ಮುಂಗಾರು ಕೃಷಿ| ಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಬಿ.ಸಿ ಪಾಟೀಲ್ 

  • ರಾಜ್ಯದಲ್ಲಿ 9.85 ಲಕ್ಷ ಮೆಟ್ರಿಕ್‌ ಟನ್ ರಸ ಗೊಬ್ಬರ ದಾಸ್ತಾನು
  • ಬೇಡಿಕೆಗಿಂತ ಹೆಚ್ಚು ಬಿತ್ತನೆ ಬೀಜ ದಾಸ್ತಾನು ಇದ್ದು, ಕೊರತೆ ಇಲ್ಲ

"ರಾಜ್ಯದಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೆಡೆ ರಸಗೊಬ್ಬರ ಕೊರತೆ ಇದೆ ಎಂದು ಸುದ್ದಿ ಹರಿದಾಡುತ್ತಿದೆ. ಆ ರೀತಿ ಯಾವುದೇ ಕೊರತೆ ಸದ್ಯಕ್ಕೆ ಇಲ್ಲ. ರಸಗೊಬ್ಬರ ಕೃತಕ ಅಭಾವ ಸೃಷ್ಟಿ ಮಾಡಲು ಈ ರೀತಿ ವಿಚಾರ ಹರಿದಾಡಿರಬಹುದು. ಅಂತಹ ವಿಷಯಗಳಿಗೆ ಯಾರು ಕಿವಿಗೊಡಬಾರದು" ಎಂದು ಹೇಳಿದರು.

"ಈಗಾಗಲೇ 7 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಲಾಗಿದೆ. 9,85,000 ಮೆಟ್ರಿಕ್ ಟನ್ ರಸ ಗೊಬ್ಬರ ಪ್ರಸ್ತುತ ದಾಸ್ತಾನು ಇದೆ. ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ ಸೇರಿದಂತೆ ಅಗತ್ಯ ರಸಗೊಬ್ಬರಗಳೆಲ್ಲವೂ ಸರಬರಾಜಾಗುತ್ತಿವೆ. ಕೇಂದ್ರ ಸರ್ಕಾರ 3,60,000 ಮೆಟ್ರಿಕ್ ಟನ್ ಗೊಬ್ಬರವನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ" ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ದುಬಾರಿ ದುನಿಯಾ| ಹೋಟೆಲ್‌ ಉದ್ಯಮದ ಕತ್ತು ಹಿಸುಕುತ್ತಿದೆ ವಾಣಿಜ್ಯ ಸಿಲಿಂಡರ್‌ ದರ ಏರಿಕೆ

"ರೈತರಿಗೆ ಗೊಬ್ಬರದಲ್ಲಿ ಸಬ್ಸಿಡಿ ಕೂಡ ನೀಡಲಾಗುತ್ತಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಸಬ್ಸಿಡಿ ದರ ನೀಡಿದ್ದಾರೆ. ಬಿತ್ತನೆ ಬೀಜದ ಕೊರತೆಯೂ ಇಲ್ಲ. ರಾಜ್ಯದಾದ್ಯಂತ ನಿಗದಿತ ಬೇಡಿಕೆಗಿಂತ ಹೆಚ್ಚು ಬಿತ್ತನೆ ಬೀಜ ದಾಸ್ತಾನಿದ್ದು, ರೈತರು ಈ ವಿಚಾರದಲ್ಲಿ ಆತಂಕ ಪಡಬೇಕಿಲ್ಲ. ಈವರೆಗೂ 2,30,000 ರೈತರಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ಪರಿಹಾರ ನೀಡಲಾಗಿದೆ" ಎಂದು ತಿಳಿಸಿದರು.

ಸ್ಟೀಲ್ ಬ್ರಿಡ್ಜ್ ಹಗರಣ ಏಕೆ ನಿಂತಿತು?
"ಕಾಂಗ್ರೆಸ್ ಮುಖಂಡರು ಮತ್ತು ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲೇ ನಿರತರಾಗಿದ್ದರು. ಅವರು ಕೆಂಪಯ್ಯರನ್ನು ಇಟ್ಟುಕೊಂಡು ಏನೆಲ್ಲಾ ಮಾಡಿದ್ದರು. ಸ್ಟೀಲ್ ಬ್ರಿಡ್ಜ್ ಹಗರಣ ಎಲ್ಲಿಗೆ ಬಂದಿತ್ತು? ಏಕೆ ನಿಂತಿತು?" ಎಂದು ಪಶ್ನಿಸಿದರು.

ಪ್ರಚಾರಕ್ಕಾಗಿ ನಿರಾಧಾರ ಆರೋಪ
"ಭ್ರಷ್ಟಾಚಾರ ನಿಯಂತ್ರಿಸುವುದೇ ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಮುಖ ಉದ್ದೇಶ. ಕಾಂಗ್ರೆಸ್ ನಾಯಕರು ಆಪಾದನೆ ಬಿಟ್ಟರೆ ಬೇರೇನೂ ಹೇಳಿಲ್ಲ. ಪತ್ರಿಕೆಯಲ್ಲಿ ಹೆಸರು ಬರಬೇಕು ಎಂಬ ಏಕೈಕ ಉದ್ದೇಶದಿಂದ ಬಿಜೆಪಿ ಮತ್ತು ಸಚಿವರ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ" ಎಂದು ಆಕ್ಷೇಪ ವ್ಯಕ್ತಪಡಿಸಿದರು.

"ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಚುನಾವಣೆಯಲ್ಲಿ ಜನರು ಬಿಜೆಪಿ ಪರವಾಗಿ ತೀರ್ಪು ನೀಡಲಿದ್ದಾರೆ. ಕಾಂಗ್ರೆಸ್ಸಿನ ಸುಳ್ಳು ಆರೋಪಗಳಿಗೆ ಅವರು ಬೆಲೆ ಕೊಡುವುದಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯತ್ನಾಳ್ ಸಾಕ್ಷಾಧಾರ ನೀಡಬೇಕು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ, “ಯತ್ನಾಳ್ ಕೂಡ ಸಾಕ್ಷಾಧಾರ ನೀಡಬೇಕು. ಚಪಲಕ್ಕೆ ಯಾರ‍್ಯಾರು ಏನೇನೋ ಹೇಳುತ್ತಾ ಇರುತ್ತಾರೆ. ಪಕ್ಷದಲ್ಲಿ ಯಾರ‍್ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ವಲಸೆ ಬಂದಿರುವ ನಾವು ಯಾರು ಬೇಸರವಾಗಿಲ್ಲ. ಬಿಜೆಪಿಗೆ ಬಂದ ಮೇಲೆ ಪಕ್ಷದ ಶಿಸ್ತನ್ನು ನೋಡಿದ್ದೇನೆ. ಪಕ್ಷ ಸಂಘಟನೆ, ಬೂತ್ ಮಟ್ಟದ ಕಾರ್ಯಕ್ರಮ ಎಲ್ಲವನ್ನೂ ನೋಡಿ ಕಲಿತಿದ್ದೇವೆ. ಆದರೆ, ಅದೆಲ್ಲವೂ ಅಲ್ಲಿ (ಕಾಂಗ್ರೆಸ್‍ನಲ್ಲಿ) ಇರಲಿಲ್ಲ. ಅಸಮಾಧಾನ ಎನ್ನುವುದು ಸುಳ್ಳು” ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮತ್ತು ರೈತ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್