ಮಾವು ಸಂಕಷ್ಟ| ಅಕಾಲಿಕ ಮಳೆ, ಕೀಟ ಬಾಧೆ: ಪರಿಹಾರ ಸಿಗದೆ ಕಂಗಾಲಾದ ಮಾವು ಬೆಳೆಗಾರ

  • 'ಹೂಜಿ' ಕೀಟ ಬಾಧೆಯಿಂದಾಗಿ ಮಾವು ಬೆಳೆ ನಾಶ
  • ನಿಗಮದಿಂದ ‘ಮೋಹಕ ಬಲೆ’ ಎಂಬ ಕೀಟ ನಾಶಕ

ರಾಜ್ಯದಲ್ಲಿ ಈ ವರ್ಷ ಅಕಾಲಿಕ ಮಳೆ ಹಾಗೂ ಕೀಟ ಬಾಧೆಯಿಂದಾಗಿ ಮಾವು ಬೆಳೆ ನಾಶವಾಗಿದೆ. ಒಂದು ಕಡೆ ಫಸಲು ನಾಶವಾದರೆ, ಮತ್ತೊಂದು ಕಡೆ ನಡುಬೇಸಿಗೆಯಲ್ಲೇ ಮಳೆ ಹಿಡಿದುಕೊಂಡಿದ್ದರಿಂದ ಮಾವು ಕೊಳ್ಳುವವರೂ ಇಲ್ಲದಂತಾಗಿದೆ. ಹಾಗಾಗಿ ಈ ಬಾರಿ ರಾಜ್ಯದ ಮಾವು ಬೆಳೆಗಾರರಿಗೆ ಎರಡೆರಡು ರೀತಿಯಲ್ಲಿ ಸಂಕಷ್ಟ ಎದುರಾಗಿದೆ.

ಇಂತಹ ಸಂಕಷ್ಟದ ಹೊತ್ತಲ್ಲಿ ಬೆಳೆಗಾರರ ನೆರವಿಗೆ ಬರಬೇಕಾಗಿದ್ದ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆಗಳು ಏನು ಮಾಡಿವೆ ಎಂಬುದನ್ನು ಗಮನಿಸಿದರೆ ಆಘಾತವೆನಿಸದೇ ಇರದು!

2019ರಲ್ಲಿ ಕೀಟ ಬಾಧೆಯಿಂದ ಮಾವು ಬೆಳೆ ನಾಶವಾಗಿತ್ತು. ಬೆಳೆ ನಾಶವಾದ ರೈತರಿಗೆ ಎಕರೆಗೆ ₹10,000 ಪರಿಹಾರ ಧನ ನೀಡಲು ಸರ್ಕಾರ ಹೇಳಿತ್ತು. ಆದರೆ ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ ಎಂಬುದು ಮಾವು ಬೆಳೆಗಾರರ ಆರೋಪವಾಗಿದೆ.

ಮಾವು ಬೆಳೆಗಾರರಿಗೆ ಪರಿಹಾರ ನೀಡದ ಸರ್ಕಾರ

ಈ ದಿನ.ಕಾಮ್‌ ಜತೆ ಮಾತನಾಡಿದ ಗೌರಿಬಿದನೂರು ತಾಲೂಕಿನ ಮಾವು ಬೆಳಗಾರ ಅಶ್ವಥನಾರಾಯಣ, “ನಾನು 13 ವರ್ಷದಿಂದ ಮಾವು ಬೆಳೆಯುತ್ತಿದ್ದು, 18 ಎಕರೆ ಮಾವು ತೋಟವಿದೆ. ಅಕಾಲಿಕ ಮಳೆ ಮತ್ತು ‘ಹೂಜಿ’ ಕೀಟ ಬಾಧೆಯಿಂದ ಮುಕ್ಕಾಲು ಭಾಗ ಮಾವು ಬೆಳೆ ನಾಶವಾಗಿದೆ. ಪ್ರತಿ ವರ್ಷ ಈ 'ಹೂಜಿ' ಕೀಟ ಬಾಧೆ ಇರುತ್ತದೆ. ಆದರೆ ಈ ವರ್ಷ ಜಾಸ್ತಿಯಾಗಿದೆ. ಮಾವಿನಕಾಯಿ ಎಲ್ಲ ಉದುರಿಹೋಗುತ್ತಿದೆ. ಈ ವರ್ಷ 15 ಲಕ್ಷ ನಷ್ಟವಾಗಿದೆ" ಎಂದು ತಮ್ಮ ಅಳಲು ತೋಡಿಕೊಂಡರು.

“ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ. ಎರಡು ವರ್ಷಗಳ ಹಿಂದೆ ಮಾವು ಬೆಳೆ ನಾಶವಾಗಿದ್ದಕ್ಕೆ, ಸರ್ಕಾರ ಒಂದು ಎಕರೆಗೆ ₹10,000 ಪರಿಹಾರ ಧನ ನೀಡುವುದಾಗಿ ಹೇಳಿತ್ತು. ಆದರೆ ಇಲ್ಲಿಯವರೆಗೂ ನಮಗೆ ಯಾವುದೇ ಪರಿಹಾರ ದೊರೆತಿಲ್ಲ. ಈ ಕೀಟ ಬಾಧೆ ಮೂರು ವರ್ಷದಿಂದ ಇದೆ. ಕಳೆದ ವರ್ಷ ಕೂಡಾ ಮಾವು ಬೆಳೆ ನಾಶವಾಗಿತ್ತು. ಸರ್ಕಾರದಿಂದ ಈ ಹಿಂದೆ ಮಾವು ಬೆಳೆಗಾರರಿಗೆ ‘ಮಾವು ಬಾಕ್ಸ್’ ನೀಡಿತ್ತು. ಆದರೆ ಈ ವರ್ಷ ಇನ್ನೂ ಮಾವು ಬಾಕ್ಸ್ ನೀಡಿಲ್ಲ” ಎಂದು ಹೇಳಿದರು.

ಕೋಲಾರ ಜಿಲ್ಲೆಯ ಮಾವು ಬೆಳೆಗಾರ ಶ್ರೀನಿವಾಸ್ ರೆಡ್ಡಿ ಈ ದಿನ.ಕಾಮ್‌ ಜತೆ ಮಾತನಾಡಿ, “ಅಜ್ಜಂದಿರ ಕಾಲದಿಂದಲೂ ಮಾವು ಬೆಳೆಯುತ್ತಿದ್ದೇವೆ. 6 ಎಕರೆ ಮಾವು ತೋಟ ಇದೆ. ಅಕಾಲಿಕ ಮಳೆಯ ಕಾರಣದಿಂದ ಮಾವು ಬೆಳೆ ನಷ್ಟವಾಗಿದೆ. ಸರ್ಕಾರ ಮಾವು ಬೆಳೆ ನಾಶವಾಗಿದ್ದಕ್ಕೆ, ಪರಿಹಾರ ನೀಡುವುದಾಗಿ ಹೇಳಿತ್ತು. ಆದರೆ, ಇಲ್ಲಿಯವರೆಗೂ ಪರಿಹಾರ ದೊರೆತಿಲ್ಲ. 1 ಟನ್ ಮಾವು ಬೆಳೆ ನಾಶವಾಗಿದೆ. ಕೀಟ ಬಾಧೆ ಇರುವುದಕ್ಕೆ ಪ್ರತಿ ವರ್ಷವೂ ಮಾವು ಕೀಟನಾಶಕ ಸಿಂಪಡಿಸುತ್ತೇವೆ. ಆದರೆ ಕೀಟ ಬಾಧೆ ಇನ್ನು ನಿಂತಿಲ್ಲ. ನಮಗೆ ಯಾವ ವರ್ಷವೂ ಕೂಡ ಸರ್ಕಾರದಿಂದ 'ಮಾವು ಬಾಕ್ಸ್' ಸಿಕ್ಕಿಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮಹಾನಗರ ಮಾವು ಮೇಳ| ಕೆಂಪುತೋಟದಲ್ಲಿ ಮೇಳೈಸಿದ ಥರಾವರಿ ತಳಿಯ ಹಣ್ಣಿನ ರಾಜ!

ಮಾವು ಬೆಳೆ ನಷ್ಟಕ್ಕೆ ಪರಿಹಾರ ಇಲ್ಲ

ಈ ವಿಚಾರವಾಗಿ ಈ ದಿನ.ಕಾಮ್‌ ಜತೆ ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಕೆ ಬಿ ದುಂಡಿ ಮಾತನಾಡಿ, "2019ರ ಲಾಕ್‌ಡೌನ್‌ ಸಮಯದಲ್ಲಿ ಸರ್ಕಾರ ಬೆಳೆ ಪರಿಹಾರ ನೀಡಲು ಹೇಳಿತ್ತು. ಯಾವ ಬೆಳೆಗೆ ಹೆಚ್ಚು ನಷ್ಟವಾಗಿದೆ. ಆ ಬೆಳೆಗಳಿಗೆ ಮಾತ್ರ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಆದರೆ, ಮಾವು ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡಿಲ್ಲ" ಎಂದು ಸ್ಪಷ್ಟಪಡಿಸಿದರು.

"ಪ್ರಮುಖವಾಗಿ ಲಾಕ್‌ಡೌನ್‌ ಸಮಯದಲ್ಲಿ ಹೂವು ಬೆಳೆಗಾರರು ನಷ್ಟ ಅನುಭವಿಸಿದ್ದರು. ತುಂಬಾ ನಷ್ಟ ಅನುಭವಿಸಿದ ಕೆಲವು ಬೆಳೆಗಾರರಿಗೆ ಪ್ರತಿ ಹೆಕ್ಟೇರಿಗೆ 25 ಸಾವಿರ ರೂ. ನೀಡಲಾಗಿದೆ ಮತ್ತು ಕಡಿಮೆ ನಷ್ಟ ಅನುಭವಿಸಿದ ಬೆಳೆಗಾರರಿಗೆ ಪ್ರತಿ ಹೆಕ್ಟೇರಿಗೆ 10,000 ಸಾವಿರ ರೂ. ನೀಡಲಾಗಿದೆ" ಎಂದು ಮಾಹಿತಿ ನೀಡಿದರು.

"ಮಾವು ಕೀಟ ಬಾಧೆಗೆ ಸಂಬಂಧಿಸಿದಂತೆ, ಮೊದಲು ಕೆಳಗೆ ಬಿದ್ದ ಹಣ್ಣನ್ನು ಆಯ್ದು ತೋಟವನ್ನು ಸ್ವಚ್ಚ ಮಾಡಿಕೊಳ್ಳಬೇಕು. ಯಾಕೆಂದರೆ ಬಿದ್ದ ಹಣ್ಣುಗಳು ಕೊಳೆತು ಅಲ್ಲೇ ಹುಳುಗಳು ಹುಟ್ಟುತ್ತವೆ. ಆದ್ದರಿಂದ ತೋಟವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. 'ಹೂಜಿ' ಕೀಟವನ್ನು ಆಕರ್ಷಿಸಲು 'ಫೆರೊಮೆಂಟ್ ಟ್ಯ್ರಾಪ್ಸ್‌'ಗಳನ್ನು ಒಂದು ಎಕರೆಗೆ ಐದರಿಂದ ಆರು ಹಾಕಿದರೆ ಇವು ಗಂಡು ಹುಳುಗಳನ್ನು ಆಕರ್ಷಿಸುತ್ತವೆ. ಆವಾಗ ಹುಳುಗಳನ್ನು ತಡೆಯಬಹುದು. ಈ ವಿಚಾರವಾಗಿ ಮಾವು ಅಭವೃದ್ಧಿ ಮಂಡಳಿಯಿಂದ ಪ್ರತಿಯೊಬ್ಬ ಮಾವು ಬೆಳೆಗಾರರಿಗೂ ಎರಡು ವರ್ಷಗಳಿಂದ ತಿಳಿಸಿದ್ದೇವೆ" ಎಂದು ಹೇಳಿದರು.

"ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಾವು ಬೆಳೆಗಾರರಿಗೆ 'ಮಾವು ಬಾಕ್ಸ್‌' ನೀಡಲಾಗುತ್ತದೆ. ಮಾವು ಬಾಕ್ಸ್‌ನ್ನು ಕೇಂದ್ರ ಸರ್ಕಾರದಿಂದ 25%, ರಾಜ್ಯ ಸರ್ಕಾರದಿಂದ 25% ಸೇರಿ ಒಟ್ಟು 50% ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ" ಎಂದು ತಿಳಿಸಿದರು.

ನಷ್ಟ ಪರಿಹಾರದ ಬಗ್ಗೆ ಗೊತ್ತಿಲ್ಲ: ಮಾವು ಮಂಡಳಿ ಅಧ್ಯಕ್ಷ!

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ ವಿ ನಾಗರಾಜ್ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಮಾವು ಬೆಳೆ ನಷ್ಟವಾಗಿದ್ದಕ್ಕೆ 2019ರಲ್ಲಿ ಸರ್ಕಾರ ಬೆಳೆ ಪರಿಹಾರ ನೀಡಿರುವುದರ ಬಗ್ಗೆ ನನಗೆ ಗೊತ್ತಿಲ್ಲ" ಎಂದರು.

"ಅಕಾಲಿಕ ಮಳೆ ಮತ್ತು ಆಲಿಕಲ್ಲು ಬಿದ್ದಿದ್ದರಿಂದ ಈ ವರ್ಷ ಮಾವು ಬೆಳೆಗಾರರಿಗೆ ನಷ್ಟವಾಗಿದೆ. ಶೇ.30ರಷ್ಟು ಫಸಲು ಇಳವರಿ ಕಡಿಮೆಯಾಗಿದೆ. ಮಾವು ಬೆಳೆ ಬಂದಿಲ್ಲ. ಬಂದಿರುವ ಬೆಳೆ ಕೂಡಾ ಸರಿಯಾಗಿ ಉಳಿದುಕೊಂಡಿಲ್ಲ. ಮಾವು ಬೆಳೆಗಾರರಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಮಾವು ಬೆಳೆಗಾರರ ನಿಗಮದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾವು ಬೆಳೆ ನಾಶದ ಕುರಿತು ಪರಿಹಾರಕ್ಕಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಅವರು ಈ ಬಗ್ಗೆ ಜಿಲ್ಲಾ ತೋಟಗಾರಿಕೆ ಇಲಾಖೆಗಳ ಕಡೆಯಿಂದ ಮಾವು ಬೆಳೆ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರ ತಿರ್ಮಾನ ತೆಗೆದುಕೊಳ್ಳಬೇಕು. ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರದಿಂದ ಮಾವು ಬೆಳೆಗಾರರಿಗೆ 'ಮಾವು ಬಾಕ್ಸ್' ನೀಡಲಾಗುತ್ತಿದೆ” ಎಂದರು.

“ಮಾವು ಅಭಿವೃದ್ಧಿ ನಿಗಮದಿಂದ ಮಾವು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ವೇದಿಕೆ ನೀಡಲಾಗುತ್ತಿದೆ. ದೆಹಲಿ, ಕಲ್ಕತ್ತಾ ಹಾಗೂ ಬಾಂಬೆಯ ವರ್ತಕರೊಂದಿಗೆ ನೇರವಾಗಿ ವ್ಯಾಪಾರ ವಹಿವಾಟು ನಡೆಸಲು ಮಾವು ಬೆಳೆಗಾರರು ಹಾಗೂ ವರ್ತಕರ ನಡುವೆ ಸಂಪರ್ಕ ಕಲ್ಪಿಸಲಾಗಿದೆ. ಆನ್‌ಲೈನ್‌ ಮೂಲಕ ಮಾವು ಹಣ್ಣು ಮಾರಾಟ ಮಾಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಪ್ರತಿದಿನ 3ರಿಂದ 4 ಟನ್ ಮಾವು ಮಾರಾಟವಾಗುತ್ತಿದೆ" ಎಂದರು.

"ಮಾವು ಬೆಳೆಗೆ ಕೆಲವು ವರ್ಷಗಳಿಂದ 'ಹೂಜಿ' ಎಂಬ ಕೀಟ ಬಾಧೆ ಕಾಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ‘ಮೋಹಕ ಬಲೆ’ ಎಂಬ ಕೀಟ ನಾಶಕವನ್ನು ಮಾವು ಅಭಿವೃದ್ಧಿ ನಿಗಮದಿಂದ ಶೇ. 50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ" ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್