
- ಹಾಲಿನ ದರ ಏರಿಕೆಗೆ ಹಾಲು ಒಕ್ಕೂಟಗಳಿಂದ ಪಟ್ಟು
- ಏಪ್ರಿಲ್ 10ರೊಳಗೆ ಬೊಮ್ಮಾಯಿ ಭೇಟಿ ಮಾಡಲು ನಿರ್ಧಾರ
ಅಡುಗೆ ಎಣ್ಣೆ, ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮಗದೊಂದು ಅಚ್ಚರಿ ಎದುರಾಗಿದೆ. ನಂದಿನಿ ಹಾಲಿನ ದರ ಶೀಘ್ರವೇ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಾಲಿನ ದರ ಏರಿಕೆಗೆ ಹಾಲು ಒಕ್ಕೂಟಗಳು ಪಟ್ಟು ಹಿಡಿದಿದ್ದು, ಒಂದು ತಿಂಗಳಿಂದ ದರ ಏರಿಕೆಗೆ ನಿರಂತರವಾಗಿ ಪ್ರಯತ್ನಿಸುತ್ತಿವೆ. ಪ್ರತಿ ಲೀಟರಿಗೆ ₹5 ದರ ಏರಿಸಬೇಕು ಎಂಬುದು ಹಾಲು ಒಕ್ಕೂಟಗಳ ಬೇಡಿಕೆ. ಈ ಸಂಬಂಧ 14 ಹಾಲು ಒಕ್ಕೂಟಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಸಿದ್ದತೆ ಮಾಡಿಕೊಂಡಿವೆ.
ಏಪ್ರಿಲ್ 10ರೊಳಗೆ ಬೊಮ್ಮಾಯಿ ಭೇಟಿ ಮಾಡಲು ಹಾಲು ಒಕ್ಕೂಟಗಳು ನಿರ್ಧರಿಸಿವೆ. ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜೊತೆ ಚರ್ಚೆ ನಡೆಸಿದ್ದಾರೆ. ಸದ್ಯ ಸಿಎಂ ದೆಹಲಿ ಪ್ರವಾಸದಲ್ಲಿದ್ದು, ಬೆಂಗಳೂರಿಗೆ ಮರಳಿದ ಬಳಿಕ ಈ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಈ ದಿನ.ಕಾಂ ಜೊತೆ ಮಾತನಾಡಿ, "ಎರಡುವರೆ ವರ್ಷದ ಹಿಂದೆ ನಂದಿನಿ ಹಾಲಿನ ದರ ಏರಿಸಲಾಗಿತ್ತು. ಈಗ ಮತ್ತೆ ದರ ಏರಿಸುವ ಬಗ್ಗೆ ಎರಡು ತಿಂಗಳಿಂದ ಹಾಲು ಒಕ್ಕೂಟಗಳು ಚರ್ಚೆ ನಡೆಸುತ್ತಿವೆ. ಎರಡು ದಿನದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಬಗ್ಗೆ ಒಂದು ನಿರ್ಧಾರಕ್ಕೆ ಬರುಲಾಗುವುದು," ಎಂದು ತಿಳಿಸಿದರು.
ಈಗಾಗಲೇ ಕೆಇಆರ್ಸಿ ವಿದ್ಯುತ್ ದರ ಏರಿಕೆಗೆ ಸರ್ಕಾರ ಅಸ್ತು ಎಂದಿದೆ. ಹೀಗಾಗಿ ಹಾಲಿನ ದರ ಏರಿಕೆಗೂ ಸರ್ಕಾರ ಒಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.