ಮೈಸೂರು | ಭೂಮಿ ನೀಡುವಂತೆ 52 ಹಾಡಿಗಳ ಆದಿವಾಸಿಗಳ ಧರಣಿ

Mysore
  • 52 ಹಾಡಿಗಳಲ್ಲಿನ ಆದಿವಾಸಿಗಳ ಬದುಕು ಅತಂತ್ರ
  • ಎರಡು ದಿನಗಳ ಕಾಲ ಧರಣಿ ನಡೆಸಿದ ಆದಿವಾಸಿಗಳು

52 ಹಾಡಿಗಳ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಸಂತ್ರಸ್ತ ಆದಿವಾಸಿ ಸಮುದಾಯದ ಜನರು ಮೈಸೂರು ಜಿಲ್ಲೆಯ ಸರಗೂರು ತಹಸೀಲ್ದಾರ್ ಕಚೇರಿಯ ಎದುರು ಪ್ರತಿಭಟನಾ ಧರಣಿ ನಡೆಸಿದ್ದಾರೆ.

“ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಸ್ವತಂತ್ರ ಪೂರ್ವದಿಂದಲೂ ಆದಿವಾಸಿ ಜನರು ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಸರಗೂರು ತಾಲೂಕಿನಲ್ಲಿ ಸುಮಾರು 52 ಹಾಡಿಗಳಿವೆ. ಈ ಎಲ್ಲ ಹಾಡಿಗಳಲ್ಲಿ ಜೇನು ಕುರುಬ, ಎರವ, ಸೋಲಿಗ, ಕಾಡು ಕುರುಬ ಸಮುದಾಯಗಳು ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಿವೆ” ಎಂದು ಹೋರಾಟಗಾರ ಶೈಲೇಂದ್ರ ಕುಮಾರ್ ಹೇಳಿದ್ದಾರೆ. 

1972ರ ‘ವನ್ಯ ಜೀವಿ ಸಂರಕ್ಷಣೆ ಕಾಯ್ದೆ’ಯಡಿ ಹಾಗೂ ನುಗು ಅಣೆಕಟ್ಟೆ ಕಟ್ಟುವಾಗ ಇಲ್ಲಿನ ಹಾಡಿ ಜನರನ್ನು ಏಕಾಏಕಿ ಒಕ್ಕಲೆಬ್ಬಿಸಲಾಗಿತ್ತು. ಆದರೆ, ಇದೂವರೆಗೂ, ಸರ್ಕಾರ ಅವರಿಗೆ ಪುರ್ನವಸತಿ ಕಲ್ಪಿಸಿಲ್ಲ. ಈ ಸಮುದಾಯಗಳ ಬಗ್ಗೆ ಸರ್ಕಾರ ಅಸಡ್ಡೆ ತೋರಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ತಮ್ಮ ಜೀವನ ನಿರ್ವಹಣೆಗಾಗಿ ಈ ಸಮುದಾಯಗಳು ಭೂಮಾಲೀಕರ ಮನೆಗಳಲ್ಲಿ, ಕಾಫಿ ತೋಟಗಳ ಲೈನ್‌ ಮನೆಗಳಲ್ಲಿ ಕೂಲಿ ಮಾಡಿಕೊಂಡು ಇರಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಹಕ್ಕು ನಮಗೆ ಸಿಗುವವರೆಗೂ ಹೋರಾಟ ಮಾಡುತ್ತೇವೆ“ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಸ್ಮಶಾನ ವಿವಾದ; ಗ್ರಾಮ ಪಂಚಾಯತಿ ಮುಂಭಾಗವೇ ಶವ ಹೂಳಲು ಮುಂದಾದ ಕುಟುಂಬ

ಧರಣಿ ನಿರತರ ಮನವಿ ಸ್ವೀಕರಿಸಿ ಮಾತನಾಡಿದ ಸರಗೂರಿನ ತಹಸೀಲ್ದಾರ್ ಚೆಲುವರಾಜು, “ಈ ಹಿಂದೆ ಹಾಡಿ ಜನರು ಸರ್ವೆ ನಂಬರ್ 17 ಹಾಗೂ 21ಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, 2001ರಲ್ಲಿ ಹಿಂದೆ ಇದ್ದ ಕಮಿಟಿಯವರು ಈ ಅರ್ಜಿಗಳನ್ನು ವಜಾ ಮಾಡಿದ್ದಾರೆ. ಹಿಡುವಳಿ ಭೂಮಿಯಾಗಿದ್ದರಿಂದ ಗೋಮಾಳ ಹಾಗೂ ಕರಾಬು ಮಂಜೂರು ಮಾಡಲು ಅವಕಾಶವಿರುವುದಿಲ್ಲ. ಹುಲ್ಲುಬನಿ, ಕರಾಬು ಎಂದು ಬಂದಿರುವುದನ್ನು ಕಡತಗಳ ಮೂಲಕ ಪರಿಶೀಲಿಸಲಾಗುತ್ತದೆ. ಅದು ಹಿಡುವಳಿ ಭೂಮಿಯಾಗಿದ್ದರೆ ಭೂಮಿ ನೀಡುವುದಕ್ಕೆ ಬರುವುದಿಲ್ಲ” ಎಂದಿದ್ದಾರೆ.

“ಸರ್ವೆ ನಂಬರ್ 30ರಲ್ಲಿ 729 ಎಕರೆ ಹುಲ್ಲು ಬನಿ ಭೂಮಿ ಎಂದು ದಾಖಲಾತಿಯಲ್ಲಿದೆ. ಇದನ್ನು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ, ಕರಾಬು ಭೂಮಿಯಾಗಿ ಮಾರ್ಪಡಿಸಿ, ಫಾರಂ ನಂಬರ್ 57 ಅರ್ಜಿ ಪರಿಗಣಿಸಬಹುದು” ಎಂದು ತಿಳಿಸಿದ್ದಾರೆ.

ತಹಶೀಲ್ದಾರ್ ನೀಡಿರುವ ಸಲಹೆ ಹಾಗೂ ಭೂಮಿ ಸಿಗುವ ಭರವಸೆ ಮೇರೆಗೆ ಎರಡು ದಿನಗಳ ಕಾಲ ನಡೆಸಿ ಪ್ರತಿಭಟನಾ ಧರಣಿಯನ್ನು ಕೈಬಿಟ್ಟಿದ್ದಾರೆ.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್