
- ಬೆಂಗಳೂರಿನಲ್ಲಿ ಇನ್ನಷ್ಟು ನಿರ್ಬಂಧ ಕ್ರಮ ಜಾರಿ ಸಾಧ್ಯತೆ
- ಬೆಂಗಳೂರಿನಲ್ಲಿ ಕೋವಿಡ್ಗೆ 72 ವರ್ಷದ ಮಹಿಳೆ ಸಾವು
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ನಿರ್ಬಂಧ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಒಂದೆರಡು ದಿನಗಳಲ್ಲಿ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ನಡುವೆ, ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 'ಕಡ್ಡಾಯವಾಗಿ ಮಾಸ್ಕ್' ಧರಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ ಕೆ ಹರೀಶ್ ಕುಮಾರ್ ಸೂಚನೆ ನೀಡಿದ್ದಾರೆ.
ಭಯ ಪಡುವ ಅಗತ್ಯವಿಲ್ಲ: ಸಿಎಂ
“ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಬಗ್ಗೆ ರಾಜ್ಯದ ಪ್ರಧಾನ ಕಾರ್ಯದರ್ಶಿಗಳು ಎಲ್ಲ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತಾರೆ. ಪರಿಸ್ಥಿತಿ ಅವಲೋಕಿಸಿ ಕೋವಿಡ್ ನಿರ್ವಹಣೆ ಸಂಬಂಧಿತ ನಿರ್ಬಂಧ ಕ್ರಮಗಳ ಬಗ್ಗೆ ವರದಿಯನ್ನು ಸಲ್ಲಿಸುತ್ತಾರೆ. ಆ ಬಳಿಕ ಸಭೆ ನಡೆಸಿ ನಿರ್ಬಂಧ ಕ್ರಮಗಳ ಜಾರಿಯ ಬಗ್ಗೆ ಯೋಚಿಸಲಾಗುವುದು" ಎಂದು ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರಿನಲ್ಲಿ ಹೇಳಿದರು.
“ಕೋವಿಡ್ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸರ್ಕಾರ ಈಗಾಗಲೇ ಕೆಲವು ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದು, ಜನರು ಅನಗತ್ಯವಾಗಿ ಗಾಬರಿ ಅಥವಾ ಆತಂಕ ಪಡುವ ಅಗತ್ಯವಿಲ್ಲ" ಎಂದು ಹೇಳಿದರು.
"ಕೋವಿಡ್ ಎರಡನೇ ಅಲೆಯಲ್ಲಿ ಮೃತರಾದ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗಿದೆ. ಯಾರಿಗಾದರೂ ಪರಿಹಾರ ಸಿಗದೇ ಇದ್ದರೇ, ಅವರು ಸರ್ಕಾರದ ಗಮನಕ್ಕೆ ತಂದರೆ ಪರಿಗಣಿಸಲಾಗುವುದು" ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ನಡುವೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿ ಕಾಣುತ್ತಿದೆ. ಭಾನುವಾರ ಕೊರೊನಾದಿಂದ ಮಹಿಳೆಯೊಬ್ಬರು ಸಾವು ಕಂಡಿದ್ದಾರೆ. ಜೊತೆಗೆ ಭಾನುವಾರ 291 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಕೆ ಹರೀಶ ಕುಮಾರ್, ”ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಕಾಣುತ್ತಿವೆ. ಈ ಕಾರಣದಿಂದ ಕಡ್ಡಾಯ ನಿಯಮಗಳನ್ನು ರೂಪಿಸಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ಕೋವಿಡ್ಗೆ ಮಹಿಳೆ ಬಲಿ: ಪ್ರಕರಣ ಏರಿಕೆ, 4ನೇ ಅಲೆಯ ಭೀತಿ
ಮಾಸ್ಕ್ ಎಲ್ಲೆಲ್ಲಿ ಕಡ್ಡಾಯ
“ನಗರದ ಶಾಪಿಂಗ್ ಮಾಲ್ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ. ಹಾಗೂ ಈ ಬಗ್ಗೆ ನಿಗಾ ವಹಿಸಲು ಬಿಬಿಎಂಪಿಯ ಮಾರ್ಷಲ್ಗಳಿಗೆ ಸೂಚಿಸಲಾಗಿದೆ. ಪಾಲಿಕೆಯು ಸರ್ಕಾರದ ಆದೇಶಕ್ಕೆ ಬದ್ಧವಾಗಿರುತ್ತದೆ. ಪ್ರಸ್ತುತ ಮಾಸ್ಕ್ ಧರಿಸದೇ ಇರುವವರಿಗೆ ಯಾವುದೇ ದಂಡವನ್ನು ವಿಧಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
“ಬಿಬಿಎಂಪಿ ಕೋವಿಡ್ ರೋಗ ಲಕ್ಷಣದ ಆಧಾರದ ಮೇಲೆ ಪ್ರಸ್ತುತವಾಗಿ ದಿನಕ್ಕೆ 16,000 ಕೋವಿಡ್ ಪರೀಕ್ಷೆ ಮಾಡುತ್ತಿದ್ದು, ಇದನ್ನು ದಿನಕ್ಕೆ 20,000 ಮಂದಿಗೆ ಹೆಚ್ಚಿಸಲು ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.