ಕಾಂಗ್ರೆಸ್‌ ವಕ್ತಾರೆ ಭವ್ಯ ನರಸಿಂಹಮೂರ್ತಿ ಬಂಧನ

Bhavya
  • ಆಗಸ್ಟ್‌ 19ರಂದು ‘ನೊಂದ ಯುವಜನತೆಯ ನಡೆ ರಾಜಭವನದ ಕಡೆ’ ಪ್ರತಿಭಟನೆ ಆಯೋಜಿಸಿದ್ದ ಭವ್ಯ
  • ಹಂಪಿನಗರದ ಕೇಂದ್ರೀಯ ಗ್ರಂಥಾಲಯ ಮುಂದೆ ಯುವಕರು ಆಗಮಿಸುತ್ತಿದ್ದಂತೆ ಭವ್ಯ ಬಂಧನ

‘ನೊಂದ ಯುವಜನತೆಯ ನಡೆ ರಾಜಭವನದ ಕಡೆ’ ಹೆಸರಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್ಸಿನ ಮಾಧ್ಯಮ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರನ್ನು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಂಪಿನಗರದ ಕೇಂದ್ರೀಯ ಗ್ರಂಥಾಲಯ ಮುಂದೆ ಯುವಕರು ಸೇರುತ್ತಿದ್ದಂತೆ ಮಹಿಳಾ ಪೊಲೀಸ್‌ ಸಿಬ್ಬಂದಿ ಆಗಮಿಸಿ ಭವ್ಯ ಅವರನ್ನು ಬಂಧಿಸಿ ಕರೆದೊಯ್ದರು. ಪೊಲೀಸ್‌ ವಾಹನದಲ್ಲೇ ಭವ್ಯ ಅವರು ಫೇಸ್‌ ಬುಕ್‌ ಲೈವ್‌ ಬಂದು ಮಾತನಾಡಲು ಪ್ರಯತ್ನಿಸುತ್ತಿದ್ದಂತೆ ಪೊಲೀಸ್‌ ಸಿಬ್ಬಂದಿ ಅವರ ಮೊಬೈಲ್‌ ಅನ್ನು ವಶಕ್ಕೆ ಪಡೆದರು. 

‘ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳ ಒಕ್ಕೂಟ'ದ ನೇತೃತ್ವದಲ್ಲಿ ಇಂದು ‘ನೊಂದ ಯುವಜನತೆಯ ನಡೆ ರಾಜಭವನದ ಕಡೆ’ ಎಂಬ ಬೃಹತ್ ಜಾಥಾವನ್ನು ಒಕ್ಕೂಟದ ಸಂಚಾಲಕಿ ಭವ್ಯ ನರಸಿಂಹಮೂರ್ತಿ ಆಯೋಜಿಸಿದ್ದರು. 

“ಹಂಪಿನಗರದ ಕೇಂದ್ರೀಯ ಗ್ರಂಥಾಲಯದಿಂದ ರಾಜಭವನದವರೆಗೂ ಜಾಥಾ ಆಯೋಜಿಸಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ನಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಗೆ ನೊಂದ ಯುವಕರು ಬೇಗ ಆಗಮಿಸಿ" ಎಂದು ಭವ್ಯಾ ಬೆಳಿಗ್ಗೆ ಫೇಸ್‌ ಬುಕ್‌ ಲೈವ್‌ ಬಂದು ತಿಳಿಸಿದ್ದರು.

“ಕೆಪಿಎಸ್‌ಸಿ ನಡೆಸುವ ಎಲ್ಲ ನೇಮಕಾತಿಗಳು ತ್ವರಿತಗತಿಯಲ್ಲಿ ನಡೆಸಬೇಕು. ಮುಂಬರುವ ನೇಮಕಾತಿಗಳನ್ನು ಪೂರ್ವಯೋಜಿತ ವೇಳಾಪಟ್ಟಿಯೊಂದಿಗೆ ಆಯೋಜಿಸಬೇಕು. ಕೇಂದ್ರ ಲೋಕಸೇವಾ ಆಯೋಗ ಮಾದರಿಯಂತೆ ಪರೀಕ್ಷಾ ಪ್ರಕ್ರಿಯೆಗಳ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಬೇಕು. ರಾಜ್ಯದಲ್ಲಿ ಖಾಲಿ ಇರುವ 2.44 ಲಕ್ಷ ಹುದ್ದೆಗಳಿಗೆ ಶೀಘ್ರ ಅಧಿಸೂಚನೆ ಹೊರಡಿಸಬೇಕು” ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಭವ್ಯ ಆಗ್ರಹಿಸಿದ್ದರು.

ಹೆಚ್ಚಿನ ಮಾಹಿತಿ ಅಪ್‌ಡೆಟ್‌ ಮಾಡಲಾಗುವುದು..

Image
AV Eye Hospital ad
ನಿಮಗೆ ಏನು ಅನ್ನಿಸ್ತು?
2 ವೋಟ್