ಮೈಸೂರು | ನನ್ನ ಧ್ವನಿಯನ್ನು ಯಾರಿಂದಲೂ ಅಡಗಿಸಲು ಸಾಧ್ಯವಿಲ್ಲ: ಬಹುಭಾಷಾ ನಟ ಪ್ರಕಾಶ್ ರಾಜ್

Prakash Raj
  • ತಿರಂಗಾ ಯಾತ್ರೆಯ ಮೂಲಕ ದೇಶ ಪ್ರೇಮ ತೋರಿಸಲು ಹೋಗುತ್ತಿರುವುದು ನಿಜವಾದ ದೇಶಪ್ರೇಮ ಅಲ್ಲ
  • ಯುವಕರಿಗೆ ಉದ್ಯೋಗ ಕೊಡುವ ಮೂಲಕ ನಿಮ್ಮ ರಾಷ್ಟ್ರಪ್ರೇಮವನ್ನು ಪ್ರದರ್ಶಿಸಿ ಎಂದ ನಟ

‘ನನ್ನ ಧ್ವನಿಯನ್ನು ಯಾರಿಂದಲೂ ಅಡಗಿಸಲು ಸಾಧ್ಯವಿಲ್ಲ. ನಾನು‌ ಧ್ವನಿ ಎತ್ತದಿದ್ದರೆ ಸತ್ತು ಹೋಗುತ್ತೇನೆ’ ಎಂದು ಬಹುಭಾಷಾ ನಟ ,ಕನ್ನಡಿಗ ಪ್ರಕಾಶ್ ರಾಜ್ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ರವಿವಾರ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, 'ಹದಗೆಟ್ಟ ಈ ದೇಶದ ವ್ಯವಸ್ಥೆಯನ್ನು ಸರಿಪಡಿಸಲು ಯಾವೊಬ್ಬ ನಾಯಕನಿಂದಲೂ ಸಾಧ್ಯವಿಲ್ಲ. ಇದನ್ನು ಸರಿಪಡಿಸಲು ಜನರೇ ಮುಂದೆ ಬರಬೇಕೆಂದರು. ಅಚ್ಚೇ ದಿನ್ ಅಚ್ಚೇ ದಿನ್ ಅಂತ ಜನರನ್ನು ನಂಬಿಸಿ ನಡು ದಾರಿಗೆ ತಂದು ನಿಲ್ಲಿಸಿದ್ದಾರೆ. ಜನಸಾಮಾನ್ಯನ ಬದುಕನ್ನು ಸರಿಪಡಿಸಲು ಸಾಧ್ಯವೇ' ಎಂದು ಪ್ರಶ್ನಿಸಿದರು.

'ಕೇಂದ್ರ ಸರ್ಕಾರ ಹರ್​ ಘರ್​ ತಿರಂಗಾ ಯಾತ್ರೆಯ ಮೂಲಕ ದೇಶ ಪ್ರೇಮ ತೋರಿಸಲು ಹೋಗುತ್ತಿರುವುದು ನಿಜವಾದ ದೇಶಪ್ರೇಮ ಅಲ್ಲ. ಇದರ ಬದಲು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಡಿ. ದೈನಂದಿನ ಬದುಕಿನ ಅಗತ್ಯತೆಯ ವಸ್ತುಗಳ ಬೆಲೆ ಗಗಮಮುಖಿಯಾಗಿವೆ. ಮೊದಲು ಅದಕ್ಕೆ ಕಡಿವಾಣ ಹಾಕಿ, ಬಡ ಜನ ದುಡಿದು ತಿನ್ನಬೇಕು, ಕುಳಿತು ತಿನ್ನುವಷ್ಟು ನಮ್ಮಲ್ಲಿ ಇಲ್ಲ, ಬಡತನ ಮೊದಲು ನಮ್ಮ ದೇಶದಿಂದ ಹೋಗುವಂತೆ ಮಾಡಿ. ಅದು ನಿಜವಾದ ದೇಶ ಸೇವೆ, ಜನ ಮೆಚ್ಚುವ ಸೇವೆ' ಎಂದು ಪ್ರಕಾಶ್ ರಾಜ್ ಹೇಳಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು ‘ಗಜಪಯಣ’ | ಸಚಿವ ಎಸ್ ಟಿ ಸೋಮಶೇಖರ್‌ - ಹೆಚ್‌ ವಿಶ್ವನಾಥ್‌ ನಡುವೆ ವಾಕ್ಸಮರ

'ಪಾಲಿಥಿನ್, ಸಿಂಥೆಟಿಕ್ ರಾಷ್ಟ್ರ ಧ್ವಜದ ಬದಲು ಖಾದಿ ರಾಷ್ಟ್ರ ಧ್ವಜಕ್ಕೆ ಉತ್ತೇಜನ ನೀಡಬೇಕು. ಈಗ ನಿಮ್ಮ ಕಣ್ಣು ಗರಗದಲ್ಲಿ ನೇಯುವ ರಾಷ್ಟ್ರ  ಧ್ಜಜದ ಮೇಲೆ ಬಿದ್ದಿದೆ. ಖಾದಿ ಬಿಟ್ಟು ಪಾಲಿಥಿನ್, ಸಿಂಥೆಟಿಕ್ ಉತ್ತೇಜನ ನೀಡಲು ಮುಂದಾಗಿದ್ದೀರಿ' ಎಂದು ಕಿಡಿಕಾರಿದರು.

'ನಾನು ಯಾವತ್ತೂ ಪ್ರಗತಿಪರ ಚಿಂತಕರ ಪರವಾಗಿದ್ದೇನೆ. ನನ್ನ ಕೆಲಸಗಳನ್ನು ಮಾಧ್ಯಮದ ಮುಂದೆ ಹೇಳಬೇಕೆಂದೇನೂ ಇಲ್ಲ. ಕಣ್ಣಿಗೆ ಕಾಣದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಕೆಲಸಗಳ ಮಧ್ಯೆ ಸದಾ 'ಆ್ಯಕ್ಟಿವ್' ಆಗಿದ್ದೇನೆ' ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಧಾನ ಮಂತ್ರಿ ಮೈಸೂರಿಗೆ ಬಂದಾಗ ರಸ್ತೆಗಳನ್ನು ಮಾಡುತ್ತಾರೆ. ಆದರೆ, ನಮ್ಮ ಟ್ಯಾಕ್ಸ್ ದುಡ್ಡನ್ನು ನಮಗೆ ರಸ್ತೆ ಮಾಡಲು ಯಾಕೆ ಖರ್ಚು ಮಾಡುವುದಿಲ್ಲ ಎಂದು ಪ್ರಶ್ನಿಸಿ. ನಗರಗಳಲ್ಲಿ ಎಲ್ಲಿ ನೋಡಿದರೂ ಗುಂಡಿ ಬಿದ್ದ ರಸ್ತೆಗಳು ಕಣ್ಣಿಗೆ ಬೀಳುತ್ತಲೇ ಇದೆ. ಆದರೆ ಪ್ರಧಾನಿ, ಮುಖ್ಯಮಂತ್ರಿಗಳು ಬರುವ ವೇಳೆ ಮಾತ್ರ ರಸ್ತೆ ಸರಿಯಾಗುತ್ತೆ. ಇನ್ನುಳಿದ ರಸ್ತೆಗಳ ಕಥೆ ಏನು ಎಂದು ಕುಟುಕಿದರು.

'ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಅದು ಸುದ್ದಿಯಾಯಿತು. ಆದರೆ, ಅದರಲ್ಲಿ ಅವರು ಸೋತರು, ಕ್ಷಮೆ ಕೇಳಿದರು. ಅದು ಸುದ್ದಿ ಆಗಲಿಲ್ಲ' ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್