
- ನಿಲ್ದಾಣ ಮಸೀದಿಯಂತಿದೆ ಎಂದು ಅಪಪ್ರಚಾರ
- ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿರುವ ನಿಲ್ದಾಣ
ಮೈಸೂರು ನಗರದಲ್ಲಿ ‘ಪಾರಂಪರಿಕ ನಗರಿʼಯ ಮಹತ್ವ ಸಾರುವ ಉದ್ದೇಶದಿಂದ, ಕೃಷ್ಣರಾಜ ಕ್ಷೇತ್ರದಲ್ಲಿ ಬಸ್ ತಂಗುದಾಣಗಳನ್ನು ಅರಮನೆಯ ವಿನ್ಯಾಸದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆಯೇ ಹೊರತು, ಯಾವುದೇ ಧರ್ಮದ ಆಧಾರದಲ್ಲಲ್ಲ ಎಂದು ಶಾಸಕ ಎಸ್ ಎ ರಾಮದಾಸ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಜೆಎಸ್ಎಸ್ ಕಾಲೇಜು ಬಳಿಯ ಬಸ್ ನಿಲ್ದಾಣವನ್ನು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ಅರಮನೆ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಸಂಸದ ಪ್ರತಾಪ್ ಸಿಂಹ, 'ನಿಲ್ದಾಣವು ಮಸೀದಿ ಮಾದರಿಯಲ್ಲಿದೆ. ಅದನ್ನು ಮೂರು ದಿನಗಳಲ್ಲಿ ತೆರವುಗೊಳಿಸಬೇಕು. ಇಲ್ಲದಿದ್ದರೆ, ಜೆಸಿಬಿ ತಂದು ಒಡೆದು ಹಾಕಲಾಗುವುದು' ಎಂದು ವಿವಾದ ಸೃಷ್ಠಿಸಿದ್ದರು.
ವಿವಾದವೆದ್ದು ಎರಡು ದಿನಗಳು ಭಾರೀ ಚರ್ಚೆಯಾದರೂ ಮೌನವಾಗಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್, ವಿವಾದ ಕುರಿತು ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ಉತ್ತರ ನೀಡಿದ್ದು, "ನಿಲ್ದಾಣವು ಅರಮನೆ ಮಾದರಿಯಲ್ಲಿದೆಯೇ ಹೊರತು, ಧರ್ಮವನ್ನು ಆಧರಿಸಿಲ್ಲ" ಎಂದಿದ್ದಾರೆ.
“ವಿನ್ಯಾಸವನ್ನು ತಪ್ಪಾಗಿ ಅರ್ಥೈಸಿಕೊಂಡು, ಮಸೀದಿಯಂತೆ ನಿರ್ಮಿಸಲಾಗುತ್ತಿದೆ ಮತ್ತು ಗುತ್ತಿಗೆದಾರ ಮುಸ್ಲಿಂ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕೂಡಲೇ ಸೂಕ್ತ ಕ್ರಮಕ್ಕಾಗಿ ನಗರ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ದೂರು ನೀಡಿದ್ದೇನೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅನ್ಯ ಪಕ್ಷಗಳಿಂದ ಕಾಂಗ್ರೆಸ್ಸಿಗೆ ಬರಲು ಕೆಲವರು ಸಿದ್ಧ; ಟಿಕೆಟ್ಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದ ಕೆಪಿಸಿಸಿ
“ನಗರದಲ್ಲಿ ಈಗಾಗಲೇ ಹಲವೆಡೆ ಇದೇ ಮಾದರಿಯ ಬಸ್ ತಂಗುದಾಣಗಳಿವೆ. ಅದೇ ಮಾದರಿಯನ್ನು ನಾವೂ ಅನುಸರಿಸಿದ್ದೇವೆ. ಸಂಸದ ಪ್ರತಾಪ ಸಿಂಹ ಹೇಳಿಕೆ ನಂತರ ರಾತ್ರೋರಾತ್ರಿ ಕಳಶ ಅಳವಡಿಸಿಲ್ಲ. ಕಳೆದ ವಾರವೇ ಹಾಕಲಾಗಿದೆ. ಮಹದೇವ್ ಎಂಬ ಗುತ್ತಿಗೆದಾರ ಇದನ್ನು ನಿರ್ಮಿಸುತ್ತಿದ್ದಾರೆ. ಎಲ್ಇಡಿ ಪರದೆ ಅಳವಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನೂ ತಿಳಿಸಲಾಗುವುದು. ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ” ಎಂದು ತಿಳಿಸಿದರು.