ಮಂಗಳೂರು | ಶ್ರೀರಾಮ ಸೇನೆಯ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ; ಮೂವರ ಬಂಧನ

Urwa Police Station
  • ರಸ್ತೆ ಬದಿ ಮದ್ಯ ಸೇವನೆ ಮಾಡುತ್ತಾ ಹರಟೆ ಹೊಡೆಯುತ್ತಿದ್ದ ತಂಡ
  • ರಾತ್ರಿ ವೇಳೆ ಬೀಟ್ ಕರ್ತವ್ಯಕ್ಕೆ ತೆರಳಿದ್ದ ಉರ್ವ ಠಾಣಾ ಪೊಲೀಸರ ಮೇಲೆ ಹಲ್ಲೆ

ಮಂಗಳೂರು ನಗರದ ಉರ್ವ ಚಿಲಿಂಬಿಗುಡ್ಡೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಕರ್ತವ್ಯ ನಿರತರಾಗಿದ್ದ ಇಬ್ಬರು ಪೊಲೀಸರ ಮೇಲೆ ತಂಡವೊಂದು ದಾಳಿ ನಡೆಸಿ, ಹಲ್ಲೆ ನಡೆಸಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸಿರುವುದಾಗಿ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಚಿಲಿಂಬಿಗುಡ್ಡೆ ನಿವಾಸಿಗಳಾದ ದುರ್ಗೇಶ್, ಪ್ರಜ್ವಿತ್, ರಕ್ಷಿತ್ ಬಂಧಿತರು. ಆರೋಪಿಗಳು ಶ್ರೀರಾಮ ಸೇನೆಯ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಪೊಲೀಸ್‌ ಸಿಬ್ಬಂದಿ ವೆಂಕಟೇಶ್ ಮತ್ತು ಧನಂಜಯ್ ಘಟನೆಯಲ್ಲಿ ಗಾಯಗೊಂಡಿದ್ದು, ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

"ಉರ್ವ ಪೊಲೀಸ್ ಠಾಣೆಯ ಸಿಬ್ವಂದಿ ತಡರಾತ್ರಿ 1.30ರ ವೇಳೆಗೆ ಚಿಲಿಂಬಿಗುಡ್ಡೆ  ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಸುಮಾರು 8 ಮಂದಿ ಯುವಕರ ತಂಡ ರಸ್ತೆ ಬದಿ ಮದ್ಯಪಾನ ಸೇವನೆ ಮಾಡುತ್ತಾ ಹರಟೆ ಹೊಡೆಯುತ್ತಿದ್ದರು. ಈ ಸಂದರ್ಭ ಪೊಲೀಸರು ವಿಚಾರಣೆ ನಡೆಸಿದ್ದು, ಇದರಿಂದ ತಗಾದೆ ತೆಗೆದ ಪಾನಮತ್ತ ಯುವಕರ ತಂಡ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಇಬ್ಬರು ಪೊಲೀಸರಿಗೆ ತಂಡ ಹಲ್ಲೆ ಮಾಡಿದ್ದಲ್ಲದೆ, ಒಬ್ಬಾತ ಪೊಲೀಸರ ಮೇಲೆ ಬೈಕ್ ಚಲಾಯಿಸಲು ಯತ್ನಿಸಿದ್ದಾನೆ. ಬಳಿಕ ತಂಡ ಅಲ್ಲಿಂದ ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app