ಮಳೆಗಾಲ ಅಧಿವೇಶನ | ವಕ್ಫ್ ಆಸ್ತಿ ಕಬಳಿಕೆ ಕುರಿತು ಸಿಬಿಐ ತನಿಖೆಯಾಗಲಿ : ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯ

basanagouda patil yatnal
  • ಲೋಕಾಯುಕ್ತ ತನಿಖೆ ನಡೆಸಿ, ಅಕ್ರಮ ಆಗಿದೆ ಅಂತ ವರದಿ: ರಘುಪತಿ ಭಟ್
  • 40 ಕಮಿಷನ್‌ ಆರೋಪ ಮುಚ್ಚಿಹಾಕಲು ಈ ಚರ್ಚೆ ಮುನ್ನಲೆಗೆ: ಖಾದರ್‌ ಕಿಡಿ

ವಕ್ಫ್ ಆಸ್ತಿ ಕಬಳಿಕೆ ಕುರಿತು ಸಿಬಿಐ ತನಿಖೆಯಾಗಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರದ ಅಧಿವೇಶನದಲ್ಲಿ ಒತ್ತಾಯಿಸಿದರು.

ಎಂಟನೇ ದಿನದ ಕಲಾಪದಲ್ಲಿ ಗಮನಸೆಳೆಯುವ ಸೂಚನೆಯಡಿಯಲ್ಲಿ ವಿಚಾರ ಪ್ರಸ್ತಾಪಿಸಿದ ಉಡುಪಿ ಶಾಸಕ ರಘುಪತಿ ಭಟ್ ಅವರು “ವಕ್ಫ್ ಆಸ್ತಿಯಲ್ಲಿ ಎರಡ್ಮೂರು ಲಕ್ಷ ಕೋಟಿ ರೂ. ಅಕ್ರಮವಾಗಿದೆ.  ಲೋಕಾಯುಕ್ತದಲ್ಲಿ ತನಿಖೆ ನಡೆಸಿ, ಅಕ್ರಮ ಆಗಿದೆ ಅಂತ ವರದಿ ಕೊಟ್ಟಿದ್ದಾರೆ. ಇದರ ವಿರುದ್ಧ ಕ್ರಮ ತಗೋಬೇಕು” ಎಂದರು.

ಇದಕ್ಕೆ ಧ್ವನಿಗೂಡಿಸಿದ ಯತ್ನಾಳ್, “ವಕ್ಫ್ ಆಸ್ತಿ ಲೂಟಿ ಮಾಡಿದ್ದಾರೆ. ಆರೇಳು ಕಳ್ಳರ ಬಣ್ಣ ದೇಶದ ಜನರಿಗೆ ಗೊತ್ತಾಗಬೇಕು. ಇದನ್ನು ಸಿಬಿಐ ತನಿಖೆಗೆ ನೀಡಬೇಕು” ಎಂದು ಒತ್ತಾಯಿಸಿದರು.

“ರಾಜ್ಯ ಆಳಿದ ದೊಡ್ಡ ದೊಡ್ಡ ಮುಖಂಡರು ವಕ್ಫ್ ಆಸ್ತಿ ಕಬಳಿಸಿದ್ದಾರೆ. ವಕ್ಫ್ ಆಸ್ತಿ ಕಬಳಿಕೆ ಹಗರಣದ ತನಿಖೆ ಸಿಬಿಐನಿಂದ ಮಾಡಬೇಕು. 2 ಲಕ್ಷ ಕೋಟಿಗೂ ಹೆಚ್ಚು ಅಕ್ರಮವಾಗಿದೆ. ಈ ವಕ್ಫ್ ಅನ್ನು ಈ ದೇಶದಿಂದಲೇ ನಿರ್ಮೂಲನೆ ಮಾಡಬೇಕು” ಎಂದರು.

“ಹಿಂದೂ ಧಾರ್ಮಿಕ ಆಸ್ತಿಗಳನ್ನು ಸರ್ಕಾರ ನಿರ್ವಹಣೆ ಮಾಡುತ್ತದೆ. ಆದರೆ, ವಕ್ಫ್ ಆಸ್ತಿ ಕೆಲವರ ಕೈಗೆ ಸಿಕ್ಕಿ ಕಬಳಿಕೆ ಆಗ್ತಿದೆ. ವಕ್ಫ್‌ನಿಂದ ಸಾಮಾನ್ಯ ಮುಸ್ಲಿಮರಿಗೆ ಪ್ರಯೋಜನ ಇಲ್ಲ. ದೇಶದ್ರೋಹಿ ಮುಖಂಡರುಗಳು ವಕ್ಫ್ ಆಸ್ತಿಯ ಲಾಭ ಪಡೆಯುತ್ತಿದ್ದಾರೆ” ಎಂದು ದೂರಿದರು.

ಮಧ್ಯೆ ಎದ್ದು ನಿಂತ ಯು ಟಿ ಖಾದರ್‌, “ಚರ್ಚೆ ಮಾಡಿ ಬೇಡ ಎನ್ನಲ್ಲ, 40% ಭ್ರಷ್ಟಾಚಾರ ಆರೋಪ ಮುಚ್ಚಿಹಾಕಲು ಈ ಚರ್ಚೆಯನ್ನು ಮುನ್ನಲೆಗೆ ತರಲಾಗಿದೆ” ಎಂದು ಆರೋಪಿಸಿದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “40% ಕಮಿಷನ್ ಆರೋಪದ ಬಗ್ಗೆ ನಾವು ಚರ್ಚೆಗೆ ಸಿದ್ಧ. ಆದರೆ ಇದರಲ್ಲಿ ಯಾರ್ಯಾರ ಹೆಸರು ಬರುತ್ತೆ ಎಂಬುದು ಕಾದು ನೋಡಿ. ವಕ್ಫ್ ಪವಿತ್ರವಾದ ಸರ್ಕಾರಿ ಆಸ್ತಿ ಆದರೆ, ಅದನ್ನು ವಶಕ್ಕೆ ಪಡೆದುಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಏನಿದೆ?” ಎಂದರು.

“ವಕ್ಫ್ ಆಸ್ತಿ ಕುರಿತ ಸಂಪೂರ್ಣ ವರದಿಯನ್ನು ಸದನದಲ್ಲಿ ಮಂಡಿಸ್ತೇವೆ. ವರದಿಯ ಪ್ರತಿಯನ್ನು ಸದಸ್ಯರಿಗೂ ಒಂದೊಂದು ಕೊಡುತ್ತೇವೆ. 2020ರಲ್ಲಿ ವರದಿಯ ಪ್ರಮುಖಾಂಶ ಮಾತ್ರ ಮಂಡನೆ ಆಗಿತ್ತು. ಹೀಗಾಗಿ ಸದನದಲ್ಲಿ ವಕ್ಫ್ ಆಸ್ತಿ ಕುರಿತ ಅನ್ವರ್ ಮಾನ್ಪಾಡಿಯವರ ಸಂಪೂರ್ಣ ವರದಿ ಮಂಡಿಸ್ತೇವೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮಳೆಗಾಲ ಅಧಿವೇಶನ | ಆನೆ ದಾಳಿ: ಬೆಳೆ,ಪ್ರಾಣ ಹಾನಿಗೆ ದುಪ್ಪಟ್ಟು ಪರಿಹಾರ: ಸಿಎಂ ಬೊಮ್ಮಾಯಿ

ಕಾನೂನು ಸಚಿವ ಜೆ ಸಿ‌ ಮಾಧುಸ್ವಾಮಿ ಮಾತನಾಡಿ, “2012 ರಲ್ಲಿ ಅನ್ವರ್ ಮಾನ್ಪಾಡಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು. ಸಾಕಷ್ಟು ಅಕ್ರಮ ಆಗಿರೋ ಬಗ್ಗೆ ಆರೋಪ ಇತ್ತು. 2012 ರಲ್ಲೇ ವರದಿಯೂ ಸಲ್ಲಿಕೆ ಆಯ್ತು. ಉಪ ಲೋಕಾಯುಕ್ತರ ವರದಿಯೂ ಇದರ ಮೇಲೆ ಬಂತು. ಆದ್ರೆ ಕಾಂಗ್ರೆಸ್ ಸರ್ಕಾರ ಈ ವರದಿ ಒಪ್ಪದೇ ತಿರಸ್ಕಾರ ಮಾಡಿತ್ತು. ಕೋರ್ಟ್ ನಿರ್ದೇಶನ ಇದೆ ಅಂತ 2020 ರ ಸೆಪ್ಟೆಂಬರ್‌ನಲ್ಲಿ ಪರಿಷತ್‌ನಲ್ಲಿ ವರದಿ ಮಂಡಿಸಲಾಯಿತು” ಎಂದರು.

ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಉತ್ತರಿಸತ್ತ, "ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವಕ್ಫ್ ವರದಿ ತಿರಸ್ಕಾರವಾಗಿದೆ. ಎರಡೂ ಸದನದಲ್ಲಿ ವರದಿಯನ್ನು ಮಂಡಿಸಬೇಕು ಎಂದು ಕೋರ್ಟ್ ನಿರ್ದೇಶನ ನೀಡಿತ್ತು. ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಸದನದಲ್ಲಿ ಮಂಡಿಸಲಾಗಿತ್ತು. ವರದಿಯನ್ನು ಮತ್ತೆ ಸದನದಲ್ಲಿ ಮಂಡಿಸುವ ಬಗ್ಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಚರ್ಚೆ ಮಾಡಿದ್ದಾರೆ. ವರದಿಯನ್ನು ಮತ್ತೆ ಸದನದಲ್ಲಿ ಮಂಡನೆ ಬಗ್ಗೆ ಸಿಎಂ ತೀರ್ಮಾನ ಪ್ರಕಟಿಸುತ್ತಾರೆ" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180