ಮೈಸೂರು | ಭತ್ತದ ತಳಿಗಳ ಸಂರಕ್ಷಣೆಗೆ ʼಜೀನ್‌ ಬ್ಯಾಂಕ್‌ʼ ಸ್ಥಾಪಿಸಿದ ರೈತ

Farmer srinivas
  • 250ಕ್ಕೂ ಹೆಚ್ಚು ಭತ್ತದ ತಳಿ ಸಂಗ್ರಹಿಸಿದ ಮೈಸೂರಿನ ಪ್ರಗತಿಪರ ರೈತ ಶ್ರೀನಿವಾಸ್‌
  • ಇರುವ ಒಂದು ಎಕರೆ ಜಮೀನಿನಲ್ಲೇ ತಳಿ ಅಭಿವೃದ್ಧಿಪಡಿಸುವ ಕಾರ್ಯ

ಮೈಸೂರಿನ ಪ್ರಗತಿಪರ ರೈತ ಶ್ರೀನಿವಾಸ್‌ ಎಂಬವರು 250ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಸಂಗ್ರಹಿಸಿದ್ದು, ‘ಜೀನ್ ಬ್ಯಾಂಕ್’ ರಚಿಸಿದ್ದಾರೆ. ಟಿ ನರಸೀಪುರ ತಾಲೂಕಿನ ಸಿದ್ದನಹುಂಡಿಯ ಶ್ರೀನಿವಾಸ್, ಅವರ ಈ ಸಾಧನೆಗಾಗಿ 2016-17ನೇ ಸಾಲಿನ 'ಜೀನ್ ಸೇವಿಯರ್' ಪ್ರಶಸ್ತಿ ಪಡೆದಿದ್ದಾರೆ.

ʼಜೀನ್‌ ಬ್ಯಾಂಕ್‌ʼನಲ್ಲಿ ಭಾರತದ ವಿವಿಧ ಭಾಗಗಳ ಸುಮಾರು 240 ಪ್ರಭೇದಗಳು ಮತ್ತು ಇತರ ದೇಶಗಳ 10 ಪ್ರಭೇದಗಳನ್ನು ಒಳಗೊಂಡಿದೆ. ಕರ್ನಾಟಕದ ತಳಿಗಳಾದ ರಾಜಮುಡಿ, ರತ್ನಚೂಡಿ, ಜೀರಿಗೆ ಸಣ್ಣ, ಗಂಧಸಾಲೆ, ಸಿದ್ದ, ಪಶ್ಚಿಮ ಬಂಗಾಳದ ಜುಗಲ್ ಮತ್ತು ವಾರಣಾಸಿಯ ರೈತ ಅಭಿವೃದ್ಧಿಪಡಿಸಿದ ಜೆಪಿ 11 ತಳಿಗಳಿದ್ದರೆ, ಮ್ಯಾನ್ಮಾರ್‌ನಿಂದ ಬರ್ಮಾ ಬ್ಲ್ಯಾಕ್, ಥೈಲ್ಯಾಂಡ್‌ನ ಜಾಸ್ಮಿನ್, ಲಂಕಾ 1 ಮತ್ತು ಶ್ರೀಲಂಕಾದಿಂದ ಲಂಕಾ 2 ತಳಿಗಳು ಶ್ರೀನಿವಾಸ್‌ ಅವರ ಸಂಗ್ರಹದಲ್ಲಿವೆ.

ಪ್ರಗತಿಪರ ರೈತ ಶ್ರೀನಿವಾಸ್‌ ಅವರು ಅವರು ಒಡಿಶಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿನ ರೈತರ ಕೃಷಿ ಚಟುವಟಿಕೆಗಳನ್ನು ಗಮನಿಸಿ ಸ್ಥಳೀಯ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿರುವ ಸಮಾನ ಮನಸ್ಕರಿಂದ ಹೊಸ ಭತ್ತದ ತಳಿಗಳನ್ನು ಸಂಗ್ರಹಿಸಿದ್ದಾರೆ.

"ಬಹುತೇಕ ಭತ್ತದ ತಳಿಗಳು ವಿನಾಶದ ಅಂಚಿನಲ್ಲಿವೆ. ಅಲ್ಲದೆ, ಪಾಲಿಶ್‌ ಮಾಡಿದ ಅಕ್ಕಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಅಪರೂಪದ ತಳಿಗಳನ್ನು ಬೆಳೆಯಲು ಸಾಧ್ಯವಾಗಿಲ್ಲ. ಇದರಿಂದ ಸ್ಥಳೀಯ ಭತ್ತದ ತಳಿಗಳು ಕಣ್ಮರೆಯಾಗುವ ಸಂಭವವಿದ್ದರಿಂದ ಅವುಗಳ ಸಂಗ್ರಹಣೆಗೆ ಮುಂದಾದೆ" ಎಂದು ಶ್ರೀನಿವಾಸ್‌ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಲ್ಪಾವಧಿ ಬೆಳೆ ಸಾಲಕ್ಕೆ ಶೇ. 1.5 ಸಬ್ಸಿಡಿ: ಕೇಂದ್ರ ಸರ್ಕಾರದ ಅನುಮೋದನೆ

"ಕುಟುಂಬದಲ್ಲಿ ಇದ್ದ ಜಮೀನು ಹಂಚಿಕೆಯಾದ ನಂತರ ತಮ್ಮ ಬಳಿ ಉಳಿದ ಒಂದು ಎಕರೆ ಭೂಮಿಯಲ್ಲೇ ಭತ್ತದ ಸಂರಕ್ಷಣೆ ಮಾಡಿದ್ದೇನೆ. ಕಡಿಮೆ ಜಾಗದಲ್ಲಿ ಎಲ್ಲಾ ತಳಿಗಳನ್ನು ಬೆಳೆಯಲು ಅಸಾಧ್ಯವಾದ್ದರಿಂದ ಪ್ರತಿವರ್ಷ ಸರದಿಯಂತೆ 30 ತಳಿಗಳನ್ನು ಆಯ್ಕೆ ಮಾಡಿಕೊಂಡು ಬೆಳೆಯುತ್ತೇನೆ. ಅರ್ಧ ಎಕರೆ ಜಾಗದಲ್ಲಿ ಕೃಷಿ ಮಾಡಿದರೆ, ಉಳಿದರ್ಧ ಜಾಗದಲ್ಲಿ ಮನೆ ಬಳಕೆಗೆ ತರಕಾರಿ ಬೆಳೆ ಹಾಕುತ್ತೇನೆ. ಮುಂದೆಯೂ ಆಸಕ್ತಿವುಳ್ಳ ರೈತರಿಗೆ ವಿತರಿಸುವ ಸಲುವಾಗಿ ವಿವಿಧ ಭತ್ತದ ತಳಿಗಳನ್ನು ಬೆಳೆಯುವ ಆಸೆಯಿದೆ ಮತ್ತು ಅದರಿಂದ ಉತ್ತಮ ಆದಾಯ ಕೂಡ ಇದೆ" ಎಂದು ಶ್ರೀನಿವಾಸ್‌ ತಿಳಿಸಿದರು.

ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಟಿ ನರಸೀಪುರ ತಾಲೂಕಿನ ಸಿದ್ದನಹುಂಡಿಯ ರೈತ ಮತ್ತು ಭತ್ತದ ತಳಿಗಾರರು ದೇಶಾದ್ಯಂತ ಸಂಚರಿಸಿ ಸಂರಕ್ಷಿಸಿದ ವಿವಿಧ ತಳಿಗಳ ಭತ್ತವನ್ನು ಪ್ರದರ್ಶಿಸುವ ರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನದಲ್ಲಿ ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್