ಮೈಸೂರು | ದ್ರಾವಿಡ ಮಕ್ಕಳ ಊಟದ ಕೂಟವಾದ ರಂಝಾನ್‌ ಇಫ್ತಾರ್‌​

  • ಮುಸ್ಲಿಮೇತರ ಗೆಳೆಯರಿಂದ ರಂಜಾನ್‌ ಮಾಸದ ಪ್ರಯುಕ್ತ ವಿಶಿಷ್ಟ ಇಫ್ತಾರ್‌ ಕೂಟ
  • ಕೇರಳದ ವಿದ್ಯಾರ್ಥಿಗಳು ಸೇರಿ 70 ಮಂದಿಯೊಂದಿಗೆ ಸಹಭೋಜನ

ಪವಿತ್ರ ರಂಝಾನ್ ಮಾಸದಲ್ಲಿ ಉಪವಾಸ ಇರುವ ಮುಸ್ಲಿಂ ಬಾಂಧವರಿಗೆ ಮೈಸೂರಿನಲ್ಲಿ ಮುಸ್ಲಿಮೇತರ ಗೆಳೆಯರಿಂದ ಆಯೋಜಿಸಿದ್ದ ಇಫ್ತಾರ್‌ ಕೂಟವು ಸಾಮರಸ್ಯದ ಸಂಕೇತವಾಗಿ ವಿಶೇಷವಾಗಿ ಗಮನಸೆಳೆಯಿತು.

ಸಾಮಾನ್ಯವಾಗಿ ಮುಸ್ಲಿಮೇತರರು 'ಇಫ್ತಾರ್ ಕೂಟ' (ಇಫ್ತಾರ್ ಎಂದರೆ ರಂಝಾನ್ ತಿಂಗಳಲ್ಲಿ ಇಡೀ ದಿನ ಉಪವಾಸ ಆಚರಿಸುವ ಮುಸ್ಲಿಮರು ಸೂರ್ಯ ಮುಳುಗಿದ ಸ್ವಲ್ಪ ಹೊತ್ತಿನ ನಂತರ ನೀಡಲಾಗುವ ಆಝಾನ್‌ನ ಸಂದರ್ಭದಲ್ಲಿ ಉಪವಾಸವನ್ನು ತೊರೆಯಬೇಕು. ಅದರ ಸಲುವಾಗಿ ಏನಾದರೂ ಲಘು ಆಹಾರ ಸೇವಿಸುವ ಒಂದು ಕ್ಷಣ)ವನ್ನು ಆಯೋಜಿಸುವುದು ಬಹಳ ಅಪರೂಪ. ಮೈಸೂರಿನಲ್ಲಿ ಶುಕ್ರವಾರ ಕೆಲ ಸ್ನೇಹಿತರ ಗುಂಪು, ಮುಸ್ಲಿಂ ಗೆಳೆಯರಿಗೆ ವಿಶೇಷ ಇಫ್ತಾರ್‌ ಆಯೋಜಿಸಿದ್ದರು.

Eedina App

ರಾಜ್ಯದಲ್ಲಿ ಹಿಜಾಬ್ ವಿಚಾರ,ಹಲಾಲ್ ವಿವಾದ, ಮುಸ್ಲಿಮರಿಗೆ ದೇವಸ್ಥಾನದ ಬೀದಿಯಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧಗಳ ನಡುವೆ ಸೌಹಾರ್ದವನ್ನು ಎತ್ತಿ ಹಿಡಿಯುವ ಹಿನ್ನೆಲೆಯಲ್ಲಿ ಇಫ್ತಾರ್‌ ಆಯೋಜಿಸಿದ್ದೆವು. ಜಾತಿ-ಧರ್ಮದ ವಿಷ ಬೀಜ ಬಿತ್ತಿ ದ್ವೇಷ ಹರಡುತ್ತಿರುವವರಾಗ ಸಾಮರಸ್ಯದ ಸಂಕೇತವಾಗಿ ಇಫ್ತಾರ್‌ ಏರ್ಪಡಿಸಿದ್ದಾಗಿ ಆಯೋಜಕರು ತಿಳಿಸಿದರು.  

ಮೈಸೂರಿನ ಪ್ರಕಾಶಕರಾದ ಮಹೇಶ್, ಲೆಕ್ಕ ಪರಿಶೋಧಕ ಆರಾಧ್ಯ, ಪ್ರಭು, ಗಣೇಶ, ಬೆಟ್ಟೇಗೌಡ, ಅಧ್ಯಾಪಕರಾದ ಚಂದ್ರಶೇಖರ ಐಜೂರ್, ಉಮೇಶ್, ಕುಮಾರ್ ಮತ್ತು ಗೆಳೆಯರು ಕೂಡಿ, ಗ್ಯಾರೇಜು, ಪಂಚರ್ ಅಂಗಡಿ, ಹಣ್ಣಿನ ಅಂಗಡಿ ಹೀಗೆ ಮುಂತಾದ ಶ್ರಮಿಕ ಮುಸ್ಲಿಂ ಸ್ನೇಹಿತರು, ವಿದ್ಯಾರ್ಥಿಗಳನ್ನು ಸೇರಿಸಿ ಕೂಟವನ್ನು ಆಯೋಜಿಸಲಾಗಿತ್ತು.

AV Eye Hospital ad

ಮೈಸೂರಿನ ಲತೀಫ್ ಮೈಸೂರು  'ಮಹಾರಾಜಾ ಹೋಟೆಲ್'ನಡೆದ ಇಫ್ತಾರ್‌ ಕೂಟದಲ್ಲಿ  ಮಹಾತ್ಮ ಗಾಂಧಿ ಪೋಟೊ ಇರಿಸಲಾಗಿತ್ತು. ಪುಷ್ಪನಮನ, ಅತಿಥಿಗಳಿಗೆ ಹೂ ನೀಡುವ ಮೂಲಕ ಶುಭ ಹಾರೈಕೆಗಳನ್ನು ಹಂಚಿಕೊಳ್ಳಲಾಯಿತು. ನಂತರದಲ್ಲಿ ಹಣ್ಣು ಶರಬತ್ ಕುಡಿದು ಉಪವಾಸ ಅಂತ್ಯಗೊಳಿಸಿದರು.

ಇಫ್ತಾರ್‌ ಕೂಟದಲ್ಲಿ ಹಿರಿಯ ಪತ್ರಕರ್ತ, ಅಂಕಣಕಾರ ಕೆ ಪಿ ಸುರೇಶ್ ಮಾತನಾಡಿ, “ಸರಳವಾಗಿ ನಾವೆಲ್ಲರೂ ಜೊತೆಯಾಗಿ ಮಾಡಬೇಕಾದ ಊಟವೆಂಬ ಸಾಮಾನ್ಯ ಸಂಗತಿಯೂ ಅಸೀಮ ಸಾಹಸದ ಸಂಗತಿಯಾಗಿರುವುದು ನಮ್ಮ ದುರಂತ” ಎಂದರು.

    ಇದನ್ನು ಓದಿದ್ದೀರಾ? : ಇದು ನಮ್ಮ ಸೌಹಾರ್ದ| ಹಿಂದೂ ಮಹಿಳೆಯ ಶವ ಸಂಸ್ಕಾರ ನಡೆಸಿದ ಮುಸ್ಲಿಂ ಬಾಂಧವರು

ಪ್ರಕಾಶಕ ಮಹೇಶ್ ಮಾತನಾಡಿ, “ವ್ಯಾವಹಾರಿಕವಾಗಿ ನಾವೆಲ್ಲ ಪರಸ್ಪರ ಸ್ನೇಹದಲ್ಲಿದ್ದರೂ ನಮಗೆ ನೆರೆಮನೆಯ ಊಟ ಹಬ್ಬದ ಬಗ್ಗೆ ಗೊತ್ತಿಲ್ಲ. ಬಾಗಿಲು ಸರಿಸಿ ನಾವು ಒಳನುಗ್ಗಬೇಕಿದೆ. ಇದು ಅಂತಹ ಒಂದು ವಿನೂತನ ಪ್ರಯತ್ನ. ಪರಸ್ಪರ ಊಟ, ಹಬ್ಬದ ಬಗ್ಗೆ ಕುತೂಹಲ, ಮೆಚ್ಚುಗೆ ಇರಬೇಕು. ವ್ಯತ್ಯಾಸ ಮುಖ್ಯವಾಗಬಾರದು” ಎಂದು ಹೇಳಿದರು.

ಮನ್ಸೂರ್ ಅಹ್ಮದ್ ಖಾನ್ ಮಾತನಾಡಿ “ಇದು ಹಿಂದೂ-ಮುಸ್ಲಿಂ ಭೋಜನ ಕೂಟವಲ್ಲ, ನಾವೆಲ್ಲರೂ ದ್ರಾವಿಡ ಮಕ್ಕಳು. 'ಇದು ದ್ರಾವಿಡ ಮಕ್ಕಳ ಭೋಜನ ಕೂಟ', ಇದು ಹೆಚ್ಚಿದಷ್ಟೂ ನಮ್ಮ ಬಾಂಧವ್ಯ ಹೆಚ್ಚುತ್ತದೆ” ಎಂದು ಹೇಳಿದರು.

ನಂತರ ಈ  ದಿನ.ಕಾಮ್‌ಗೆ ವಿಶೇಷ ಔತಣ ಕೂಟದ ಬಗ್ಗೆ ಮಾತನಾಡಿದ ಮನ್ಸೂರ್ ಖಾನ್,  “ ಇಫ್ತಾರ್ ಕೂಟದಲ್ಲಿ ನಮಗೆ ಊಟ ಮುಖ್ಯವಲ್ಲ. ದೇಶ ಮತ್ತು ನಾಡಿನ ಸೌಹಾರ್ದತೆ ಮುಖ್ಯ. ಅದು ಈ ಕಾರ್ಯಕ್ರಮದಲ್ಲಿ ಆಗಿದೆ. ವಿಶೇಷವಾಗಿ ನಮ್ಮ ರಾಜ್ಯದಲ್ಲಿ ನಡೆದ ಈ ಕೋಮುವಾದದ ಘಟನೆಗಳಿಗೆ ಸಮಾನ ಮನಸ್ಕರೆಲ್ಲಾ ಸೇರಿ ಇಂತಹ ಕಾರ್ಯಕ್ರಮ ಮಾಡುವ ಮೂಲಕ ಜನರಲ್ಲಿ ಒಡಕು ಮೂಡಿಸುವವರಿಗೆ ಒಗ್ಗಟ್ಟನ್ನು ತೋರಿಸಬೇಕಿದೆ. ಬೇರೆ ಕಡೆ ಇರುವ ಗೆಳೆಯರು ಇದೇ ರೀತಿ ಕಾರ್ಯಕ್ರಮ ಏರ್ಪಡಿಸಿದರೆ ಎಲ್ಲರಲ್ಲಿ ಸೌಹಾರ್ದತೆ ಬೆಳೆಯುತ್ತದೆ. ಭಾರತೀಯತೆ ಮತ್ತು ಕನ್ನಡತನವನ್ನು ಬೆಳೆಸಬೇಕು" ಎಂದರು.

ಕೇರಳದ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 70 ಮಂದಿ ಈ ವಿಶೇಷ ಇಫ್ತಾರ್‌ ಕೂಟದಲ್ಲಿ ಪಾಲ್ಗೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app