
- ಪ್ರಶೋತ್ತರ, ಶೂನ್ಯ ವೇಳೆ ಬಳಿಕ ಕಾಯ್ದೆ ಮಂಡನೆಗೆ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವಕಾಶ
- ಮತಾಂತರ ಹೆಸರಲ್ಲಿ ಎಷ್ಟು ಪ್ರಕರಣ ದಾಖಲಾಗಿರುವ ಬಗ್ಗೆ ಸಚಿವರು ಉತ್ತರಿಸಲಿ : ಬಿ ಕೆ ಹರಿಪ್ರಸಾದ್
ವಿಧಾನಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿರುವ ವಿವಾದಿತ ‘ಮತಾಂತರ ನಿಷೇಧ ಕಾಯ್ದೆ’ಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಪರಿಷತ್ ಅಧಿವೇಶನದಲ್ಲಿ ಗುರುವಾರ ಮಂಡಿಸಿದರು.
ಪ್ರಶೋತ್ತರ ಮತ್ತು ಶೂನ್ಯ ವೇಳೆಯ ಬಳಿಕ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಮಂಡನೆಗೆ ಅವಕಾಶ ಕಲ್ಪಿಸಿದರು. ‘ಮತಾಂತರ ನಿಷೇಧ ಕಾಯ್ದೆ’ ಮೇಲೆ ಸುದೀರ್ಘ ಚರ್ಚೆ ನಡೆಯಿತು.
ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಮಂಡಿಸಿದೆ. ಇದು ಮಹತ್ವದ ಕಾಯ್ದೆಯಾಗಿದ್ದು, 2013ರಲ್ಲಿ ಕಾಂಗ್ರೆಸ್ ಸರ್ಕಾರವು ಈ ಕಾಯ್ದೆ ಕುರಿತು ಚಿಂತನೆ ನಡೆಸಿದೆ. ಸಂವಿಧಾನದ ವಿಧಿ25ರ ಪ್ರಕಾರ ಎಲ್ಲರಿಗೂ ತಮ್ಮ ಧಾರ್ಮಿಕ ನಂಬಿಕೆ ಹಾಗೂ ಧರ್ಮದಲ್ಲಿ ಬದುಕುವ ಹಕ್ಕಿದೆ” ಎಂದರು.
“ಸಾಮೂಹಿಕ ಬಲವಂತ ಮತ್ತು ಆಮಿಷದ ಮತಾಂತರ ನಡೆಯುತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇದನ್ನು ತಡೆಯಲು ಈ ಕಾಯ್ದೆಯನ್ನು ಮಂಡಿಸಲಾಗಿದೆ” ಎಂದು ವಿವರಿಸಿದರು.
ನಂತರ ಕಾಯ್ದೆ ಬಗ್ಗೆ ಪರಿಷತ್ತಿನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು. ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡುವೆ ಕಾಯ್ದೆ ಹಾಗೂ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.
ಇದಕ್ಕೂ ಮುನ್ನ ವಿಧೇಯಕ ಮಂಡಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ, “ಧಾರ್ಮಿಕ ಸ್ವಾತಂತ್ರ್ಯವನ್ನು ಈ ಕಾಯ್ದೆ ಕಸಿಯುವುದಿಲ್ಲ. ಬಲ ಪ್ರಯೋಗ, ಅನ್ಯ ಮಾರ್ಗದಲ್ಲಿ ಮತಾಂತರ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮತಾಂತರವಾಗಲು ಯಾವುದೇ ಅಡ್ಡಿಯಿಲ್ಲ. ಆದರೆ ಬಲವಂತ ಹಾಗೂ ಆಮೀಷದ ಮತಾಂತರ ಆಗಬಾರದು ಎಂಬುದಷ್ಟೇ ನಮ್ಮ ಉದ್ದೇಶ. ಅದಕ್ಕಾಗಿಯೇ ಈ ಕಾಯ್ದೆ ಜಾರಿಗೆ ತರಲಾಗಿದೆ” ಎಂದು ಮಾಹಿತಿ ನೀಡಿದರು.
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಪಕ್ಷ ನಾಯಕ ಹರಿಪ್ರಸಾದ್, “ಸಂವಿಧಾನದ ಕಲಂ 25 ರಡಿ ಮೂಲ ಆಶಯದ ಬಗ್ಗೆ ಮಾಹಿತಿ ನೀಡಿ. ಸಂವಿಧಾನ ಮತ್ತು ನ್ಯಾಯಾಲಯದ ತೀರ್ಪಿನ ಅನುಸಾರ ವಿಧೇಯಕ ತಂದಿರುವುದು ಕಾನೂನು ಬಾಹಿರ. ಸಂವಿಧಾನಕ್ಕೆ ತಿದ್ದುಪಡಿಯಾಗಬೇಕಾದರೆ ಸಂಸತ್ತಿನಲ್ಲಿ 3ನೇ 2ರಷ್ಟು ಸಂಖ್ಯಾಬಲ ಇರಬೇಕು. ಇಲ್ಲಿ ಸಂಖ್ಯಾಬಲವಿದೆ ಎನ್ನುವ ಕಾರಣಕ್ಕಾಗಿ ಮಸೂದೆ ಅಂಗೀಕಾರ ಪಡೆದುಕೊಳ್ಳುತ್ತಾರೆ. ನ್ಯಾಯಾಲಯದ ಯಾವ ರೀತಿ ಪರಿಗಣಿಸಲಿದೆ ಎನ್ನುವುದನ್ನು ಕಾದು ನೋಡಬೇಕು” ಎಂದರು.
“ಮತಾಂತರದಿಂದ ಕ್ರೈಸ್ತರ ಜನಸಂಖ್ಯೆ ಹೆಚ್ಚಾಗಿಲ್ಲ. ಬದಲಾಗಿ ಮತಾಂತರ ಹೆಸರಲ್ಲಿ ಎಷ್ಟು ಪ್ರಕರಣ ದಾಖಲಾಗಿವೆ ಎನ್ನುವುದರ ಬಗ್ಗೆ ಸಚಿವರು ಉತ್ತರ ನೀಡಬೇಕು” ಎಂದು ಒತ್ತಾಯಿಸಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಬಲವಂತದ ಮತಾಂತರ ತಡೆಯಲು ಸರ್ಕಾರ ಮುಂದಾಗಿದೆ. ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಬಲವಂತದ ಮತಾಂತರ ತಡೆಯಲು ಕಾಯ್ದೆ ರೂಪಿಸಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಳೆಗಾಲ ಅಧಿವೇಶನ | ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದ ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಚರ್ಚೆಗೆ ಒಪ್ಪಿಗೆ
“ದೇಶದಲ್ಲಿ ಧರ್ಮ ಯುದ್ಧಗಳಿಗೆ ದೊಡ್ಡ ಇತಿಹಾಸವೇ ಇದೆ. ಈ ಹಿಂದೆ ಕ್ರಿಶ್ಚಿಯನ್ ಚರ್ಚ್ಗಳು ಆಳ್ವಿಕೆ ನಡೆಸುತ್ತಿದ್ದವು. ಈಗ ಅದರ ಹಿಡಿತ ತಪ್ಪಿದೆ. ಸಮಾಜವಾದಿಯಾಗಿದ್ದ ಲೋಹಿಯಾ ಅವರು ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದರು” ಎಂದರು.
ಈ ವೇಳೆ ಎದ್ದು ನಿಂತ ಬಿ ಕೆ ಹರಿಪ್ರಸಾದ್, “ಆ ಕಡೆ ಕುಳಿತು ಲೋಹಿಯಾ ವಿಚಾರಗಳ ಬಗ್ಗೆ ಮಾತನಾಡುವುದಲ್ಲ. ಈ ಕಡೆ ಬನ್ನಿ” ಎಂದರು. “ಲೋಹಿಯಾ ಮತ್ತು ಬಸವ ಸಿದ್ಧಾಂತವನ್ನು ನೀವು ಖರೀದಿ ಮಾಡುತ್ತೀರಾ” ಎಂದು ಹರಿಪ್ರಸಾದ್ಗೆ ಬೊಮ್ಮಾಯಿ ತಿರುಗೇಟು ನೀಡಿದರು.
“ಜೆಡಿಎಸ್ನ ಬೋಜೇಗೌಡ ಮಾತನಾಡಿ, “ವಿಧೇಯಕದ ಮೇಲೆ ಹಲವು ಬಾರಿ ಚರ್ಚೆಯಾಗಿದೆ. ಈ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕಾಗಿದೆ” ಎಂದರು.