ಮೈಸೂರು | ಕನ್ನಡ ಶಾಲೆಯ ಸಮಾಧಿ ಮೇಲೆ ವಿವೇಕ ಸ್ಮಾರಕ; ಶಾಲೆ ಉಳಿವಿಗಾಗಿ ಹೋರಾಟ

  • ವಿವೇಕ ಸ್ಮಾರಕದ ಜೊತೆ ಎನ್‌ಟಿಎಂ ಶಾಲೆಯನ್ನು ನಿರ್ಮಿಸಿ
  • ಶಾಲೆ ನಿರ್ಮಾಣ ಒಪ್ಪಂದ ಉಲ್ಲಂಘಿಸಿರುವ ರಾಮಕೃಷ್ಣ ಆಶ್ರಮ

ಎನ್‌ಟಿಎಂ ಶಾಲೆಯ ಪುನರ್‌ ನಿರ್ಮಾಣಕ್ಕಾಗಿ ಮೈಸೂರಿನ ಗನ್‌ ಹೌಸ್‌ ಬಳಿಯ ವಿಶ್ವಮಾನವ ಉದ್ಯಾನವನದಲ್ಲಿ ಮಹಾರಾಣಿ ಶಾಲೆ ಉಳಿಸಿ ಹೋರಾಟ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಸಿದೆ.

"ಎನ್‌ಟಿಎಂ ಶಾಲೆಯ ಪುನರ್‌ ನಿರ್ಮಾಣ ಮಾಡುವುದಾಗಿ ರಾಮಕೃಷ್ಣ ಆಶ್ರಮ ಹೇಳಿತ್ತು. ಆದರೆ, ಆಶ್ರಮವು ತನ್ನ ಮಾತನ್ನು ಮರೆತಿದೆ. ಆಶ್ರಮದ ಮುಖ್ಯಸ್ಥರು ತಮ್ಮ ಮಾತನ್ನು ಉಳಿಸಿಕೊಂಡು, ಕೆಲಸ ಮಾಡಬೇಕು" ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. 

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಮೇಯರ್‌ ಪುರುಷೋತ್ತಮ್‌, “ಶಾಲೆಯನ್ನು ಸಮಾಧಿ ಮಾಡಿ ವಿವೇಕ ಸ್ಮಾರಕವನ್ನು ನಿರ್ಮಿಸುವುದಲ್ಲ. ಸ್ಮಾರಕದ ಜೊತೆ ಎನ್‌ಟಿಎಂ ಶಾಲೆಯನ್ನು ನಿರ್ಮಿಸಬೇಕು. ವಿವೇಕಾನಂದರು ಶಾಲೆಯ ಸಮಾಧಿ ಮೇಲೆ ಸ್ಮಾರಕ ನಿರ್ಮಾಣವನ್ನು ಒಪ್ಪುತ್ತಿರಲಿಲ್ಲ. ನೂರು ವರ್ಷಗಳ ಹಳೆಯದಾದ ಮಹಾರಾಣಿ ಮಾದರಿ ಶಾಲೆಯನ್ನು ಆಶ್ರಮದವರು ಕೆಡವಿದ್ದಾರೆ. ರಾಮಕೃಷ್ಣ ಆಶ್ರಮ ಆಡಿದ ಮಾತಿನಂತೆ ನಡೆದುಕೊಳ್ಳಲಿ” ಎಂದು ಒತ್ತಾಯಿಸಿದರು.

"ಈ ಮೊದಲು ಸುತ್ತೂರು ಶ್ರೀಗಳ ಒತ್ತಾಸೆಯಿಂದ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಸ್ಮಾರಕದ ಜೊತೆ ಶಾಲೆಯನ್ನು ನಿರ್ಮಿಸಲು ಒಪ್ಪಂದ ಏರ್ಪಟ್ಟಿತ್ತು. ಆದರೆ, ಇಂದು ರಾಮಕೃಷ್ಣ ಆಶ್ರಮ ಮಾತಿಗೆ ವಿರುದ್ದವಾಗಿ ನಡೆದುಕೊಂಡಿದೆ” ಎಂದು ಕಿಡಿಕಾರಿದರು.

ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಮೋಹನ್‌ ಗೌಡ ಮಾತನಾಡಿ, “ಸುಮಾರು ಒಂಬತ್ತು ವರ್ಷಗಳಿಂದ ʼಶಾಲೆ ಉಳಿಸಿʼ ಹೋರಾಟ ನಡೆಯುತ್ತಿದೆ. ನ್ಯಾಯಾಲಯಗಳಲ್ಲಿ ತೀರ್ಪು ಬಂದ ಬಳಿಕ ಶಾಲೆಯ ಅರ್ಧದಷ್ಟು ಜಾಗವನ್ನು ಬಳಸಿ ಭವ್ಯ ಕಟ್ಟಡ ನಿರ್ಮಿಸುವುದಾಗಿ ರಾಜಿ ಸಭೆಯಲ್ಲಿ ಆಶ್ರಮದ ಮುಖ್ಯಸ್ಥರು ಒಪ್ಪಿಕೊಂಡಿದ್ದರು. ಈ ವಿಚಾರ ಪತ್ರಿಕೆಗಳಲ್ಲಿಯೂ ಕೂಡ ಬಿತ್ತರವಾಗಿದೆ. ಆದರೆ, ಆಶ್ರಮ ಇಂದು ಮಾತಿಗೆ ತಪ್ಪಿದೆ” ಎಂದು ಆರೋಪಿಸಿದರು.

“ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಸಂಧಾನ ಸಭೆಯಲ್ಲಿ ನಡೆದಿರುವ ಒಪ್ಪಂದವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲಿಸಿ ಸಂಧಾನವನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಸಂಸದರು ಒಂದು ತಿಂಗಳ ಕಾಲ ಬೆಂಗಳೂರಿನಲ್ಲಿ ಉಳಿಯಬೇಕಾಯಿತು. ಅಷ್ಟರಲ್ಲಿ ಅಶ್ರಮವು ಒಪ್ಪಂದವನ್ನು ಉಲ್ಲಂಘಿಸಿ, ಶಾಲೆಯನ್ನು ಕೆಡವಿರುವುದು ಖಂಡನೀಯ. ಎನ್‌ಟಿಎಂ ಶಾಲೆ ನಿರ್ಮಾಣ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

ರೈತ ಸಂಘದ ಮುಖಂಡ ಮರಂಕಯ್ಯ ಮಾತನಾಡಿ, “ರಾಮಕೃಷ್ಣ ಆಶ್ರಮದ ಮಾತನ್ನು ನಂಬಿ ಹೋರಾಟದ ಒಕ್ಕೂಟ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಕರಣವನ್ನು ದಾಖಲಿಸಲಿಲ್ಲ. ಆದರೆ, ಮಹಾರಾಣಿ ಮಾದರಿ ಶಾಲೆಯನ್ನು ರಾತ್ರೋ ರಾತ್ರಿ ಒಡೆದು ಹಾಕಿದ್ದಾರೆ. ಈಗಲೂ ಕಾಲ ಮಿಂಚಿಲ್ಲ ಒಪ್ಪಂದದ ಪ್ರಕಾರ ಶಾಲೆಯ ಅರ್ಧ ಜಾಗದಲ್ಲಿ ಭವ್ಯವಾದ ಕಟ್ಟಡವನ್ನು ನಿರ್ಮಿಸಲಿ. ಈ ಕುರಿತು ಮಾಧ್ಯಮದಲ್ಲಿ ಪ್ರಕಟಿಸಲಿ” ಎಂದು ಆಗ್ರಹಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ರಾಮನಗರ | ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ಕಪ್ಪು ಬಾವುಟ ಪ್ರದರ್ಶಿಸಿ ಬಿಜೆಪಿಗರ ಪ್ರತಿಭಟನೆ

"ಈ ಕಾರಣಕ್ಕೆ ಇಂದು ಸಾಂಕೇತಿಕವಾಗಿ ಪ್ರತಿಭಟನೆಯನ್ನು ಆರಂಭಿಸಿದ್ದು ಮುಂಬರುವ ದಿನಗಳಲ್ಲಿ ಸಮಾಜದ ಎಲ್ಲ ಸಂಘ ಸಂಸ್ಥೆಗಳನ್ನು, ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಬೃಹತ್ ಪ್ರತಿಭಟನೆಗೆ ಮುಂದಾಗಲಿದ್ದೇವೆ. ಶಾಲೆ ನಿರ್ಮಾಣ ಆಗುವ ತನಕ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ” ಎಂದು ತಿಳಿಸಿದರು.

ಎಸ್ ಬಾಲಕೃಷ್ಣ, ಎ ಮಧುಮತಿ, ಸುನಿಲ್ ಕುಮಾರ್, ಎಚ್ ಎನ್ ಪಾರ್ಥ ಸಾರಥಿ, ಎಲ್ ಟಿ ಸಿ ಸಿದ್ದಪ್ಪ , ಆರ್ ಗೋವಿಂದರಾಜ್, ಅಬ್ದುಲ್ ಮಾಲಿಕ್, ಸಿದ್ದಲಿಂಗಪ್ಪ, ರೈತ ಸಂಘದ ಮಂಟಕಳ್ಳಿ ಮಹೇಶ್, ಮಿಮಿಕ್ರಿ ರಾಜ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್