ಮೈಸೂರು | ದಲಿತರಿಗೆ ನಿವೇಶನ, ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಲು ಆಗ್ರಹ

  • ಟಿ ನರಸೀಪುರ ತಾಲೂಕು ಕಚೇರಿ ಎದುರು ಆಹೋರಾತ್ರಿ ಧರಣಿ ಆರಂಭ
  • ದಲಿತರ ಜಮೀನಿಗೆ ಹೋಗುವ ದಾರಿ ಬಲಾಢ್ಯರಿಂದ ಒತ್ತುವರಿ : ಆರೋಪ

ದಲಿತರಿಗೆ ಸ್ಮಶಾನ ಭೂಮಿ, ನಿವೇಶನ ಮಂಜೂರು ಮತ್ತು ದಲಿತರ ಜಮೀನಿಗೆ ತೆರಳುವ ದಾರಿ ಒತ್ತುವರಿ ತೆರವಿಗೆ ಆಗ್ರಹಿಸಿ ಮೈಸೂರು ಜಿಲ್ಲೆ, ಟಿ ನರಸೀಪುರ ತಾಲೂಕು ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ ಶನಿವಾರ ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿ ಆರಂಭಿಸಲಾಗಿದೆ.

ದಲಿತ ಮುಖಂಡ ಅಲಗೂಡು ಉಮಾ ಮಹಾದೇವ ‘ಈ ದಿನ.ಕಾಮ್’ ಜತೆಗೆ ಮಾತನಾಡಿ, “ಟಿ ನರಸೀಪುರದ ವಿವಿಧ ಗ್ರಾಮಗಳ ದಲಿತ ಸಮುದಾಯದವರಿಗೆ ಸ್ಮಶಾನ ಭೂಮಿ ಇಲ್ಲ. ಸರ್ಕಾರ ಸ್ಮಶಾನ ಭೂಮಿ ನೀಡಿದ್ದರೂ ಅದನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ತೆರವು ಮಾಡಿಸಬೇಕು” ಎಂದು ಒತ್ತಾಯಿಸಿದರು.

“ದಲಿತರ ಕೃಷಿ ಭೂಮಿಗೆ ತೆರಳುವ ರಸ್ತೆಗಳನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಸರ್ವೆ ನಡೆಸಿ ಒತ್ತುವರಿ ತೆರವು ಮಾಡಬೇಕು. ದಲಿತರಿಗೆ ವಾಸ ಮಾಡಲು ನಿವೇಶನ ಇಲ್ಲದಿರುವುದನ್ನು ಗುರುತಿಸಿ ವಾಸಕ್ಕೆ ನಿವೇಶನ ಕಲ್ಪಿಸಬೇಕು. ಹೋರಾಟಗಾರರ ವಿರುದ್ಧ ಕೆಲವೊಂದು ಸಣ್ಣಪುಟ್ಟ ಕಾನೂನು ತೊಡಕುಗಳಿವೆ ಅದನ್ನೆಲ್ಲ ಸರಿಪಡಿಸಬೇಕು” ಎಂದು ಆಗ್ರಹಿಸಿದರು.

ಟಿ ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ಹನುಮನಾಳು ಗ್ರಾಮ, ಯಾಚೇನ ಹಳ್ಳಿ ಗ್ರಾಮ, ತಲಕಾಡು ಹೋಬಳಿ, ಪರಿಣಾಮಿಪುರ, ಮಡಿವಾಡಿ ಗ್ರಾಮ, ಚನ್ನ ಬಸಯ್ಯನ ಹುಂಡಿ, ಹೆಮ್ಮಿಗೆ, ಕಸಬಾ ಹೋಬಳಿಯ ಯಡದೊರೆ ಗ್ರಾಮದ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಲಗೂಡು ಗ್ರಾಮದ ಸ್ಮಶಾನ ಶವಸಂಸ್ಕಾರ ಮಾಡಲು ಯೋಗ್ಯವಲ್ಲದ ಕಾರಣ ಬದಲಿ ಭೂಮಿ ನೀಡಬೇಕು. ತಲಕಾಡು ಹೋಬಳಿ ಮರಡಿಪುರದಲ್ಲಿ ಪರಿಶಿಷ್ಟ ಪಂಗಡದ ಜನರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಮೂಗೂರು ಹೋಬಳಿ ಕಾರೋಹಟ್ಟಿ ಗ್ರಾಮದ ದಲಿತರ ಸ್ಮಶಾನ ಭೂಮಿಗೆ ತೆರಳಲು ರಸ್ತೆ ಸೌಲಭ್ಯ ಕಲ್ಪಿಸಬೇಕು. ಸೋಸಲೆ ಹೋಬಳಿ ಕೆತುಪುರ ಗ್ರಾಮದ ದಲಿತರಿಗೆ ಶೀಘ್ರವಾಗಿ ತಾಲ್ಲೂಕು ಆಡಳಿತ, ಜನಪ್ರತಿನಿಧಿಗಳು ಗಮನಹರಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದರು.

ಈ ಸುದ್ದಿ ಓದಿದ್ದೀರಾ? ಪಿಎಂ-ಶ್ರೀ ಶಾಲೆಗಳು ಎನ್‌ಇಪಿ ಆಶಯಗಳಿಗೆ ಪೂರಕ: ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಬನ್ನೂರು ಹೋಬಳಿ ಹನುಮನಾಳು ಗ್ರಾಮದ ದಲಿತರ ಜಮೀನಿಗೆ ತೆರಳುವ ಸರ್ಕಾರಿ ಖರಾಬು ಸರ್ವೇ ನಂಬರ್ 124 ರಿಂದ 129ರ ತನಕ ಒತ್ತುವರಿ ಆಗಿದೆ. ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಕ್ರಮ ವಹಿಸದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ತಕ್ಷಣವೇ ಕ್ರಮ ಕೈಗೊಂಡು, ಒತ್ತುವರಿ ತೆರವು ಮಾಡಿಸಿ ದಲಿತರಿಗೆ, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಮುರುಡಹಳ್ಳಿ ಮಹಾದೇವ, ಬಿ ಪಿ ಸುರೇಶ್, ಆಲತ್ತುರು ಶಿವರಾಜು, ಅಶೋಕ್ ಕೆ ಎಂ ವಾಡಿ, ಪುಟ್ಟಯ್ಯ, ಹರೀಶ್, ಚಂದ್ರ, ಎಸ್ ನವೀನ್, ಸಿದ್ದರಾಜು, ಚಿಕ್ಕ ಲಿಂಗಯ್ಯ, ಮಲ್ಲೇಶ್, ರವೀಂದ್ರ, ಸಿದ್ದರಾಜು, ಶಿವನಂಜು, ಶಿವಸಿದ್ದು, ಕುಮಾರ್ ಸ್ವಾಮಿ, ರಾಜು, ಪುಟ್ಟರಾಜು, ಮಹಾದೇವ, ಶಿವಮ್ಮ, ಅಲಗೂಡು ನಾಗರಾಜ್, ಮಾದೇಶ್, ಲಕ್ಷ್ಮಿ, ಲತಾ, ರಮ್ಯ, ಜಯಶೀಲ, ಸರೋಜಾ ಹಾಗೂ ಇತರರು ಭಾಗವಹಿಸಿದ್ದರು.

ಮಾಸ್ ಮೀಡಿಯಾ Mysore ಜಿಲ್ಲಾ ಸಂಯೋಜಕರಾದ Mohan ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್