- ಶ್ರೀನಿವಾಸ್ ಪ್ರಸಾದ್ಗೆ ವಾರ್ನಿಂಗ್ ಕೊಟ್ಟ ಮಾಜಿ ಎಂಎಲ್ಸಿ
- ಪರಸ್ಪರ ಏಕ ವಚನದಲ್ಲೇ ಕಿತ್ತಾಡಿಕೊಂಡ ಬಿಜೆಪಿ ನಾಯಕರು
ಕಾರ್ಯಕ್ರಮ ಒಂದರಲ್ಲಿ ಮೈಸೂರಿನ ಬಿಜೆಪಿ ನಾಯಕರಿಬ್ಬರು ಏಕವಚನದಲ್ಲಿಯೇ ಪರಸ್ಪರ ಕಿತ್ತಾಡಿಕೊಂಡು ಸಭೆಯಿಂದ ಹೊರ ನಡೆದಿರುವ ಘಟನೆ ನಡೆದಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಸಿ ರಮೇಶ್ ಮತ್ತು ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಡುವೆ ವಾಗ್ವಾದ ನಡೆದು, ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ ಎನ್ನಲಾಗಿದೆ.
ಮೈಸೂರು ಜಿಲ್ಲೆಯ ಟಿ ನರಸೀಪುರದ ಅತಿಥಿ ಗೃಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಬುಧವಾರ ನಡೆದಿದೆ. ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ಸಿ ಸಿ ರಮೇಶ್ ಅವರನ್ನು ಗುರಿಯಾಗಿಸಿ ಮಾತನಾಡಿದ ಸಂಸದ ವಿ. ಶ್ರೀನಿವಾಸ್ ಪ್ರಸಾದ್, ‘ಆತನನ್ನು ಆಚೆ ಕಳುಹಿಸು, ಬರೀ ಕೀಟಲೆ ಮಾಡಲಿಕ್ಕೆ ಬರುತ್ತೀಯ.?' ಎಂದು ಗದರಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚಿಕ್ಕಬಳ್ಳಾಪುರ | ಸವಿತಾ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿಗೆ ಆಗ್ರಹ
ಇದಕ್ಕೆ ಪ್ರತಿಕ್ರಿಯಿಸಿದ ಸಿ ರಮೇಶ್, “ಇದು ಬಿಜೆಪಿ ಸರ್ಕಾರದ ಕಾರ್ಯಕ್ರಮ. ನನ್ನನ್ನ ಅವಮಾನ ಮಾಡಲಿಕ್ಕೆ ಕರೆದಿರಬಹುದು. ಮತ್ತೊಮ್ಮೆ ನನ್ನನ್ನ ಯಾವುದೇ ಕಾರ್ಯಕ್ರಮಕ್ಕೂ ಕರೆಯಬೇಡಿ. ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಿಗೆ ನಾನು ಬರುವುದಿಲ್ಲ. ನಾನು ನಿನ್ನನ್ನ ಸುಮ್ಮನೆ ಬಿಡಲ್ಲ” ಎಂದು ಸಂಸದರಿಗೆ ಬೆದರಿಕೆವೊಡ್ಡಿದ್ದಾರೆ.
ಇಬ್ಬರು ನಾಯಕರ ನಡುವೆ ನಡೆಯುತ್ತಿದ್ದ ಗಲಾಟೆಯನ್ನು ಪಕ್ಷದ ಕಾರ್ಯಕರ್ತರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದರು ಎಂದು ತಿಳಿದುಬಂದಿದೆ.