ಮಂಗಳೂರು | ಯಾವ ಪಕ್ಷಕ್ಕೂ ಸೇರದ, ರಕ್ತದಾನಿ, ಸ್ನೇಹಶೀಲ ಫಾಝಿಲ್‌ ಹತ್ಯೆಯಾಗಿದ್ದು ಯಾಕೆ?

ಫಾಝಿಲ್ ಒಬ್ಬ ರಕ್ತದಾನಿ. ಕಾಲೇಜಿನಲ್ಲಿದ್ದಾಗಲೇ 14 ಬಾರಿ ರಕ್ತದಾನ ಮಾಡಿದ್ದ. ಹಲವು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದ. ಆತ ಯಾವ ಪಕ್ಷದ ಕಾರ್ಯಕರ್ತನೂ ಆಗಿರಲಿಲ್ಲ. ಯಾವ ಸಂಘಟನೆಯ ಬೆಂಬಲಿಗನೂ ಆಗಿರಲಿಲ್ಲ. ಇಂಥ ಫಾಝಿಲ್ ಯಾಕೆ ಕೊಲೆಗಡುಕರ ಟಾರ್ಗೆಟ್ ಆದ ಎನ್ನುವುದೇ ಆತನ ಸಂಬಂಧಿಕರು, ಸ್ನೇಹಿತರಿಗೆ ಬಗೆಹರಿಯದ ಪ್ರಶ್ನೆಯಾಗಿದೆ.
Surathkal Fazil

ಕಳೆದ ಜುಲೈ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ನಡೆದ ಮೊಹಮ್ಮದ್‌ ಫಾಝಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್ ಶಶಿಕುಮಾರ್‌ ಮಾಹಿತಿ ನೀಡಿದ್ದಾರೆ. ಜೊತೆಗೆ, ಈ ಆರೋಪಿಗಳು ಒಬ್ಬರಿಗೊಬ್ಬರು ಮುಖತಃ ಪರಿಚಯವಿರಲಿಲ್ಲ. ಸ್ನೇಹಿತರ ಮೂಲಕ ಪರಿಚಯ ಮಾಡಿಕೊಂಡು ಕೊಲೆ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಪಿಗಳೆಲ್ಲ ಜೊತೆಗೂಡಿ ಕೊಲೆ ಮಾಡಲು ಫಾಝಿಲ್‌ನನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವುದು ಈಗ ಫಾಝಿಲ್‌ನನ್ನು ಬಲ್ಲವರು ಕೇಳುತ್ತಿರುವ ಪ್ರಶ್ನೆ. ಆರಂಭದಲ್ಲಿ ಸುರತ್ಕಲ್‌ನಲ್ಲಿ ಬೇರೆಯವರನ್ನು ಹತ್ಯೆ ಮಾಡಲು ಹೋಗಿ ಫಾಜಿಲ್ ಕೊಲೆ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಹಂತಕರು ಫಾಝಿಲ್‌ಗೇ ಗುರಿ ಇಟ್ಟಿದ್ದರು. ಕೃತ್ಯಕ್ಕೆ ಮೊದಲು ಚರ್ಚೆಯ ವೇಳೆ ಆರರಿಂದ ಏಳು ಜನಕ್ಕೆ ಹೊಡೆಯುವ ಬಗ್ಗೆ ನಿರ್ಧರಿಸಿ, ಅಂತಿಮವಾಗಿ ಫಾಝಿಲ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

Eedina App
Fazil Murder case

ಫಾಝಿಲ್‌ ಯಾವುದೇ ಸಂಘಟನೆಯ ಸದಸ್ಯನಾಗಿರಲಿಲ್ಲ. ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಾಗಿರಲಿಲ್ಲ. ಇಂಥ ಹಿನ್ನೆಲೆಯ ಫಾಝಿಲ್‌ ಯಾಕೆ ಕೊಲೆಗಡುಕರ ಟಾರ್ಗೆಟ್ ಆಗಿದ್ದ ಅನ್ನುವುದೇ ಈಗ ಯಕ್ಷಪ್ರಶ್ನೆಯಾಗಿದೆ. 

ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರನ್ನು ಸಂಪರ್ಕಿಸಿದಾಗ, "ಫಾಝಿಲ್ ರಕ್ತದಾನ ಮಾಡುತ್ತಾ, ತನ್ನಿಂದಾದ ಸಮಾಜ ಸೇವೆ ಮಾಡಿಕೊಂಡಿದ್ದ ಯುವಕ. ಒಂದು ಕೆಳಮಧ್ಯಮ ವರ್ಗದ ಕುಟುಂಬದ ಕುಡಿ. ತನ್ನ ಊರಿನಲ್ಲಾಗಲಿ ಅಥವಾ ಬೇರೆ ಊರಿನಲ್ಲಾಗಲಿ ಗಲಭೆ, ಗಲಾಟೆಯಲ್ಲಿ ಫಾಝಿಲ್‌ ಯಾವತ್ತೂ ಭಾಗವಹಿಸಿದವನಲ್ಲ. ಯಾವುದೇ ಘಟನೆಯಲ್ಲಿ ಆತನ ಹೆಸರು ಕೇಳಿಬಂದಿರಲಿಲ್ಲ. ಆರೋಪಿಗಳು ಫಾಝಿಲ್‌ಗೇ ಗುರಿ ಇಟ್ಟಿದ್ದರು ಎಂದು ಪೊಲೀಸರು ಇಂದು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಯಾರಿಗೂ ಕೇಡು ಬಗೆಯದೆ ತನ್ನಷ್ಟಕ್ಕೆ ತಾನು ಬದುಕುತ್ತಿದ್ದ ಫಾಝಿಲ್‌ನನ್ನು ಕೊಲೆಗೈದಿರುವುದು ನಿಜಕ್ಕೂ ದುರದೃಷ್ಟಕರ. ಇದು ಸಮಾಜದ ಹಾದಿ ತಪ್ಪಿಸುವ ಕೆಲಸ" ಎಂದು ಹೇಳಿದರು.

AV Eye Hospital ad

"ಫಾಝಿಲ್ ಹತ್ಯೆ ಪ್ರಕರಣದ ಬಗ್ಗೆ ನಿಷ್ಪಕ್ಷವಾದ ತನಿಖೆಯಾಗಬೇಕು. ಇದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ನಡೆದ ಕೊಲೆ. ಆರೋಪಿಗಳು ಕೇವಲ ಮೂರು ದಿನಕ್ಕೆ ಕಾರಿನ ಬಾಡಿಗೆ 15 ಸಾವಿರ ನೀಡುವುದಾಗಿ ಕಾರಿನ ಮಾಲೀಕನ ಬಳಿ ತಿಳಿಸಿದ್ದಾಗಿ ಈಗ ಪೊಲೀಸರೇ ತಿಳಿಸಿದ್ದಾರೆ. ಜೊತೆಗೆ ಕೆಲವು ರೆಸ್ಟೋರೆಂಟ್‌ಗಳಲ್ಲಿ ಊಟ, ತಿಂಡಿ, ಮದ್ಯ ಸೇವಿಸಿದ್ದಾರೆ. ಇದಕ್ಕೆಲ್ಲ ಅವರಿಗೆ ಸಹಾಯ ನೀಡಿದವರು, ಆರ್ಥಿಕ ನೆರವು ನೀಡಿದವರು ಯಾರು? ಇದನ್ನೆಲ್ಲ ಪೊಲೀಸರು ಸರಿಯಾಗಿ ತನಿಖೆ ನಡೆಸಬೇಕು. ಆರೋಪಿಗಳನ್ನು ಸರಿಯಾಗಿ ವಿಚಾರಣೆ ನಡೆಸಿದರೆ ಇದರ ಹಿಂದಿರುವ ದೊಡ್ಡ ದೊಡ್ಡ ಹೆಸರುಗಳು ಹೊರಬೀಳಬಹುದು. ಆದ್ದರಿಂದ ಮಂಗಳೂರಿನ ಪೊಲೀಸರು ಇದರ ಹಿಂದಿನ ಸತ್ಯಾಸತ್ಯತೆಯನ್ನು ಮುಚ್ಚಿಡದೆ ಬಹಿರಂಗಗೊಳಿಸಬೇಕು. ಮಂಗಳೂರಿನ ಪೊಲೀಸರು ಮತ್ತು ತನಿಖಾಧಿಕಾರಿಗಳು ಸ್ಥಳೀಯ ರಾಜಕೀಯ ಒತ್ತಡಕ್ಕೆ ಮಣಿಯದೆ, ಫಾಝಿಲ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು" ಎಂದು ಮೊಯ್ದಿನ್ ಬಾವಾ ಆಗ್ರಹಿಸಿದರು. 

fazil murder case
ದ.ಕ. ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದ ವೇಳೆ ಫಾಝಿಲ್

 
ಆತ ಒಬ್ಬ ರಕ್ತದಾನಿಯಾಗಿದ್ದ: ಫಾಝಿಲ್ ಸಂಬಂಧಿ ನಿಸಾರ್ ಉಳ್ಳಾಲ

ಫಾಝಿಲ್ ಹತ್ಯೆ ಸಂಬಂಧ ಈ ದಿನ. ಕಾಮ್ ಜೊತೆಗೆ ಮಾತನಾಡಿದ ವಿದೇಶದಲ್ಲಿರುವ ಫಾಝಿಲ್ ಸಂಬಂಧಿ ನಿಸಾರ್ ಉಳ್ಳಾಲ, "ಫಾಝಿಲ್ ನನ್ನ ಕುಟುಂಬದ ಸಂಬಂಧಿಯಾಗಿದ್ದ. ಯಾರಿಗಾದರೂ ನೆರವು ನೀಡುವ ವಿಷಯದಲ್ಲಿ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಆತ ಯಾರೇ ಕರೆದರೂ ಹಿಂದೆ ಮುಂದೆ ಯೋಚಿಸದೆ ಎಲ್ಲರಿಗೂ ತನ್ನಿಂದಾದ ನೆರವು ನೀಡುತ್ತಿದ್ದ. ಅಷ್ಟೊಂದು ಕ್ರಿಯಾಶೀಲ ವ್ಯಕ್ತಿತ್ವ ಅವನದು. ಮಂಗಳೂರಿನ ಕಾಲೇಜಿನಲ್ಲಿ ಕಲಿಯುವಾಗ ದಕ್ಷಿಣ ಕನ್ನಡದ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದ. ಆಗಿನಿಂದಲೇ ಆತ ರಕ್ತದಾನ ಮಾಡಲು ಆರಂಭಿಸಿದ್ದ. ನನ್ನ ನೆನಪಿನ ಪ್ರಕಾರ, ನಮ್ಮ 'ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ'ದ ಮೂಲಕ ನಾನು ಹೇಳಿದ್ದಕ್ಕೆ ನಾಲ್ಕು ಬಾರಿ ರಕ್ತದಾನ ಮಾಡಿದ್ದ" ಎಂದು ನೆನಪಿಸಿಕೊಂಡರು.

"ಕಾಲೇಜಿನಲ್ಲಿ ಕಲಿಯುವಾಗಲೇ 14 ಬಾರಿ ರಕ್ತದಾನ ಮಾಡಿದ್ದ ಎಂಬುದು ನನಗೆ ಆತನ ಸ್ನೇಹಿತರಿಂದ ತಿಳಿದುಬಂತು. ತಾನು ಕೊಲೆಯಾದ ಸುರತ್ಕಲ್ ಜಂಕ್ಷನ್‌ನಲ್ಲೇ ಫಾಝಿಲ್ ಮಹೇಂದ್ರ ಕುಮಾರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಬ್ಲಡ್ ಕ್ಯಾಂಪ್‌ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ. ಆತ ತನ್ನ ಸಂಗಡಿಗರೊಂದಿಗೆ ಸೇರಿ ರಕ್ತದಾನದ ಮೂಲಕ ಹಲವರ ಪ್ರಾಣ ರಕ್ಷಣೆ ಮಾಡಿದ್ದ. ಅನೇಕ ರಕ್ತದಾನ ಕ್ಯಾಂಪ್‌ಗಳನ್ನು ಸಂಘಟಿಸಿದ್ದ. ಆದರೆ, ಅದರ ಬಗ್ಗೆ ನಿಖರ ಅಂಕಿ ಅಂಶ ತನಗೆ ಲಭ್ಯವಿಲ್ಲ" ಎಂದರು.

"ಜೀವನ ನಿರ್ವಹಣೆಗಾಗಿ ಎಂಆರ್‌ಪಿಎಲ್‌ನ ಗ್ಯಾಸ್ ಏಜೆನ್ಸಿಯಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದ. ಒಂದು ಟ್ರಿಪ್‌ನಲ್ಲಿ 900₹ ಯಷ್ಟು ದುಡಿಯುತ್ತಿದ್ದ. ಫೈರ್ ಆಂಡ್ ಸೇಫ್ಟಿ ಕೋರ್ಸ್ ಮುಗಿಸಿದ ಬಳಿಕ ವಿದೇಶದಲ್ಲಿ ದುಡಿಯುವ ಇಚ್ಛೆ ಇದ್ದಿದ್ದರಿಂದ ನಾನೇ ಒಂದೆರಡು ಬಾರಿ ಅವನಿಗೆ ಕೆಲಸದ ವೀಸಾ ಪಡೆಯಲು ಸಹಕರಿಸಿದ್ದೆ. ಎಷ್ಟೇ ಹುಡುಕಿದರೂ ಫಾಝಿಲ್ ಹತ್ಯೆಯಾಗಿರುವುದಕ್ಕೆ ಕಾರಣವೇ ಸಿಗಲ್ಲ. ಯಾಕೆಂದರೆ, ಆತ ಯಾರೊಬ್ಬರೊಂದಿಗೂ ದ್ವೇಷ ಕಟ್ಟಿಕೊಂಡಿದ್ದು ನಮಗೆ ತಿಳಿದಿಲ್ಲ. ಹಂತಕರು ಪ್ರವೀಣ್ ಕೊಲೆಗೆ ಪ್ರತೀಕಾರವಾಗಿಯೇ ಕೊಲೆ ಮಾಡಿದ್ದಾರೆ. ಯಾರೂ ಸಿಗದ್ದಕ್ಕೆ ನೋಡಲು ದಷ್ಟಪುಷ್ಟವಾಗಿದ್ದ ಫಾಝಿಲ್ ಮೇಲೆ ಯದ್ವಾತದ್ವಾ ತಲವಾರು ಬೀಸಿ, ರಕ್ತದ ಕೋಡಿ ಹರಿಸಿದ್ದಾರೆ. ಆತನನ್ನೇ ಟಾರ್ಗೆಟ್ ಮಾಡಿದ್ದಾರೆ ಎಂಬುದನ್ನು ನಾವು ನಂಬೋದಿಲ್ಲ. ರಕ್ತದಾನದ ಮೂಲಕ ಕೈಲಾದ ಮಟ್ಟಿಗೆ ಜನರ ಪ್ರಾಣ ರಕ್ಷಿಸುತ್ತಿದ್ದ ಫಾಝಿಲ್‌ನನ್ನೇ ರಕ್ತದ ಮಡುವಿನಲ್ಲಿ ಬೀಳುವಂತೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ. ವಿದೇಶದಲ್ಲಿದ್ದರೂ ನನಗೆ ಇದನ್ನು ಮರೆಯಲಾಗುತ್ತಿಲ್ಲ. ಹತ್ಯೆಯ ಹಿಂದಿರುವವರನ್ನು ಬಯಲಿಗೆ ತರಬೇಕು" ಎಂದು ತಮ್ಮ ನೋವನ್ನು ಈ ದಿನ.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.

ಪೊಲೀಸರು ಹೇಳುವ ಪ್ರಕಾರ, ಆರೋಪಿಗಳು ಫಾಝಿಲ್‌ನನ್ನೇ ಯಾಕೆ ಟಾರ್ಗೆಟ್ ಮಾಡಿದ್ದರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಬೆಳ್ಳಾರೆ ಪ್ರವೀಣ್ ಘಟನೆ ನಡೆದ ನಂತರ ಯಾರಿಗಾದರೂ ಹೊಡೆಯಬೇಕೆಂದು ಅವರು ನಿರ್ಧರಿಸಿದ್ದರು. ಆದರೆ, ಪ್ರವೀಣ್ ಕೊಲೆಗೆ ಪ್ರತೀಕಾರಕ್ಕಾಗಿಯೇ ಫಾಝಿಲ್ ಹತ್ಯೆ ನಡೆದಿದೆ ಎಂಬುದನ್ನು ಈಗ ಸ್ಪಷ್ಟವಾಗಿ ಹೇಳಲಾಗದು ಎಂದು ಕಮಿಷನರ್ ಹೇಳಿಕೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app