ಎರಡು ವರ್ಷದಲ್ಲಿ ದೊಡ್ಡ ಪ್ರವಾಹವಾದರೂ ರಾಜ್ಯದ ಜನತೆಗೆ ಮೋದಿಯಿಂದ ಸಾಂತ್ವನವಿಲ್ಲ: ಸಿದ್ದರಾಮಯ್ಯ ಕಿಡಿ

Siddaramaiah
  • ರಾಜ್ಯದ ನಾಲ್ಕು ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳ ಜೊತೆ ವಿಲೀನ ಮಾಡಿದ್ದು ಯಾರು: ಪ್ರಶ್ನೆ
  • ಅಗ್ನಿಪಥ್‌ ಯೋಜನೆ: ನಾಲ್ಕು ವರ್ಷವಾದ ಮೇಲೆ ಯುವಕರ ಭವಿಷ್ಯವೇನು? ಸಿದ್ದರಾಮಯ್ಯ

2019 ಮತ್ತು ನಂತರದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದ ಪ್ರವಾಹ ಬಂತು. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಜನರಿಗೆ ಸಾಂತ್ವನ ಹೇಳಲಿಲ್ಲ. ವಿಶೇಷ ಅನುದಾನ ನೀಡುವ ಕೆಲಸ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ಹರಿಹಾಯ್ದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಮೈಸೂರು ಬ್ಯಾಂಕ್‌ ಸ್ಥಾಪನೆ ಮಾಡಿದ್ದು 1913ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು. ಇಂದು ಆ ಹೆಸರನ್ನೇ ಮೋದಿ ಅವರು ಅಳಿಸಿ ಹಾಕಿದ್ದಾರೆ,” ಎಂದರು.

“ಕರಾವಳಿಯಲ್ಲಿ 1906ರಲ್ಲಿ ಕಾರ್ಪೋರೇಷನ್‌ ಬ್ಯಾಂಕ್‌ ಆರಂಭವಾಯಿತು. ಹಾಜಿ ಅಬ್ದುಲ್ಲ ಎಂಬುವವರು ಸ್ಥಾಪನೆ ಮಾಡಿದ್ದು, ಸಿಂಡಿಕೇಟ್‌ ಬ್ಯಾಂಕ್‌ ಟಿಎಂಎ ಪೈ ಅವರಿಂದ ಸ್ಥಾಪನೆಯಾಗಿದ್ದು, ವಿಜಯಾ ಬ್ಯಾಂಕ್‌ ನಮ್ಮ ರಾಜ್ಯದ್ದು, ಈ ಬ್ಯಾಂಕುಗಳು ಈಗ ಇದೆಯಾ? ಈ ನಾಲ್ಕು ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳ ಜೊತೆ ವಿಲೀನ ಮಾಡಿದ್ದು ಯಾರು”ಎಂದು ಪ್ರಶ್ನಿಸಿದರು.

“ಈ ನಾಲ್ಕು ಬ್ಯಾಂಕುಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿದ್ದವು. ಇವು ಬೇರೆ ಬ್ಯಾಂಕುಗಳೊಂದಿಗೆ ವಿಲೀನವಾದ ನಂತರ ಇವುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದೆಯಾ? ಇದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ? ಬೇರೆ ಬ್ಯಾಂಕುಗಳು ದಿವಾಳಿಯಾಗಿವೆ ಎಂದು ವಿಲೀನ ಮಾಡಿದ್ದರಿಂದ ಕನ್ನಡಿಗರಿಗೆ ಕೆಲಸ ಸಿಗದಂತಾಗಿದೆ. ಇದು ನಮ್ಮ ರಾಜ್ಯಕ್ಕೆ ಮಾಡಿರುವ ದೊಡ್ಡ ಅವಮಾನ,” ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಚಾಮರಾಜನಗರ ಆಸ್ಪತ್ರೆಯಲ್ಲೇ 36 ಜನ ಸತ್ತಿದ್ದಾರೆ

ಕರೊನಾ ರೋಗ ಬಂದಾಗ ಆಮ್ಲಜನಕ ಕೊಡಲಿಲ್ಲ. ಆ ನಂತರ ಕರ್ನಾಟಕ ಹೈಕೋರ್ಟ್‌ ರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಆದೇಶ ಮಾಡಿದ ಮೇಲೆ ಹೈಕೋರ್ಟ್‌ ಹೇಳಿದಷ್ಟು ಆಮ್ಲಜನಕ ಪೂರೈಕೆ ಮಾಡಲು ಆಗಲ್ಲ ಎಂದು ಸುಪ್ರೀಂಕೋರ್ಟ್‌ ಗೆ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತು. ಆಮ್ಲಜನಕ ಸಿಗದೆ ರಾಜ್ಯದಲ್ಲಿ ಬಹಳ ಮಂದಿ ಸತ್ತು ಹೋದರು. ಇದಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ ಒಂದು ಉದಾಹರಣೆ. ಕೇಂದ್ರ ಸಚಿವರು ಸಂಸತ್ತಿಗೆ ಉತ್ತರ ನೀಡುವಾಗ ಆಮ್ಲಜನಕ ಸಿಗದೆ ದೇಶದಲ್ಲಿ ಒಬ್ಬರು ಸತ್ತಿಲ್ಲ ಎಂದು ಸುಳ್ಳು ಹೇಳಿದರು. ಚಾಮರಾಜನಗರ ಆಸ್ಪತ್ರೆಯಲ್ಲೇ 36 ಜನ ಸತ್ತಿದ್ದಾರೆ. ಇದಕ್ಕೆ ಕಾರಣ ನರೇಂದ್ರ ಮೋದಿ ಅವರಲ್ಲವೇ” ಎಂದು ಪ್ರಶ್ನಿಸಿದ್ದಾರೆ.  

ಈ ಸುದ್ದಿ ಓದಿದ್ದೀರಾ? ʼನಾ ಖಾವೂಂಗ, ನಾ ಖಾನೇದೂಂಗʼ ನಿಮ್ಮ ಮಾತು ಸತ್ಯ ಆಗಿದ್ದರೆ 40% ಕಮಿಷನ್ ತನಿಖೆ ಯಾವಾಗ ಮೋದಿ: ಸಿದ್ದರಾಮಯ್ಯ

ಮೋದಿ ಅವರು ಪ್ರಧಾನಿಯಾದ ಮೇಲೆ ತೆರಿಗೆಯಲ್ಲಿ ನಮ್ಮ ಪಾಲು ಕಡಿಮೆಯಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಕರ್ನಾಟಕವೊಂದರಿಂದಲೇ ಆದಾಯ ತೆರಿಗೆ, ಕಾರ್ಪೋರೇಟ್‌ ತೆರಿಗೆ, ಅಬಕಾರಿ ಸುಂಕ, ಜಿಎಸ್‌ಟಿ ಸೇರಿದಂತೆ ವಿವಿಧ ರೂಪದ ತೆರಿಗೆಗಳಲ್ಲಿ ಸಂಗ್ರಹವಾಗಿರೋದು 19 ಲಕ್ಷ ಕೋಟಿ ರೂ. ಇದರಲ್ಲಿ ಶೇ.42ರಷ್ಟನ್ನು ರಾಜ್ಯಕ್ಕೆ ಕೊಟ್ಟಿದ್ದರೆ 8 ಲಕ್ಷ ಕೋಟಿ ರೂ. ಹಂಚಿಕೆ ಆಗಬೇಕಿತ್ತು. ಇದೀಗ  2.14 ಲಕ್ಷ ಕೋಟಿ ಮಾತ್ರ ಕೊಟ್ಟಿದ್ದಾರೆ. ಇನ್ನೂ 11 ಲಕ್ಷ ಕೋಟಿ ಬಾಕಿ ಉಳಿದಿದೆ. ಒಂದು ಸಾವಿರ  ಕೋಟಿ ಬಿಡುಗಡೆ ಮಾಡಿ ಅದನ್ನೇ ಜಾಹಿರಾತಿನಲ್ಲಿ ಮೋದಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದು ಟೀಕಿಸಿದರು.

“ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಿದ್ದು, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ನಮ್ಮ ಸಾಧನೆ. ಅದನ್ನೂ ತಮ್ಮದೆಂದು ಬಿಜೆಪಿಯವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ,” ಎಂದು ಹರಿಹಾಯ್ದರು.

“ಅಗ್ನಿಪಥ್‌ ಯೋಜನೆಯಡಿ ಯುವಕರನ್ನು ಕೇವಲ ನಾಲ್ಕು ವರ್ಷಕ್ಕೆ ಸೈನ್ಯಕ್ಕೆ ನೇಮಕ ಮಾಡಿಕೊಳ್ತೀವಿ ಎಂದು ಸರ್ಕಾರ ಹೇಳುತ್ತಿದೆ. ನಾಲ್ಕು ವರ್ಷ ಕೆಲಸ ಮಾಡಿದ ಮೇಲೆ ಅವರಿಗೆ ಪಿಂಚಣಿ ಸಿಗಲ್ಲ. ಆಮೇಲೆ ನಮ್ಮ ಭವಿಷ್ಯವೇನು ಎಂದು ಯುವಕರು ಪ್ರಶ್ನೆ ಮಾಡುತ್ತಿದ್ದಾರೆ. ಸೈನ್ಯದಲ್ಲಿ ನಾಲ್ಕು ವರ್ಷ ಕೆಲಸ ಮಾಡಬಹುದು, ಅದು ಮುಗಿದ ಮೇಲೆ ಅವರನ್ನು ಕೆಲಸದಿಂದ ತೆಗೆಯಲಾಗುತ್ತೆ. ಆಗ ಅವರು ಶಿಕ್ಷಣವನ್ನು ಮುಂದುವರೆಸಲು ಆಗಿಲ್ಲ. ಇದು ಬಹಳ ಅವೈಜ್ಞಾನಿಕವಾಗಿದೆ,” ಎಂದರು.

ನಿಮಗೆ ಏನು ಅನ್ನಿಸ್ತು?
1 ವೋಟ್