ಕೋವಿಡ್‌ ಏರಿಕೆ| ತಾಂತ್ರಿಕ ಸಲಹಾ ಸಮಿತಿ ಜೊತೆ ಸಚಿವ ಸುಧಾಕರ ಸಭೆ, ಹೊಸ ನಿರ್ಬಂಧ ಇಲ್ಲ

  • ಪ್ರಸ್ತುತ ಕೋವಿಡ್ ಸೋಂಕು ದೃಢ ಪ್ರಮಾಣ ಶೇ.3ಕ್ಕೆ ಏರಿಕೆ
  • ಕೋವಿಡ್‌ ಪ್ರಕರಣಗಳು ಇದ್ದರೂ ಹೆಚ್ಚಿನ ತೀವ್ರತೆ ಇಲ್ಲ

ರಾಜ್ಯದಲ್ಲಿ ಕೋವಿಡ್ ಮತ್ತು ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಬೆಂಗಳೂರಿನ ಆರೋಗ್ಯಸೌಧದಲ್ಲಿ ಸೋಮವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗಿದೆ. ದೇಶ ವಿದೇಶದಲ್ಲಿ ಕೋವಿಡ್‌ ಸೋಂಕು ಯಾವ ರೀತಿ ಏರಿಕೆಯಾಗಿದೆ ಮತ್ತು ಹೇಗೆ ಇಳಿಕೆಯಾಗಿದೆ ಎಂಬ ಬಗ್ಗೆ ಸಂಪೂರ್ಣ ಚರ್ಚೆ ಮಾಡಲಾಗಿದೆ. ಮೂರು ರಾಜ್ಯಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದೆ" ಎಂದು ಹೇಳಿದರು.

"ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳು ಇದ್ದರೂ ಹೆಚ್ಚಿನ ತೀವ್ರತೆ ಇಲ್ಲ. ಆಸ್ಪತ್ರಗೆ ದಾಖಲಾಗುವವರ ಸಂಖ್ಯೆ ಮತ್ತು ಸಾವು ಕಡಿಮೆಯಾಗಿದೆ. ಸಭೆಯಲ್ಲಿ ಭಾರತದ ಡಬ್ಲು ಎಚ್‌ ಒ(WHO) ಪ್ರತಿನಿಧಿ ಭಾಗಿಯಾಗಿದ್ದರು. ಕಡ್ಡಾಯ ಲಸಿಕೆ ಮಾಡದೇ ಇದ್ದರು, ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಲಸಿಕೆ ಪಡೆಯಬೇಕು. ಕೋವಿಡ್ ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು, ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಆ ಮೂಲಕ ಸೋಂಕು ನಿಯಂತ್ರಣ ತಡೆಯಲು ಸಾಧ್ಯವಿದೆ" ಎಂದರು.

"ಕೋವಿಡ್ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಆತಂಕ ಪಡೆಯುವ ಅಗತ್ಯವಿಲ್ಲ" ಎಂದು ಅವರು ಹೇಳಿದರು.

AV Eye Hospital ad

"ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್ ಆರಂಭಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಸ ರೂಪಾಂತರಿ ತಳಿಗಳ ಪತ್ತೆಗೆ ಲ್ಯಾಬ್‌ನಿಂದ ಸಹಾಯವಾಗುತ್ತದೆ. ಉಳಿದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ” ಎಂದು ಅವರು ವಿವರಿಸಿದರು.

“ಇಲಾಖೆ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕೋವಿಡ್‌ ಸೋಂಕು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ತೀರಾ ಕಡಿಮೆ. ಇದನ್ನು ನಾಲ್ಕನೇ ಅಲೆ ಎಂದು ಹೇಳಲು ಆಗುವುದಿಲ್ಲ, ಸದ್ಯ ಅಲೆಗಳ ಪ್ರಶ್ನೆ ಉದ್ಭವಿಸಿಲ್ಲ. ಹತ್ತು ದಿನಗಳ ಹಿಂದೆ ರಾಜ್ಯದಲ್ಲಿ ಶೇ.1.1ರಷ್ಟಿದ್ದ ಕೋವಿಡ್ ದೃಢ ಪ್ರಮಾಣ(ಪಾಸಿಟಿವಿಟಿ ದರ) ಈಗ ಶೇ.3ಕ್ಕೆ ಹೆಚ್ಚಾಗಿದೆ” ಎಂದು ವಿವರಿಸಿದರು.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾನುವಾರ 21,519 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 463 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಕೋವಿಡ್‌ ದೃಢ ಪ್ರಮಾಣ(ಪಾಸಿಟಿವಿಟಿ ದರ) ಶೇ.2.15ರಷ್ಟಿದೆ. ದಕ್ಷಿಣ ಕನ್ನಡ 14, ಉತ್ತರ ಕನ್ನಡ 6, ಧಾರವಾಡ 4, ಉಡುಪಿ 3, ದಾವಣಗೆರೆ 2, ಬಳ್ಳಾರಿ, ಚಿತ್ರದುರ್ಗ, ಗದಗ, ಹಾಸನ ಹಾಗೂ ರಾಯಚೂರಿನಲ್ಲಿ ತಲಾ ಒಂದು ಹೊಸ ಕೋವಿಡ್‌ ಪ್ರಕರಣ ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಸುದ್ದಿ ಓದಿದ್ದೀರಾ? ಕೋವಿಡ್‌ ಏರಿಕೆ| ಬೆಂಗಳೂರಿನಲ್ಲಿ 545 ಹೊಸ ಪ್ರಕರಣ ದಾಖಲು

ರಾಜ್ಯದಲ್ಲಿ ಈವರೆಗೂ 39.56 ಲಕ್ಷ ಮಂದಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು 40,066 ಮಂದಿ ಮೃತಪಟ್ಟಿದ್ದಾರೆ. ಜೂನ್‌ 12ರಂದು 199 ಜನ ಕೋವಿಡ್‌ನಿಂದ ಗುಣಮುಖರಾಗಿದ್ದು, ಒಟ್ಟು ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 39.12 ಲಕ್ಷಕ್ಕೆ ಏರಿಕೆಯಾಗಿದೆ. ಪ್ರಸ್ತುತ 3,651 ಸಕ್ರಿಯ ಪ್ರಕರಣಗಳು ಇವೆ.

ಬೆಂಗಳೂರಿನಲ್ಲಿ ಹೆಚ್ಚಿದ ಕೋವಿಡ್ ಪ್ರಕರಣಗಳು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ನಗರದಲ್ಲಿ ಕಳೆದ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. 10 ದಿನಗಳ ಹಿಂದೆ ಶೇ.1.1 ಇದ್ದ ಸೋಂಕು ದೃಢ ಪ್ರಮಾಣ ಈಗ ಶೇ.2.61ಕ್ಕೆ ಏರಿಕೆಯಾಗಿದೆ.

ಜೂನ್ 2ರಂದು ನಗರದಲ್ಲಿ 276 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಶೇ.1.54 ಸೋಂಕು ದೃಢ ಪ್ರಮಾಣ ಇತ್ತು. ನಂತರದ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಜೂನ್ 11 ರಂದು ಒಟ್ಟು 545 ಪ್ರಕರಣಗಳು ದಾಖಲಾಗಿವೆ ಹಾಗೂ ಸೋಂಕು ದೃಢ ಪ್ರಮಾಣ ಶೇ.2.55ಕ್ಕೆ ಏರಿಕೆ ಕಂಡಿದೆ. ಜೂನ್ 12ರಂದು 429 ಪ್ರಕರಣಗಳು ದಾಖಲಾಗಿದ್ದು, ಸೋಂಕು ದೃಢ ಪ್ರಮಾಣ ಶೇ.2.61ಕ್ಕೆ ಏರಿಕೆಯಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app