ಮಂಗಳೂರು| ಶಿಕ್ಷಣ ಸಚಿವರ ರಾಜೀನಾಮೆಗೆ ಸಿಎಫ್‌ಐ ಆಗ್ರಹ

  • ಶಾಲಾ ಮಕ್ಕಳ ಸಮವಸ್ತ್ರದಲ್ಲಿಯೂ ಭ್ರಷ್ಟಾಚಾರ ಆರೋಪ
  • ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರ

ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ವಿತರಿಸುವ ಸಮವಸ್ತ್ರದಲ್ಲಿಯೂ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸೋಮವಾರ ಸಿಎಫ್‌ಐ ಪ್ರತಿಭಟನೆ ನಡೆಸಿತು.

ಮಂಗಳೂರಿನ ಮಿನಿ ವಿಧಾನಸೌಧ ಎದುರು ನಡೆದ ಪ್ರತಿಭಟನೆ ವೇಳೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಾದಿಕ್ ಜಾರತ್ತಾರ್ ಮಾತನಾಡಿ,  "ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಸಮವಸ್ತ್ರದಲ್ಲಿ ಬಹು ಕೋಟಿ ಹಗರಣ ಬೆಳಕಿಗೆ ಬಂದಿದೆ. ಇದು ಶಿಕ್ಷಣ ಸಚಿವರ ಕಮಿಷನ್ ದಂಧೆಯಾಗಿದೆ" ಎಂದು ಆರೋಪಿಸಿದರು. 

"ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಒಂದಿಲ್ಲೊಂದು ವಿಚಾರ ತೆಗೆದುಕೊಂಡು ಚೆಲ್ಲಾಟವಾಡುತ್ತಿದೆ. ಆರ್‌ಟಿಇ ಕಾಯ್ದೆಯಡಿ ಬರುವ ವಿದ್ಯಾರ್ಥಿಗಳಿಗೆ 2019ರ ಹೈಕೋರ್ಟ್‌ ಆದೇಶದಂತೆ ಶಾಲಾ ಮಕ್ಕಳಿಗೆ ಹೊಲಿದ ಸಮವಸ್ತ್ರ ನೀಡಬೇಕೆಂದು ಹೇಳಿದೆ. ಈ ಹಿಂದೆ ಖಾಸಗಿ ಸಂಸ್ಥೆಗಳ ಮೂಲಕ 230 ರೂಪಾಯಿಗೆ ಎರಡು ಜೊತೆ ಸಮವಸ್ತ್ರದ ಜೊತೆಗೆ ಟೈ, ಶೂ, ಸಾಕ್ಸ್‌ಗಳನ್ನು ಶಾಲಾ ಅಭಿವೃದ್ದಿ ಸಮಿತಿ (ಎಸ್‌ಡಿಎಂಸಿ) ವತಿಯಿಂದ ವಿತರಿಸಲಾಗಿತ್ತು. ಇದರಿಂದ ಸ್ಥಳೀಯರಿಗೂ ವ್ಯಾಪಾರವಾಗುತ್ತಿತ್ತು. ಆದರೆ ಸರ್ಕಾರ ಈ ಬಾರಿ ಸರ್ಕಾರ ಕಮಿಷನ್‌ ದಾಹಕ್ಕೆ ಬಿದ್ದು ಮಹಾರಾಷ್ಟ್ರ ಮೂಲದ ಕಂಪನಿಗೆ ಶಾಲಾ ಸಮವಸ್ತ್ರ ಹೊಲಿಯುವ ಟೆಂಡರ್‌ ನೀಡಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ತಾಜುದ್ದೀನ್, ಕಾರ್ಯದರ್ಶಿ ಸಂಶುದ್ದೀನ್, ಮಂಗಳೂರು ನಗರಾಧ್ಯಕ್ಷ ಶರ್ಫುಧ್ಧೀನ್ ಬಜ್ಪೆ, ಕಾರ್ಯದರ್ಶಿ ಹಫೀಝ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೋಡಿ, ಸರ್ಫರಾಝ್ ಹಾಗೂ ಜಿಲ್ಲಾ ನಾಯಕಿ ಶಝ್ಮ, ಅಝ್ಶೀನ ಉಪಸ್ಥಿತರಿದ್ದರು.

AV Eye Hospital ad

ಉಡುಪಿಯಲ್ಲೂ ಪ್ರತಿಭಟನೆ
ಇದೇ ವಿಚಾರವಾಗಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿತು. ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಮುಖಂಡರಾದ ನವಾಜ್ ಶೇಖ್, ಉಡುಪಿ ಜಿಲ್ಲಾ ಜೊತೆ ಕಾರ್ಯದರ್ಶಿ ನಿದಾ, ಉಡುಪಿ ಜಿಲ್ಲಾ ಕಾರ್ಯದರ್ಶಿ ಸಾದಿಕ್ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯರು ಮತ್ತು ಸಿಎಫ್ಐ ಕಾರ್ಯಕರ್ತರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app