ರಾಷ್ಟ್ರ ಭಾಷೆ ವಿವಾದ | ಹಿಂದಿ ಸಮರ್ಥಿಸಿಕೊಂಡ ನಿರಾಣಿ

  • ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರ ಭಾಷೆ ಎಂದ ನಿರಾಣಿ
  • ಹೆಚ್ಚು ಭಾಷೆ ಕಲಿಯುವುದರಿಂದ ಶ್ರೀಮಂತರಾಗುತ್ತೇವೆ

ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೈಗಾರಿಕ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ಸುದೀಪ್ ಮತ್ತು ದೇವಗನ್ ನಡುವಿನ ಹಿಂದಿ ಟ್ವೀಟ್‌ವಾರ್‌ಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಕನ್ನಡಿಗನಾಗಿ ನಾನು ಕನ್ನಡವನ್ನು ಪ್ರೀತಿಸುತ್ತೇನೆ. ಆದರೆ, ರಾಷ್ಟ್ರ ಭಾಷೆಯಾಗಿ ಹಿಂದಿಯನ್ನು ಸ್ವೀಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದಿದ್ದಾರೆ. 

Eedina App

“ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆಯಾಗಬೇಕೆಂದು ಒಲವು ತೋರಿರಬಹುದು. ಮೊದಲಿಂದಲೂ ಹಿಂದಿಯನ್ನು ರಾಷ್ಟ್ರೀಯ ಭಾಷೆ ಮಾಡಬೇಕೆಂಬುದು ಚರ್ಚೆಯಲ್ಲಿದೆ. ನಮಗೆ ಹಿಂದಿ ಭಾಷೆಯೂ ಬೇಕು. ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರ ಭಾಷೆ" ಎಂದು ಅವರು ಹಿಂದಿಯನ್ನು ಸಮರ್ಥಿಸಿಕೊಂಡಿದ್ದಾರೆ. 

“ಇಂಗ್ಲೀಷ್ ಸ್ಥಳೀಯ ಭಾಷೆಯಲ್ಲದಿದ್ದರೂ, ಹೊರ ರಾಜ್ಯಗಳಲ್ಲಿ ಸಂವಹನ ನಡೆಸುವುದಕ್ಕೆ ನಾವು ಕಲಿಯಬೇಕು. ಹೆಚ್ಚಿನ ಭಾಷೆಗಳನ್ನು ಕಲಿಯುವುದರಿಂದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಬಹದು. ನಾವು ಗ್ರಾಮೀಣ ಪ್ರದೇಶದಿಂದ ಬಂದವರು. ಹಾಗಾಗಿ ನಮಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ" ಎಂದು ಅವರು ವ್ಯಂಗ್ಯದ ರೀತಿಯಲ್ಲಿ ಮಾತನಾಡಿದರು. 

AV Eye Hospital ad

‘ಸ್ಯಾಂಡಲ್‌ವುಡ್‌’ ನಟ ಕಿಚ್ಚ ಸುದೀಪ್ 'ಹಿಂದಿ ರಾಷ್ಟ್ರ ಭಾಷೆಯಲ್ಲ' ಎಂಬುದಕ್ಕೆ ಪ್ರತಿಕ್ರಿಯಿಸಿದ್ದ ಅಜಯ್ ದೇವ್‌ಗನ್, “ಹಿಂದಿ ರಾಷ್ಟ್ರಭಾಷೆ ಅಲ್ಲಾ ಎಂದಾದರೆ, ನೀವೇಕೆ ಹಿಂದಿ ಭಾಷೆಯಲ್ಲಿ ಸಿನಿಮಾವನ್ನು ಡಬ್ ಮಾಡ್ತೀರಿ. ಹಿಂದಿ ರಾಷ್ಟ್ರ ಭಾಷೆ. ಅದು ಹಾಗೆ ಉಳಿಯಲಿದೆ” ಎಂದು ಲೇವಡಿ ಮಾಡಿದ್ದಾರೆ.

ಇದನ್ನು ಓದಿದ್ದೀರಾ? : ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ರೂವಾರಿ ದಿವ್ಯಾ ಹಾಗರಗಿ ಯಾರು?

ಕೆಎಂಎಫ್ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಿಡಿ

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ರಾಜ್ಯದ ಹಲವು ಪ್ರದೇಶಗಳಲ್ಲಿ ಹಾಲಿನ ಪ್ಯಾಕೀಟ್‌ಗಳ ಮೇಲೆ ಕನ್ನಡ ಬಳಸುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಿಡಿಕಾರಿದೆ.

“ಕೆಎಂಎಫ್ ಹಾಲಿನ ಪ್ಯಾಕೀಟ್ ಮೇಲೆ ಕನ್ನಡ ಬಳಸದೆ ಇಂಗ್ಲೀಷ್ ಬಳಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅದನ್ನು ಸರಿಪಡಿಸುವಂತೆ ಸೂಚಿಸಲಾಗಿದೆ. ಕೆಎಂಎಫ್ ನೇರವಾಗಿ ಹಾಲು ಉತ್ಪಾದಕರಿಂದ ಹಾಲು ಪಡೆಯುತ್ತದೆ. ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ತಮಿಳುನಾಡು, ಆಂದ್ರಪ್ರದೇಶ ಮತ್ತು ಇತರ ದಕ್ಷಿಣ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಡೈರಿ ಪ್ಯಾಕೀಟ್‌ಗಳಲ್ಲಿ ಕನ್ನಡ ಭಾಷೆಯನ್ನು ಜನಪ್ರಿಯಗೊಳಿಸಬೇಕು” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಭರಣ ಒತ್ತಾಯಿಸಿದ್ದಾರೆ. 

“ಟೋನ್ಡ್ ಹಾಲಿನ ಪ್ಯಾಕೀಟ್ ಮೇಲೆ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಮುದ್ರಿಸಲಾಗುತ್ತಿದೆ. ಇದನ್ನು ಅನೇಕ ಜನ ಆಕ್ಷೇಪಿಸಿದ್ದಾರೆ. ಇದು ಕರ್ನಾಟಕ ಭಾಷಾ ನೀತಿಯ ಉಲ್ಲಂಘನೆಯಾಗಿದೆ" ಎಂದು ಅವರು ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app