ಮೈಸೂರು | ದಲಿತರನ್ನು ಇಂದಿಗೂ ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿದೆ ಸಮಾಜ: ವಿ ಶ್ರೀನಿವಾಸ ಪ್ರಸಾದ್‌ ವಿಷಾದ

  • ಕುದ್ಮುಲ್‌ ರಂಗರಾವ್‌’ ಜನ್ಮದಿನಾರಣೆಯಲ್ಲಿ ಸಂಸದ ವಿ ಶ್ರೀನಿವಾಸ ಪ್ರಸಾದ್‌ ಹೇಳಿಕೆ
  • ಸಂವಿಧಾನ ಜಾರಿಯಾಗಿ 72 ವರ್ಷ ಕಳೆದರೂ ಪಿಡುಗು ಅಳಿದಿಲ್ಲ‌ ಎಂದು ಬೇಸರ

“ದಲಿತರನ್ನು ಶೂದ್ರರಿಗಿಂತಲೂ ಕಡೆಯಾಗಿ ಸಮಾಜವು ಇನ್ನೂ ನೋಡುತ್ತಿದೆ. ವ್ಯಕ್ತಿ ಗೌರವ ನೀಡದೆ ಪ್ರಾಣಿಗಳಿಂತಲೂ ಹೀನಾಯವಾಗಿ ನಡೆಸಿಕೊಳ್ಳುವುದು ಮುಂದುವರಿದಿದೆ. ಪಂಚಮರೆಂದು ವರ್ಣಗಳಿಂದಲೂ ಆಚೆ ಇಟ್ಟಿದೆ” ಎಂದು ಸಂಸದ ವಿ ಶ್ರೀನಿವಾಸ ಪ್ರಸಾದ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಮೈಸೂರು ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಸಾಮರಸ್ಯ ವೇದಿಕೆ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ, ‘ಕುದ್ಮುಲ್‌ ರಂಗರಾವ್‌’ ಅವರ 163ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

“ದೇಶದಲ್ಲಿ ಸಂಪನ್ಮೂಲಗಳಿದ್ದರೂ ದಲಿತರಲ್ಲಿನ ಬಡತನ, ಹಸಿವು, ಜಾತೀಯತೆ ಹಾಗೂ ಅನಕ್ಷರತೆ ತೊಡೆಯಲು ಇನ್ನೂ ಆಗಿಲ್ಲ. ದಲಿತರು, ಅಸ್ಪೃಶ್ಯರನ್ನು ಸಮಾಜವು ಇನ್ನು ರೌರವ ನರಕದಲ್ಲಿಟ್ಟಿದೆ. ಸಾಮಾಜಿಕ ಸಾಮರಸ್ಯದ ಕೊರತೆಯಿಂದಾಗಿ ಈ ಸಮುದಾಯ ಹಿನ್ನಡೆ ಅನುಭವಿಸುವಂತಾಗಿದೆ” ಎಂದು ಹೇಳಿದರು.

"ಬೇರೆ ಯಾವುದೇ ದೇಶದಲ್ಲಿಯೂ ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲ ಈ ಪ್ರಮಾಣದಲ್ಲಿಲ್ಲ. ಶತಮಾನಗಳಿಂದ ಜಾತಿ ಪದ್ಧತಿ, ಅಸ್ಪೃಶ್ಯತೆ ಹೆಸರಿನಲ್ಲಿ ಸಾಮರಸ್ಯದ ಕೊರತೆಯು ಬಳುವಳಿಯಾಗಿ ಮುಂದುವರಿದಿದೆ. ಸಂವಿಧಾನ ಜಾರಿಯಾಗಿ 72 ವರ್ಷ ಕಳೆದರೂ ಪಿಡುಗುಗಳು ಅಳಿದಿಲ್ಲ‌. ದೇವರ ಹೆಸರಿನಲ್ಲಿ ಶೋಷಣೆ ಮುಂದುವರಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

 ಈ ಸುದ್ದಿ ಓದಿದ್ದೀರಾ? ಹಾಸನ | ಅಂಬೇಡ್ಕರ್ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡದಂತೆ ಮನವಿ

“ಗ್ರಾಮೀಣ ಪ್ರದೇಶಗಳ ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ದಲಿತರಿಗೆ ಇಂದಿಗೂ ಪ್ರವೇಶ ಸಿಕ್ಕಿಲ್ಲ. ಅಂತರ್ಜಾತಿ ವಿವಾಹಗಳು ನಡೆದರೆ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಜಾತೀಯತೆ ಹೆಚ್ಚಾಗುತ್ತಿರುವಂತೆಯೇ ಅಸ್ಪೃಶ್ಯತೆಯು ಜೀವಂತವಾಗುತ್ತದೆ. ಬಡತನವನ್ನು ಸಹಿಸಿಕೊಳ್ಳಬಹುದೇ ಹೊರತು, ಅಸ್ಪೃಶ್ಯತೆಯನ್ನಲ್ಲ” ಎಂದು ಹೇಳಿದರು.

“ಯಾವುದೇ ವೃತ್ತಿಯಲ್ಲಿದ್ದರೂ ಮಾನವೀಯತೆ ಗುಣಗಳಿರಬೇಕು. ಆಗ ಮಾತ್ರ ಸಾಮಾಜಿಕ ಸಾಮರಸ್ಯದ ಬಗ್ಗೆ ಚಿಂತನೆ ಮಾಡಲು ಸಾಧ್ಯ. ಮಾನವೀಯತೆಯೇ ಇಲ್ಲದ ಸಮಾಜವನ್ನು ಸುಧಾರಿಸಲು ಕುದ್ಮಲ್‌ ರಂಗರಾಯರು ಶ್ರಮಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವವರು ರಂಗರಾವ್‌ ಅವರ ಪಾಠವನ್ನು ಪಠ್ಯಕ್ರಮಕ್ಕೆ ಏಕೆ ಸೇರಿಸಿಲ್ಲ?” ಎಂದು ಪ್ರಶ್ನಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್