ಬೆಂಗಳೂರು ಉಪನಗರ ರೈಲು ಯೋಜನೆ ಹೆಸರಿನಲ್ಲಿ ಮೋದಿ ಪುಕ್ಕಟೆ ಪ್ರಚಾರ: ಎಚ್.ಡಿ.ಕೆ ಕಿಡಿ

  • ಪ್ರಧಾನಿ ಮೋದಿ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ
  • ನಮ್ಮ ಯೋಜನೆಗಳನ್ನು ಇವರದ್ದೆನ್ನಲು ಹಕ್ಕಿದೆಯೇ? ಕುಮಾರಸ್ವಾಮಿ ಪ್ರಶ್ನೆ 

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಬೇರೊಬ್ಬರು ಮಾಡಿದ ಕೆಲಸವನ್ನು ತಮ್ಮದೆಂದು ಬಿಂಬಿಸಿಕೊಂಡು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. 

ಬೆಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, 'ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ ಯೋಜನೆಗಳು ಶುರುವಾಗಿದ್ದು ನನ್ನ ಕಾಲದಲ್ಲಿ. ಆದರೆ, ಇವನ್ನ ನಾನೇ ಆರಂಭ ಮಾಡುತ್ತಿದ್ದೇನೆ ಎಂದು ಅವರು ಭಾಷಣ ಮಾಡಿದ್ದಾರೆ. ಇದು ಮೋದಿ ಅವರ ಚಾಳಿ' ಎಂದು ಕಿಡಿ ಕಾರಿದರು.

'ರಾಜ್ಯಕ್ಕೆ ಎರಡು ದಿನ ಪ್ರಧಾನಿಗಳು ಬಂದಿದ್ದರು. ಅವರ ಆಗಮನದ ಹಿನ್ನೆಲೆಯಲ್ಲಿ ಪ್ರೋಗ್ರೆಸ್ ರಿಪೋರ್ಟ್ ಅನ್ನು ಕೊಡಲಾಗಿದೆ. 33 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು ಎಂದು ಹೇಳುತ್ತಿದ್ದಾರೆ. ಮೋದಿ ಅವರು ತಾವೇ ರೂಪಿಸಿದ ಹೊಸ ಯೋಜನೆಗಳಿಗೆ ಚಾಲನೆ ನೀಡಿದರೋ ಅಥವಾ ಹಿಂದಿನ ಸರ್ಕಾರಗಳು ರೂಪಿಸಿದ್ದ ಯೋಜನೆಗಳಿಗೆ ಚಾಲನೆ ನೀಡಿದರೋ ಎಂಬುದನ್ನು ಬಿಜೆಪಿ ನಾಯಕರು ಜನರಿಗೆ ತಿಳಿಸಬೇಕು' ಎಂದು ಕುಮಾರಸ್ವಾಮಿ ಆಗ್ರಹಿಸಿದರು.

'ಬೆಂಗಳೂರು ತಮ್ಮಿಂದಲೇ ಬೆಳಕು ಕಾಣುತ್ತಿದೆ ಎನ್ನುವಂತೆ ಮೋದಿ ಭಾಷಣ ಮಾಡಿದ್ದಾರೆ. ಉಪನಗರ ರೈಲು ಯೋಜನೆ ಬಗ್ಗೆ ಪ್ರಧಾನಿಗಳು ಮಾತನಾಡಿದ್ದಾರೆ. ಆದರೆ 2018ರಲ್ಲಿ ನಾನು ಅಧಿಕಾರಕ್ಕೆ ಬರುವವರೆಗೆ ಈ ಯೋಜನೆ ಧೂಳು ಹಿಡಿಯುತ್ತಿತ್ತು. ನಾನು 14 ತಿಂಗಳು ಸಿಎಂ ಆಗಿದ್ದಾಗ ರೈಲ್ವೆ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಇದಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರೂ ಸಹಕಾರ ನೀಡಿದ್ದರು' ಎಂದು ಯೋಜನೆ ಅನುಷ್ಠಾನದ ಮಾಹಿತಿ ನೀಡಿದರು.

'2018ರಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ 23,000 ಕೋಟಿ ರೂಪಾಯಿ ಮೊತ್ತದ ಈ ಯೋಜನೆಯನ್ನು ಸಿದ್ಧಪಡಿಸಿಕೊಂಡು ದೆಹಲಿಗೆ ಹೋಗಿ ಅಡಿಗಲ್ಲು ಹಾಕುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದೆ. ಆ ನಂತರ 'ಕೃಷ್ಣಾ' ಕಚೇರಿಯಲ್ಲಿ ಅಂದಿನ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನೇ ಆಹ್ವಾನಿಸಿ ಚರ್ಚೆ ಮಾಡಿದ್ದೆ' ಎಂದು ಕುಮಾರಸ್ವಾಮಿ ಹೇಳಿದರು.

'ಆಗ ಲೋಕಸಭೆ ಚುನಾವಣೆಗೂ ಮುನ್ನ ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆಗೆ ಮುಂದಾಗಿದ್ದ ನನಗೆ ಬಿಜೆಪಿಯವರು ಅಡ್ಡಿಪಡಿಸಿದ್ದರು. ನಂತರದ ರಾಜಕೀಯ ಬದಲಾವಣೆಯಲ್ಲಿ ಅವರೇ ಅಧಿಕಾರಕ್ಕೆ ಬಂದರು. ಆಮೇಲೆ ಮೂರು ವರ್ಷ ಉಪನಗರ ರೈಲು ಯೋಜನೆಯನ್ನು ಬಾಕಿ ಇಟ್ಟರು' ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

'ಆಗಲೇ ಕಾಲಮಿತಿಯಲ್ಲಿ ಉಪನಗರ ರೈಲು ಯೋಜನೆ ಮುಗಿಸಲು ನಾನು ಸಂಪುಟದ ಒಪ್ಪಿಗೆ ತೆಗೆದುಕೊಂಡಿದ್ದೆ. ಅದಕ್ಕೆ ಕೇಂದ್ರ ಸರ್ಕಾರ 19 ಷರತ್ತುಗಳನ್ನು ವಿಧಿಸಿತ್ತು. ಆ ಷರತ್ತುಗಳನ್ನು ನನ್ನ ಸರ್ಕಾರ ಪೂರೈಸಿತ್ತು. ಆದರೆ, ಈಗ ಚುನಾವಣೆ ಬರುತ್ತಿದೆ ಎನ್ನುವ ಕಾರಣಕ್ಕೆ ಬಂದು ಯೋಜನೆಗೆ ಚಾಲನೆ ಕೊಟ್ಟಿದ್ದು, ಕೇವಲ ಚುನಾವಣೆ ಗಿಮಿಕ್ ಅಷ್ಟೇ' ಎಂದು ಅವರು ಕಟುವಾಗಿ ಟೀಕಿಸಿದರು.

ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಬಂದರೂ ಜಿಎಸ್‌ಟಿ ಬರಲಿಲ್ಲ| ರಾಜ್ಯಕ್ಕೆ ಆರ್ಥಿಕ ಬಿಕ್ಕಟ್ಟು ತಪ್ಪಲಿಲ್ಲ

'ನಲವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೇವಲ ನಲವತ್ತು ತಿಂಗಳಲ್ಲಿ ಕಾರ್ಯಗತ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. ಈಗ ಇದು ಅರು ವರ್ಷದ ಕಾರ್ಯಕ್ರಮ ಆಗಿದೆ. ನಾನು ಸಿಎಂ ಆದಾಗ ಎಸ್ ಟಿ ಆರ್ ಆರ್ ಯೋಜನೆ ಕೈಗೊಂಡೆ. ಹೀಗೆ ಅನೇಕ ಯೋಜನೆಗಳಿಗೆ ಚಾಲನೆ ನೀಡಿದೆ. ನಾನು ಚಾಲನೆ ಕೊಟ್ಟ ಹಲವಾರು ಯೋಜನೆಗಳಿಗೆ ಬಿಜೆಪಿಯವರು ಇಂದು ಪ್ರಚಾರ ಪಡೆಯುತ್ತಿದ್ದಾರೆ' ಎಂದು ಎಚ್ ಡಿ ಕೆ ವಾಗ್ದಾಳಿ ನಡೆಸಿದರು.

'ನಲವತ್ತು ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಹೇಳುತ್ತಿರುವ ಇವರು, ಬಜೆಟ್‌ನಲ್ಲಿ ಈ ಯೋಜನೆಗೆ ಮೀಸಲಿಟ್ಟ ಹಣದ ಮೊತ್ತ ಕೇವಲ ಒಂದು ಕೋಟಿ ರೂಪಾಯಿ. ಆಗ ಅರುಣ್ ಜೇಟ್ಲಿ ಅವರು ಕೇಂದ್ರ ವಿತ್ತ ಸಚಿವರಾಗಿದ್ದರು. ಸುಮಾರು 15,000 ಕೋಟಿ ರೂಪಾಯಿ ಯೋಜನೆಯಾದ ಇದಕ್ಕೆ ಈಗ 415 ಕೋಟಿ ರೂಪಾಯಿ ಇಟ್ಟಿದ್ದಾರೆ' ಎಂದು ಕಿಡಿಕಾರಿದರು.

ಇಂದು ಬೆಂಗಳೂರು ನಗರದಿಂದ ಜಿಎಸ್‌ಟಿ, ತೈಲ ಮತ್ತಿತರೆ ತೆರಿಗೆಗಳ ಮೂಲಕ ಅಪಾರ ಹಣಕಾಸು ಸಂಪನ್ಮೂಲವನ್ನು ಕೇಂದ್ರ ಸರ್ಕಾರ ಸಂಗ್ರಹ ಮಾಡುತ್ತಿದೆ. ಆದರೆ, ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ನಮ್ಮ ತೆರಿಗೆ ಹಣವನ್ನು ಪಡೆದು ಕೇಂದ್ರವು ನಮಗೆ ಅನ್ಯಾಯ ಮಾಡುತ್ತಿದೆ' ಎಂದು ಕುಮಾರಸ್ವಾಮಿ ಆರೋಪಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್