
- ರಾಯಚೂರು ನಗರಸಭಾ ಸದಸ್ಯೆ ಬೆಂಗಳೂರಿನಲ್ಲಿ ಅಪಹರಣ
- ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಗಂಭೀರ ಆರೋಪ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ರಾಯಚೂರು ನಗರಸಭಾ ಸದಸ್ಯೆ ಶೈನಾಜ್ ಬೇಗಂ ಅವರನ್ನು ಅಪಹರಿಸಿದ್ದಾರೆ ಎಂಬ ಗಂಭೀರ ಆರೋಪ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಕೇಳಿಬಂದಿದೆ.
ಶೈನಜಾ ಬೇಗಂ ಅವರ ಪುತ್ರ ಎಂ ಡಿ ಅಲಿ ಮಂಗಳವಾರ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ಭೇಟಿಯಾಗಿ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ, “ಮಾರ್ಚ್ 30ರಂದು ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾಗಿದೆ. ಆದರೆ, ಈ ಚುನಾವಣೆಯಲ್ಲಿ ಶೈನಾಜ್ ಬೇಗಂ ಅವರ ಮತವನ್ನು ತಪ್ಪಿಸುವ ದುರುದ್ದೇಶದಿಂದ ಅಪಹರಣ ಮಾಡಲಾಗಿದೆ” ಎಂದು ಆರೋಪಿಸಲಾಗಿದೆ.
ಅಲ್ಲದೆ, "ಶೈನಾಜ್ ಬೇಗಂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಅವರನ್ನು ಮಾರ್ಚ್ 27ರಂದು ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ನನ್ನ ತಮ್ಮ ಮೊಹಮ್ಮದ್ ಆಲಂ ಮತ್ತು ಅತ್ತೆ ಖಾಜಾಬಿ ತಾಯಿಯ ಜೊತೆ ಇದ್ದರು. ಆದರೆ, ಮುಂಜಾನೆ ಕರೆ ಮಾಡಿದಾಗ ಎಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ, ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಮೂರೂ ಜನರನ್ನು ಕರೆದುಕೊಂಡುಹೋಗಿದ್ದಾರೆ ಎಂದು ತಿಳಿಸಿದರು. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ಕಾರು ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದಲಾಗಿದೆ.
ದೂರನ್ನು ಆಧರಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆದರೆ, ಈವರೆಗೆ ಶಾಸಕ ಶಿವರಾಜ್ ಪಾಟೀಲ್ ಅವರನ್ನು ಈ ಸಂಬಂಧ ಪ್ರಶ್ನೆ ಮಾಡಲಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.