ತುಮಕೂರು ದಲಿತ ಯುವಕರ ಹತ್ಯೆ ಪ್ರಕರಣ| ಗೃಹ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

Dalith Murder
  • ದಲಿತರ ವಿಷಯದಲ್ಲಿ ಬಿಜೆಪಿಯ ಕಾಳಜಿ ಎಂಥದ್ದು ಎಂಬುದಕ್ಕೆ ಘಟನೆ ಸಾಕ್ಷಿ
  • ಮೃತರ ಕುಟುಂಬಕ್ಕೆ ಪರಿಹಾರ ನೀಡಿ, ಆರೋಪಿಗಳನ್ನು ಕೂಡಲೇ ಬಂಧಿಸಲು ಒತ್ತಾಯ

ತುಮಕೂರಿನಲ್ಲಿ ಇಬ್ಬರು ದಲಿತ ಯುವಕರ ದಾರುಣ ಹತ್ಯೆಯಾಗಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಸ್ಪಷ್ಟ ಸೂಚನೆಯಾಗಿದ್ದು, ಕೂಡಲೇ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಡವಿದೆ ಎಂಬುದನ್ನು ತುಮಕೂರಿನ ದಲಿತ ಯುವಕರ ಹತ್ಯೆ ಪ್ರಕರಣ ಬಯಲು ಮಾಡಿದೆ. ಬಿಜೆಪಿ ದಲಿತರ ಬಗೆಗೆ ಹೊಂದಿರುವ ಧೋರಣೆಗೆ ಈ ಘಟನೆ ಸಾಕ್ಷಿ. ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಆರಗ ಜ್ಞಾನೇಂದ್ರ ಅನರ್ಹ. ಹೀಗಾಗಿ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರ ನೀಡಿ, ಆರೋಪಿಗಳನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.

Eedina App

ಏನಿದು ಪ್ರಕರಣ:

AV Eye Hospital ad

ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಏ.21ರ ತಡರಾತ್ರಿ ಲಿಂಗಾಯತ ಸಮುದಾಯಕ್ಕೆ ಸೇರಿದ ನಂದೀಶ್ ಎಂಬಾತ ಗಿರೀಶ್ ಮತ್ತು ಪೆದ್ದನಹಳ್ಳಿ ಗಿರೀಶ್ ಎಂಬ ಇಬ್ಬರು ಪರಿಶಿಷ್ಟ ಸಮಾಜಕ್ಕೆ ಸೇರಿದ ಯುವಕರನ್ನು ಅವರ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ.

ಅವರ ಮೇಲೆ ಬೈಕ್ ಕಳ್ಳತನದ ಆರೋಪ ಹೊರಿಸಿ ಥಳಿಸಲಾಗಿದೆ. ಬೆಂಕಿ ಹಚ್ಚಿ ಕಿರುಕುಳ ನೀಡಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ. ಗಿರೀಶ್ ಮೃತದೇಹ ಹೊಲದಲ್ಲಿ ಪತ್ತೆಯಾಗಿದ್ದರೆ, ಪೆದ್ದನಹಳ್ಳಿ ಗಿರೀಶ್ ಮೃತದೇಹ ಕೆರೆಯಲ್ಲಿ ಸಿಕ್ಕಿದೆ. ಈ ಪ್ರಕರಣದ ಸಂಬಂಧ 13 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚುತ್ತಲೇ ಇದೆ ದಲಿತರ ಹತ್ಯೆ

‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯಿದೆ’ ಅನುಷ್ಠಾನದ 2020-21 ರ ರಾಜ್ಯ ವಾರ್ಷಿಕ ವರದಿ ಪ್ರಕಾರ ಕರ್ನಾಟಕದಲ್ಲಿ ಪ್ರತಿ ಐದು ದಿನಕ್ಕೊಬ್ಬ ದಲಿತ ವ್ಯಕ್ತಿಯ ಕೊಲೆಯಾದರೆ, ಎರಡು ದಿನಕ್ಕೊಂದು ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಆದರೆ ಶಿಕ್ಷೆಯಾಗುತ್ತಿರುವ ಆರೋಪಿಗಳ ಪ್ರಮಾಣ ಬೆರಳೆಣಿಕೆ ಮಾತ್ರ!

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ ಶೇ.11.92ರಷ್ಟು ಹೆಚ್ಚಾಗಿವೆ. ಆದರೆ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕೇವಲ ಶೇ.3.79ರಷ್ಟು ಮಾತ್ರ. ಇತ್ತೀಚಿನ ವರ್ಷಗಳಲ್ಲಿ ಕೊಲೆ ಯತ್ನದ ಪ್ರಕರಣಗಳು ಕಡಿಮೆಯಾದರೂ, ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಕಳೆದ ವರ್ಷ 2,140 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಕೇವಲ 121 ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ. ಉಳಿದವು ಇತ್ಯರ್ಥವಾಗಿಲ್ಲ. 375 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ29.57ರಷ್ಟು ಹೆಚ್ಚಾಗಿವೆ. ಬೆಂಗಳೂರು ನಗರದಲ್ಲಿಯೇ ಹೆಚ್ಚು ದೌರ್ಜನ್ಯಗಳು ದಾಖಲಾಗಿವೆ ಎನ್ನುತ್ತಿವೆ ಅಂಕಿಅಂಶಗಳು.

ಇದನ್ನು ಓದಿದ್ದೀರಾ?: ತುಮಕೂರು| ಸವರ್ಣೀಯರಿಂದ ಇಬ್ಬರು ದಲಿತ ಯುವಕರ ಭೀಕರ ಹತ್ಯೆ

ಈ ಎಲ್ಲಾ ಅಂಕಿಅಂಶಗಳು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿಯನ್ನು ಆಧರಿಸಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ನೀಡುವ ಅಂಕಿಅಂಶಗಳು. ಇನ್ನು ಅನೇಕ ಕುಗ್ರಾಮಗಳಲ್ಲಿ ಹೆಣ್ಣುಮಕ್ಕಳ ಮೇಲಾಗುವ ಅತ್ಯಾಚಾರ ಕೊಲೆಗಳು ಅಲ್ಲಲ್ಲಿನ ಪಂಚಾಯಿತಿ ಕಟ್ಟೆಗಳಲ್ಲೇ ಸದ್ದಿಲ್ಲದೆ ಬಗೆಹರಿದುಬಿಡುತ್ತವೆ. ಅಂದರೆ ಸಂತ್ರಸ್ತರ ದನಿಯನ್ನು ಅಡಗಿಸಿ ಹತ್ತಿಕ್ಕಲಾಗುತ್ತಿದೆ. ದಾಖಲಾಗುವ ಪ್ರಕರಣಗಳ ಸಂಖ್ಯೆಗಿಂತ ಹೀಗೆ ಅಧಿಕೃತವಾಗಿ ದಾಖಲಾಗದೆ ಉಳಿದ ಸಂಖ್ಯೆಯೇ ಹೆಚ್ಚು ಎನ್ನಲಾಗುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app