ಆದಿಚುಂಚನಗಿರಿ ಶ್ರೀಗಳ ಹೆಗಲ ಮೇಲೆ ಕೈ ಹಾಕಿದ ಸಚಿವ ಅಶೋಕ; ಜಾಲತಾಣಗಳಲ್ಲಿ ಸಚಿವರ ನಡೆಗೆ ವ್ಯಾಪಕ ಟೀಕೆ

 ಆರ್‌ ಅಶೋಕ
  • ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಸದರವೆನಿಸಿದ್ದಾರೆಯೇ?: ಕಾಂಗ್ರೆಸ್‌
  • ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಬಳಿಕ ನಡೆದ ಘಟನೆ

ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅನಾವರಣ ಮಾಡಿದ ಬಳಿಕ ನಡೆದ ಫೋಟೋ ಸೆಷನ್ ವೇಳೆ ಕಂದಾಯ ಸಚಿವ ಆರ್‌ ಅಶೋಕ್‌ ಸ್ವಾಮೀಜಿಗಳ ಹೆಗಲ ಮೇಲೆ ಕೈಹಾಕಿ ನಿಂತಿರುವ ನಡವಳಿಕೆಗೆ  ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. 

ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಮೋದಿ ಅವರು ಪ್ರತಿಮೆ ಉದ್ಘಾಟಿಸಿದ ಬಳಿಕ ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಎಸ್ ಎಂ ಕೃಷ್ಣ, ಸದಾನಂದಗೌಡ ಹಾಗೂ ಇನ್ಫೋಸಿಸ್‌ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ಹಲವು ಬಿಜೆಪಿ ಮುಖಂಡರು, ಸಂಸದರು, ಶಾಸಕರು ಮೋದಿ ಜೊತೆ ಪ್ರತಿಮೆ ಮುಂದೆ ಗ್ರೂಪ್‌ ಪೋಟೋ ತೆಗೆಸಿಕೊಂಡರು. 

Eedina App

ಈ ಸಂದರ್ಭದಲ್ಲಿ ‌ಸಚಿವ ಆರ್‌ ಅಶೋಕ್ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿಯ ಎರಡು ಬುಜದ ಮೇಲೆ ಕೈಯಿಟ್ಟು ಫೋಟೋ ತೆಗೆಯಿಸಿಕೊಂಡಿದ್ದಾರೆ. ಗೌರವಾನ್ವಿತ ಮಠಾಧೀಶರನ್ನು ಹೀಗೆ ನಡೆಸಿಕೊಂಡ ಸಚಿವರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಪ್ರತಿಪಕ್ಷ ಕಾಂಗ್ರೆಸ್ ಕೂಡ ಟ್ವೀಟ್‌ ಮಾಡಿ ಟೀಕಿಸಿದೆ. 

“ಸ್ವಾಮೀಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಆರ್‌ ಅಶೋಕ್‌ ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ? ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ” ಎಂದು ಕಾಂಗ್ರೆಸ್‌ ಹರಿಹಾಯ್ದಿದೆ.

ಇದೇ ಫೋಟೋ ವಿಚಾರಕ್ಕೆ ಬೊಮ್ಮಾಯಿ ಅವರನ್ನು ಪ್ರಶ್ನಿಸಿ ಪ್ರತ್ಯೇಕ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ರಾಜ್ಯದ ಮುಖ್ಯಮಂತ್ರಿ ಫೋಟೋ ತೆಗೆಸಿಕೊಳ್ಳಲೂ ಹರಸಾಹಸಪಡಬೇಕೇ? ಪ್ರಧಾನಿ ಪಕ್ಕ ಸ್ವತಂತ್ರವಾಗಿ ನಿಲ್ಲಲೂ ಬಸವರಾಜ ಬೊಮ್ಮಾಯಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರೆ ಸಿಎಂ ಹುದ್ದೆಗೆ ಆಗುತ್ತಿರುವ ಅವಮಾನವಿದು. ಜಗ್ಗೇಶ್ ಅವರ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ ಗೊಂಬೆಯಾಟದ ಸಿಎಂ ಅವರ ಸ್ಥಿತಿ ಶೋಚನೀಯವಾಗಿದೆ” ಎಂದು ಕಿಚಾಯಿಸಿದೆ.

ನಿಮಗೆ ಏನು ಅನ್ನಿಸ್ತು?
12 ವೋಟ್
eedina app