುಂ ಸಾಗುವಳಿದಾರರಿಗೆ ಬಗರ್ ಹುಕುಂ ದರಖಾಸ್ತು ಸಮಿತಿ ರಚಿಸಿ ಸಾಗುವಳಿ ಪತ್ರ ನೀಡಬೇಕು ಮತ್ತು ಆರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕಿರುಕುಳ ತಪ್ಪಿಸಬೇಕು
- ಕೃಷಿ ಉತ್ಪನ್ನ ಖರೀದಿ ಕೇಂದ್ರಗಳನ್ನು ಕಾಯಂ ಆಗಿ ತೆರೆಯಲು ಹಾಗೂ ಸಕಾಲದಲ್ಲಿ ಬೆಂಬಲ ಬೆಲೆಯಡಿ ಆಹಾರ ಉತ್ಪನ್ನಗಳನ್ನು ಖರೀದಿಸಿ ಹಣ ಪಾವತಿಸಬೇಕು
- ಸರ್ಕಾರಿ ವಸತಿ ಗೃಹ, ಬಿಸಿಯೂಟ, ವಿದ್ಯಾರ್ಥಿ ನಿಲಯಗಳು, ಜೈಲು, ಇತರೆ ಸರ್ಕಾರಿ ವ್ಯವಸ್ಥೆಗಳಿಗೆ ರಾಜ್ಯದಲ್ಲಿನ ಕೃಷಿ ಉತ್ಪನ್ನಗಳನ್ನೇ ಖರೀದಿಸಬೇಕು