ಮಳೆಗಾಲ ಅಧಿವೇಶನ | ಕಂದಾಯ ಇಲಾಖೆಯ ಕಾಗದ ಪತ್ರ ತಿದ್ದಿದರೆ ಕ್ರಿಮಿನಲ್ ಕೇಸ್ ದಾಖಲು: ಕಾರಜೋಳ ಎಚ್ಚರಿಕೆ

Karajola
  • ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಸಚಿವ ಗೋವಿಂದ ಕಾರಜೋಳ ಉತ್ತರ
  • ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ ಸಚಿವರು

ಕಂದಾಯ ಇಲಾಖೆಯ ಕಾಗದ ಪತ್ರಗಳನ್ನು ಅಧಿಕಾರಿಗಳು ತಿದ್ದುಪಡಿ ಮಾಡಿದರೆ ಅಂತಹವರ ವಿರುದ್ಧ  ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಎಚ್ಚರಿಸಿದರು.

ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಸ್ತಾಪಕ್ಕೆ ಉತ್ತರಿಸಿ, “ಅನಧಿಕೃತವಾಗಿ ಹೆಸರು ಬದಲಾವಣೆ ಮಾಡಿಸಿದವರು ಮತ್ತು ಮಾಡಿ ಕೊಟ್ಟವರು ಅಪರಾಧಿಗಳಾಗುತ್ತಾರೆ. ಇಬ್ಬರ ಮೇಲೆಯೂ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಶೂನ್ಯವೇಳೆಯಲ್ಲಿ, “ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮದಲ್ಲಿ ಸರ್ವೇ ನಂಬರ್ 72ರಲ್ಲಿ 15 ಎಕರೆ 10 ಗುಂಟೆ ಜಮೀನನ್ನು ಕೃಷ್ಣ ಭಾಗ್ಯ ಜಲ ನಿಗಮ ಯೋಜನೆಗೆ ತೆಗೆದುಕೊಂಡು ಪರಿಹಾರ ಕೊಟ್ಟಿದ್ದಾರೆ. ಅಲ್ಲಿನ ತಹಶೀಲ್ದಾರ್ ಹಾಗೂ ಅವರ ಸಿಬ್ಬಂದಿ ಸೇರಿ ಭ್ರಷ್ಟಾಚಾರ ಉದ್ದೇಶದಿಂದ ಖಾಸಗಿ ವ್ಯಕ್ತಿಗಳಾದ ಬಸಮ್ಮ ಕೋಂ ಚನ್ನಮಲ್ಲಪ್ಪ ಅದ್ಧೂರಾ ಎಂಬ ಹೆಸರಿನಲ್ಲಿ ಪಹಣಿ ಬದಲಾಯಿಸಿ, ಹೆಸರು ಬದಲಾವಣೆ ಮಾಡಿದ್ದಾರೆ” ಎಂದು ದೂರಿದರು.

“ಆ ರೀತಿ ಪಹಣಿ ಬದಲಾಯಿಸಲು ತಹಶೀಲ್ದಾರ್‌ಗೆ ಯಾವುದೇ ಅಧಿಕಾರ ಇಲ್ಲ. ಸರಿಯಾದ ದಾಖಲೆ ಇದ್ದರೆ ಉಪ ಆಯುಕ್ತರು ಬದಲಾವಣೆ ಮಾಡಬೇಕು. ಈ ಕಾರಣಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ. ಆದರೆ, ತಹಶೀಲ್ದಾರ್‌ನನ್ನು ಸೆಪ್ಟೆಂಡ್ ಮಾಡಿಲ್ಲ. ತಕ್ಷಣ ತಹಶೀಲ್ದಾರ್‌ನನ್ನು ಸಸ್ಪೆಂಡ್ ಮಾಡಿ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು. 

ಈ ವಿಚಾರವಾಗಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿ, “ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಭೂಸ್ವಾಧೀನವನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಬೇಕು. ಹಾಗೇನಾದರೂ ಆಗಿದ್ದರೆ ಖಂಡಿತವಾಗಿಯೂ ಕ್ರಮ ತಗೆದುಕೊಳ್ಳುತ್ತೇವೆ. ತಹಶೀಲ್ದಾರ್ ಅವರನ್ನು ಅಮಾನತು ಮಾಡಲು ತಕ್ಷಣ ಯಾದಗಿರಿ ಜಿಲ್ಲಾಧಿಕಾರಿಗೆ ಸೂಚಿಸುವೆ” ಎಂದರು.

ಈ ಸುದ್ದಿ ಓದಿದ್ದೀರಾ? ಜಿಮ್‌ಗಳಲ್ಲಿ ಪ್ರೊಟೀನ್ ಪೌಡರ್ ಮಾರಾಟದ ಬಗ್ಗೆ ಅಗತ್ಯ ಕಾನೂನು ಕ್ರಮ: ಸಚಿವ ಸುಧಾಕರ್

ಬೆಳಗಾವಿ ಜಿಲ್ಲೆಯ ಕೆಲ ತಾಲೂಕಿನಲ್ಲಿ ರೈತರ ಪಹಣಿಯಲ್ಲಿ ಮಾಲೀಕರ ಹೆಸರ ಬದಲಿಗೆ ಕರ್ನಾಟಕ ನೀರಾವರಿ ನಿಗಮ ಎಂದು ಹೆಸರಿದ್ದು ರೈತರು ಕಂಗಾಲಾಗಿದ್ದಾರೆ ಎಂದು ಕೌಜಲಗಿ ಮಹಾಂತೇಶ್ ಅವರು ಪ್ರಸ್ತಾಪಿಸಿದರು.

ಈ ವಿಚಾರಕ್ಕೂ ಉತ್ತರಿಸಿದ ಕಾರಜೋಳ, “ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 3,26,000 ಎಕರೆ ಭೂಸ್ವಾಧೀನ ಆಗಿದೆ. ಭೂಸ್ವಾಧೀನ ಆದಮೇಲೆ ನೀರಾವರಿ ಇಲಾಖೆ ಅಂತ ಹೆಸರು ಬದಲಾವಣೆ ಆಗೇಕಿತ್ತು. ಅದು ಆಗದೇ ಇರುವುದರಿಂದ 25,000 ಎಕರೆ ಹೊರತುಪಡಿಸಿ 3 ಲಕ್ಷ ಎಕರೆಯಷ್ಟು ರೈತರ ಹೆಸರಿನಲ್ಲಿ ಉಳಿದುಬಿಟ್ಟಿತ್ತು. ಅವರು ಪರಿಹಾರ‌  ತೆಗೆದುಕೊಂಡಿದ್ದರು. ಈಗ 3,26,000 ಎಕರೆಯನ್ನು ದಾಖಲಿ ತಿದ್ದುಪಡಿ ಮಾಡಿ ಕರ್ನಾಟಕ ಸರ್ಕಾರ ನೀರಾವರಿ ನಿಗಮ ಹೆಸರನ್ನು ಮಾಡಿದ್ದೇವೆ” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180