ಮಗಳನ್ನು ಸಾಕಲು 30 ವರ್ಷ ಪುರುಷನ ವೇಷದಲ್ಲಿ ಬದುಕಿದ ತಾಯಿ

  • ತಮಿಳುನಾಡು ರಾಜ್ಯದ ತೂತುಕುಡಿ ಜಿಲ್ಲೆಯ ಕಾಟುನಾಯಕನಟ್ಟಿ ಗ್ರಾಮದ ಪೇಚಿಯಮ್ಮಳ್
  • ಪತಿ ಮೃತಪಟ್ಟ ನಂತರ ಪುರುಷನ ವೇಷ ಧರಿಸಿ ಹೋಟೆಲ್, ಟೀ ಅಂಗಡಿಗಳಲ್ಲಿ ಕೆಲಸ  

ಅಮ್ಮ ಮಕ್ಕಳಿಗಾಗಿ ಏನೆಲ್ಲಾ ಮಾಡುತ್ತಾಳೆ ಎಂದು ಆಕೆಗಷ್ಟೇ ಗೊತ್ತಿರುತ್ತೆ. ಊಹಿಸಲು ಕೂಡ ಸಾಧ್ಯವಿಲ್ಲ. ಅಂತ ಊಹೆಗೂ ನಿಲುಕದಂತಹ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಮಗಳನ್ನು ಬೆಳೆಸಲು ಒಬ್ಬಂಟಿಯಾಗಿದ್ದರಿಂದ ಸತತ 30 ವರ್ಷಗಳ ಕಾಲ ಪುರುಷನ ವೇಷ ಧರಿಸಿದ್ದರು. ಆ ಮಹಿಳೆಯ ಹೆಸರು ಪೇಚಿಯಮ್ಮಳ್.

ಮೂರು ದಶಕಗಳ ಹಿಂದೆ ತೂತುಕುಡಿಯ ಕಾಟುನಾಯಕನಟ್ಟಿ ಗ್ರಾಮದ 20 ವರ್ಷದ ಪೇಚಿಯಮ್ಮಳ್ ಅವರು ಮದುವೆಯಾದ 15 ದಿನಗಳ ನಂತರ ಹೃದಯಾಘಾತದಿಂದ ಪತಿ ಮೃತಪಟ್ಟಿದ್ದರು. ಇದೇ ವೇಳೆ ಗರ್ಭಿಣಿಯಾಗಿದ್ದ ಅವರು ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗಾಗಿ ಮರು ಮದುವೆ ಮಾಡಿಕೊಳ್ಳುವ ಯೋಚನೆಯನ್ನು ಕೂಡ ಕೈ ಬಿಟ್ಟರು.

ಪತಿಯನ್ನು ಕಳೆದುಕೊಂಡ ನಂತರ ಮಗಳನ್ನು ಸಾಕಲು ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಕೆಲಸದ ವೇಳೆ ಒಂಟಿ ಮಹಿಳೆಯಾಗಿದ್ದ ಅವರ ಬಗ್ಗೆ, ಜನ ದಿನಕ್ಕೊಂದು ಮಾತುಗಳನ್ನು ಆಡತೊಡಗಿದರು. ಜೊತೆಗೆ ಕೆಲಸದ ಸ್ಥಳದಲ್ಲಿ ಅನೇಕ ಕಿರುಕುಳಗಳನ್ನು ಎದುರಿಸಿದರು. ಇದರಿಂದ ಬೇಸತ್ತ ಪೇಚಿಯಮ್ಮಳ್ ಮಗಳಿಗಾಗಿ ಗಂಡಸಿನ ವೇಷ ಧರಿಸಲು ನಿರ್ಧರಿಸಿದರು.

ಅವರು ತಮ್ಮ ತಲೆ ಕೂದಲನ್ನು ಕತ್ತರಿಸಿಕೊಂಡು ಲುಂಗಿ ಮತ್ತು ಶರ್ಟ್ ಧರಿಸಿ ಪುರುಷರಂತೆ ಓಡಾಡಲು ಶುರು ಮಾಡಿದರು. ಯಾರೂ ಕೂಡ ಈಕೆ ಹೆಣ್ಣು ಎಂದು ಗುರುತಿಸಲಾಗದಷ್ಟು ಬದಲಾವಣೆಯಾಗಿದ್ದರು. ಪೇಚಿಯಮ್ಮಳ್ ತಮ್ಮ ಹೆಸರನ್ನು ಮುತ್ತು ಎಂದು ಇಟ್ಟುಕೊಂಡು, ಕಳೆದ ಮೂವತ್ತು ವರ್ಷಗಳಲ್ಲಿ ಚೆನ್ನೈ ಮತ್ತು ತೂತುಕುಡಿಯ ಹೋಟೆಲ್, ಟೀ ಅಂಗಡಿ ಮುಂತಾದವುಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸಿದ್ದಾರೆ.

ಪೇಚಿಯಮ್ಮಳ್ ಕೆಲಸ ಮಾಡಿದಲ್ಲೆಲ್ಲಾ ಅವರನ್ನು ‘ಅನ್ನಾಚಿ’ ( ಪುರುಷನ ಸಾಂಪ್ರದಾಯಿಕ ಹೆಸರು) ಎಂದು ಕರೆಯಲಾಗುತ್ತಿತ್ತು. ಜತೆಗೆ ಪರೋಟ ಮತ್ತು ಟೀ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ “ಮುತ್ತು ಮಾಸ್ಟರ್” ಎಂದು ಕರೆಯಲಾಯಿತು.

ಈ ಸುದ್ದಿಯನ್ನು ಓದಿ : ತಾಜ್‌ ಮಹಲ್‌ ಕುರಿತ ವಿವಾದಗಳನ್ನು ತಗ್ಗಿಸಲಿದೆಯೇ ಅಲಹಾಬಾದ್ ಹೈಕೋರ್ಟ್ ಟಿಪ್ಪಣಿ?

ಈ ಕುರಿತು ಮಾತನಾಡಿರುವ ಪೇಚಿಯಮ್ಮಳ್ “ನಾನು ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಕೆಲಸದಿಂದ 100 ದಿನದ ಕೆಲಸದವರೆಗೆ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ನನ್ನ ಮಗಳಿಗೆ ಸುರಕ್ಷಿತ ಜೀವನವನ್ನು ರೂಪಿಸಲು ಪ್ರತಿ ಪೈಸೆಯನ್ನು ಉಳಿಸಿದ್ದೇನೆ. ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲ ದಾಖಲೆಗಳಲ್ಲಿ ಮುತ್ತು ಎಂಬ ಹೆಸರನ್ನೇ ದಾಖಲಿಸಿದ್ದೇನೆ. ಆರಂಭದಲ್ಲಿ ಇದು ಕಠಿಣವಾಗಿತ್ತು” ಎಂದು ಪೇಚಿಯಮ್ಮಳ್ ಹೇಳಿದರು.

“ನನ್ನ ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ನಾನು ಹಲವು ಕಷ್ಟಗಳ ನಡುವೆಯೇ ಜೀವನ ಸಾಗಿಸಲು ನಿರ್ಧರಿಸಿದೆ. ಜೀವನೋಪಾಯಕ್ಕಾಗಿ ಹೆಚ್ಚು ಪ್ರಯಾಣಿಸುತ್ತಿದ್ದ ಸಮಯದಲ್ಲಿ, ಗಂಡಸಿನ ವೇಷವು ಕೆಲಸದ ಸ್ಥಳದಲ್ಲಿ ನನ್ನನ್ನು ಸುರಕ್ಷಿತವಾಗಿರಿಸಿತು. ನನ್ನ ಗುರುತನ್ನು ನಿಜವಾಗಿಸಲು, ನಾನು ಯಾವಾಗಲೂ ಬಸ್‌ಗಳಲ್ಲಿ ಪುರುಷರ ಬದಿಯಲ್ಲಿ ಕುಳಿತುಕೊಳ್ಳುತ್ತಿದ್ದೆ. ಪುರುಷರ ಶೌಚಾಲಯವನ್ನು ಬಳಸುತ್ತಿದ್ದೆ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸರ್ಕಾರ ಘೋಷಿಸಿದ್ದರೂ, ನಾನುಹಣವನ್ನು ಪಾವತಿಸಿಯೇ ಪ್ರಯಾಣ ಮಾಡುತ್ತಿದ್ದೆ” ಎಂದು ಅವರು ಅನುಭವ ಹಂಚಿಕೊಂಡಿದ್ದಾರೆ.

“ನನಗೆ ಈಗ 57 ವರ್ಷ, ನನ್ನ ಮಗಳು ಮದುವೆಯಾಗಿದ್ದಾಳೆ ಮತ್ತು ನನ್ನೆಲ್ಲಾ ಆಸೆಗಳನ್ನು ಪೂರೈಸಿದ್ದೇನೆ. ಮತ್ತು ತೃಪ್ತಿಯಾಗಿದ್ದೇನೆ ಎಂದು ಭಾವಿಸುತ್ತೇನೆ. ನನ್ನ ಸಾವಿನ ನಂತರವೂ ಹೀಗೆ ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಸರ್ಕಾರದಿಂದ ಪಿಂಚಣಿ ಸಿಕ್ಕರೆ ನನ್ನ ಉಳಿದ ಜೀವನವನ್ನು ನೆಮ್ಮದಿಯಿಂದ ಕಳೆಯುತ್ತೇನೆ. ನಾನು ಅನೇಕ ಯೋಜನೆಗಳಿಗೆ ಅನರ್ಹಳಾಗಿದ್ದೇನೆ” ಎಂದು ಪೇಚಿಯಮ್ಮಳ್ ಹೇಳಿದ್ದಾರೆ.

"ಅವರು ತಮ್ಮ ಜೀವನವನ್ನು ನನಗೆ ಮುಡಿಪಾಗಿಟ್ಟಿದ್ದಾರೆ. ಅವರು ಭತ್ಯೆಯನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಮಗಳು ಷಣ್ಮುಗ ಸುಂದರಿ ಹೇಳಿದ್ದಾರೆ. ಪೇಚಿಯಮ್ಮಳ್ ಅವರ ಕಷ್ಟಗಳ ಬಗ್ಗೆ ಒಂದಿಬ್ಬರಿಗೆ ಬಿಟ್ಟರೆ ಅವರ ಮಗಳು ಷಣ್ಮುಗ ಸುಂದರಿಗೆ ಮಾತ್ರ ತಿಳಿದಿತ್ತು.

ನಿಮಗೆ ಏನು ಅನ್ನಿಸ್ತು?
10 ವೋಟ್