ಮೈಸೂರು | ಆನೆಗಳ ತೂಕ ಪರೀಕ್ಷೆ: ಏಳು ಬಾರಿ ಅಂಬಾರಿ ಹೊತ್ತ ಅರ್ಜುನನೇ ಬಲಶಾಲಿ

Mysore
  • ಧನ್ವಂತ್ರಿ ರಸ್ತೆಯಲ್ಲಿರುವ ವೇವ್ ಬ್ರಿಡ್ಜ್‌ನಲ್ಲಿ ತೂಕ ಪರೀಕ್ಷೆ
  • ಮೊದಲ ತಂಡದಲ್ಲಿ 9 ಆನೆಗಳ ತೂಕ ಪರೀಕ್ಷೆ

ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ ಒಂಭತ್ತು ಆನೆಗಳ ತೂಕ ಪರೀಕ್ಷೆ ನಡೆಸಿದ್ದು, 63 ವರ್ಷದ ಅರ್ಜುನನೇ ಹೆಚ್ಚು ತೂಕ ಹೊಂದಿದ್ದಾನೆ.

ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ವೇವ್ ಬ್ರಿಡ್ಜ್‌ನಲ್ಲಿ ತೂಕ ಪರೀಕ್ಷೆ ನಡೆಸಲಾಯಿತು. ಏಳು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ 5,725 ಕೆಜಿ ತೂಕವಿದ್ದು, ಬಲಶಾಲಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಗೋಪಾಲಸ್ವಾಮಿ 5,240 ಕೆಜಿ ಮತ್ತು ಧನಂಜಯ 4,800 ಕೆಜಿ ತೂಕ ಹೊಂದಿದ್ದಾರೆ. ಈ ಬಾರಿ ಅಂಬಾರಿ ಹೊರುವ  ಅಭಿಮನ್ಯು 4,770 ಕೆಜಿ ತೂಕವಿದ್ದರೆ, ಕಿರಿಯ ಆನೆ ಭೀಮ 3,950 ಕೆಜಿ ತೂಕವಿದೆ. ಕಾವೇರಿ, ಚೈತ್ರ ಮತ್ತು ಲಕ್ಷ್ಮಿ ಕ್ರಮವಾಗಿ 3,110, 3,050 ಮತ್ತು 2,920 ಕೆಜಿ ತೂಕವಿದ್ದಾರೆ.

ಮೈಸೂರು ಅರಮನೆಯಲ್ಲಿ ದಸರಾ ಮಹೋತ್ಸವಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದೆ. ಈಗಾಗಲೇ ಮೊದಲ ತಂಡದಲ್ಲಿ 9 ಆನೆಗಳು ಅರಮನೆಗೆ ಆಗಮಿಸಿವೆ. ಸೆಪ್ಟೆಂಬರ್‍‌ ತಿಂಗಳಿನಲ್ಲಿ ಎರಡನೇ ತಂಡದ ಆನೆಗಳು ಆಗಮಿಸಿಲಿವೆ. ಸೆಪ್ಟೆಂಬರ್‍‌ 26ಕ್ಕೆ ದಸರಾ ಪ್ರಾರಂಭವಾಗಿಲಿದ್ದು, ಅಕ್ಟೋಬರ್‍‌ 5ಕ್ಕೆ ಜಂಬೂ ಸವಾರಿ ನಡೆಯಲಿದೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಅರಣ್ಯವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ಭರವಸೆ

“ದಸರ ತಾಲೀಮು ನಡೆಯುವ ಮುನ್ನ ಆನೆಗಳ ತೂಕ ಪರೀಕ್ಷೆ ನಡೆಸುವುದು ರೂಢಿ. ಆನೆಗಳ ತೂಕ ಹೆಚ್ಚಿಸುವುದು ಉದ್ದೇಶವಲ್ಲ. ಅವುಗಳನ್ನು ಆರೋಗ್ಯ ಸ್ಥಿರವಾಗಿ ನೋಡಿಕೊಳ್ಳುಬೇಕಾಗಿದೆ. ಆಗಸ್ಟ್ 14ರಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ“ ಎಂದು ಡಿಸಿಎ ವಿ.ಕರಿಕಾಳನ್ ಹೇಳಿದ್ದಾಗಿ ಪತ್ರಿಕೆಯೊಂದು ಉಲ್ಲೇಖಿಸಿದೆ.

“ಸುಮಾರು ಎರಡು ತಿಂಗಳ ಕಾಲ ಆನೆಗಳಿಗೆ ಪ್ರೋಟಿನ್‌ ಯುಕ್ತ ಆಹಾರವನ್ನು ಹೆಚ್ಚಾಗಿ ನೀಡಲಾಗುತ್ತದೆ. ದಸರಾ ಮುಗಿಯುವುದರೊಳಗೆ ಆನೆಗಳು ಸರಾಸರಿ 300 ರಿಂದ 500 ಕೆಜಿ ತೂಕವನ್ನು ಪಡೆಯುತ್ತವೆ“ ಎಂದು ಹೇಳಿದ್ದಾರೆ.

ಎರಡು ಬಾರಿ ಆನೆಗಳ ತೂಕ ಪರೀಕ್ಷೆ ನಡೆಸಲಾಗುತ್ತದೆ. ತಾಲೀಮು ನಡೆಸುವ ಮುನ್ನ ಹಾಗೂ ದಸರಾ ಮುಗಿಸಿ ಕಾಡಿಗೆ ಹಿಂತಿರುಗುವಾಗ ತೂಕ ಪರೀಕ್ಷೆ ನಡೆಸಲಾಗುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್