ಮೈಸೂರು | ರಾಜಸ್ತಾನದಲ್ಲಿ ದಲಿತ ವಿದ್ಯಾರ್ಥಿಯ ಹೊಡೆದು ಸಾಯಿಸಿದ ಘಟನೆ ಖಂಡಿಸಿ ಪ್ರತಿಭಟನೆ

  • ದಲಿತ ಎನ್ನುವ ಕಾರಣಕ್ಕೆ ಎಳೆ ವಯಸ್ಸಿನ ಮಗುವಿನ ಮೇಲೆ ಕ್ರೂರ ಹಲ್ಲೆ
  • ನ್ಯಾಯಕ್ಕಾಗಿ ಹೋರಾಟ ನಡೆಸಿದ ಮಗುವಿನ ಕುಟುಂಬದವರಿಗೆ ಲಾಠಿ ಏಟು

ರಾಜಸ್ಥಾನದಲ್ಲಿ ಶಿಕ್ಷಕ ನೀರು ಕುಡಿದ ಮಡಿಕೆಯನ್ನು ಮುಟ್ಟಿದ ಎಂಬ ಕಾರಣಕ್ಕೆ ದಲಿತ ವಿದ್ಯಾರ್ಥಿಯನ್ನು ಶಿಕ್ಷಕನೋರ್ವ ಹೊಡೆದು ಸಾಯಿಸಿದ ಘಟನೆಯನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಅಂಬೇಡ್ಕರ್‌ ಪುತ್ಥಳಿ ಎದುರು ಪ್ರತಿಭಟನೆ ನಡೆಸಿದರು.

ಸಂಶೋಧನಾ ವಿದ್ಯಾರ್ಥಿ ಕಲ್ಲಹಳ್ಳಿ ಕುಮಾರ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಿಕ್ಷಕ ಕುಡಿಯುವ ನೀರನ್ನು ದಲಿತ ವಿದ್ಯಾರ್ಥಿ ಮುಟ್ಟಿದ ಎಂಬ ಕಾರಣಕ್ಕೆ ಒಂಬತ್ತು ವರ್ಷದ ಮಗುವನ್ನು ಹೊಡೆದು ಕೊಂದಿರುವುದು ಖಂಡನೀಯ. ದಲಿತ ಎನ್ನುವ ಕಾರಣಕ್ಕೆ ಎಳೆ ವಯಸ್ಸಿನ ಮಗುವಿನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವುದು ಹೇಯ ಕೃತ್ಯ” ಎಂದು ಹೇಳಿದರು. 

“ಪ್ರಸ್ತುತ ದಿನಗಳಲ್ಲಿ ದಲಿತರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಹಲ್ಲೆಗಳು ನಡೆಯುತ್ತಿವೆ. ಆದರೂ, ಕೂಡ ಆಯಾ ರಾಜ್ಯ ಸರ್ಕಾರಗಳು ಮೂಕವಾಗಿದ್ದು, ಆಡಳಿತ ಅಧಿಕಾರಿಗಳು ಕೈಲಾಗದಿರುವವರಂತೆ ಕೈಕಟ್ಟಿ ಕುಳಿತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಪ್ರದೀಪ್ ಮಾತನಾಡಿ, “ದಲಿತರಾಗಿ ಹುಟ್ಟಿದ್ದೆ ತಪ್ಪು ಎನ್ನುವಂತೆ ಈ ಸಮಾಜ ನೋಡುತ್ತಿದೆ. ಬಾಬಾ ಸಾಹೇಬರು ಕೊಟ್ಟಂತಹ ಸಂವಿಧಾನದ ಆಶಯಗಳನ್ನು ಮರೆತು ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ದಲಿತರ ಸಾವಿಗೆ ನ್ಯಾಯವಿಲ್ಲದಂತಾಗಿದೆ. ಕ್ಷುಲ್ಲಕ ಕಾರಣಕ್ಕೆ ಮಗು ಬಲಿಯಾಗಿದೆ” ಎಂದು ಕಿಡಿಕಾರಿದರು.

“ಮಗುವನ್ನು ಕಳೆದುಕೊಂಡಿರುವ ಕುಟುಂಬ ನ್ಯಾಯಕ್ಕಾಗಿ ಹೋರಾಟ ನಡೆಸಿದರೆ, ರಕ್ಷಣೆ ನೀಡಬೇಕಾದ ಪೊಲೀಸರೇ ಸಂತ್ರಸ್ಥ ಕುಟುಂಬದವರನ್ನು ಲಾಠಿಯಿಂದ ಹೊಡೆದಿದ್ದಾರೆ. ಹಾಗಾದರೆ ಇವರಿಗೆ ನ್ಯಾಯ ಒದಗಿಸುವವರು ಯಾರು? ಮಗುವನ್ನು ಕಳೆದುಕೊಂಡು ರೋಧಿಸುತ್ತಿರುವ ಕುಟುಂಬಕ್ಕೆ ಇವರಿಂದ ಮರಳಿ ಮಗುವನ್ನು ಕೊಡಲು ಸಾಧ್ಯವೇ?” ಎಂದು ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ? ಧಾರವಾಡ | 4ನೇ ದಿನಕ್ಕೆ ಕಾಲಿಟ್ಟ ಕರ್ನಾಟಕ ವಿವಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

“ದಲಿತರ ಮೇಲೆ ದಿನ ನಿತ್ಯ ಒಂದಲ್ಲ ಒಂದು ರೀತಿಯ ಪ್ರಕರಣಗಳು ಕಂಡು ಬರುತ್ತಿದ್ದರೂ ಸರ್ಕಾರ, ಪೊಲೀಸ್ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಶೋಧಕ ಸಂಘದ ಅಧ್ಯಕ್ಷ ನಟರಾಜ್ ಶಿವಣ್ಣ, ದಲಿತ ವಿದ್ಯಾರ್ಥಿ ಒಕ್ಕೂಟದ ಅದ್ಯಕ್ಷ ಮಣಿಕಂಠ, ಮಹೇಶ್ ಸೋಸ್ಲೆ, ಪ್ರಮೋದ್ ಕೋಟೆ, ಪ್ರದೀಪ್, ಕಲ್ಲಳ್ಳಿ ಕುಮಾರ್, ಸಂಜು ಇತರರಿದ್ದರು‌.

ನಿಮಗೆ ಏನು ಅನ್ನಿಸ್ತು?
2 ವೋಟ್