ಕಾನೂನು ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ: ನ್ಯಾಯಮೂರ್ತಿ ಓಕಾ

  • ಕಾನೂನಿನ ನಿಬಂಧನೆ ಮತ್ತು ಕ್ರಿಮಿನಲ್ ಕಾನೂನಿನ ಬಗ್ಗೆ ಅರಿವು ಅಗತ್ಯ
  • ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ರಜತ ಮಹೋತ್ಸವ

ಕಾನೂನಿನ ಬಗ್ಗೆ ಅರಿವು ಮೂಡಿಸಲು ಕಾನೂನು ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳುವುದು ತುಂಬಾ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕಾ ಹೇಳಿದರು.

ಬೆಂಗಳೂರಿನ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ರಜತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾನೂನಿನ ನಿಬಂಧನೆಗಳು ಮತ್ತು ನಿರ್ದಿಷ್ಟವಾದ ಕ್ರಿಮಿನಲ್ ಕಾನೂನಿನ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಹೇಳಿದರು.

ನ್ಯಾಯಾಧೀಶರು ನೀಡಿದ ಜಾಮೀನು ಅಥವಾ ಖುಲಾಸೆ ಬಗ್ಗೆ ಅರಿವಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯಾವಂತರು ಕೂಡ ಟೀಕೆ ಮಾಡುತ್ತಿದ್ದಾರೆ. ದೇಶದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರಿತುಕೊಳ್ಳಲು ಹೆಚ್ಚಿನವರಿಗೆ ಆಸಕ್ತಿ ಇಲ್ಲ. ನಾವು ಬಹಳಷ್ಟು ಟೀಕೆಗಳನ್ನು ಎದುರಿಸುತ್ತಿದ್ದೇವೆ. ಈ ಬಗ್ಗೆ ಬಾರ್ ಕೌನ್ಸಿಲ್‌ನ ಸದಸ್ಯರು ಮಾತ್ರವಲ್ಲದೆ ಸ್ವಯಂ ಸೇವಕರು ಜಾಗೃತಿ ಮೂಡಿಸಲು ಹೆಚ್ಚು ಕೆಲಸ ಮಾಡಬೇಕಾಗಿದೆ ಎಂದು ನ್ಯಾಯಾಧೀಶರು ಹೇಳಿದರು. 

ವಿವಿಧ ಸಾರ್ವಜನಿಕ ಹಿತಾಸಕ್ತಿ ವಿಷಯಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮಾಡಿದ ಕಾರ್ಯಗಳನ್ನು ಶ್ಲಾಘಿಸಿದ ನ್ಯಾಯಮೂರ್ತಿ ಓಕಾ, ಕಾನೂನು ಸೇವಾ ಪ್ರಾಧಿಕಾರಗಳು ಭಾರತದ ಸಂವಿಧಾನದ 51ಎ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕುಗಳ ಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಬಾಧ್ಯತೆ ಹೊಂದಿವೆ. ಈ ವಿಷಯದ ಬಗ್ಗೆ ಇದುವರೆಗೆ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

ಹೈಕೋರ್ಟ್‌ನ 12 ಮಾಜಿ ನ್ಯಾಯಾಧೀಶರಿಗೆ ರಾಜ್ಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಓಕಾ ಹೇಳಿದರು. 

ವಾಣಿಜ್ಯ ವ್ಯಾಜ್ಯಗಳು, ವೈವಾಹಿಕ ವ್ಯಾಜ್ಯಗಳು, ವಿಭಜನಾ ವ್ಯಾಜ್ಯಗಳು, ನಿರ್ದಿಷ್ಟ ಕಾರ್ಯಕ್ಷಮತೆ ವ್ಯಾಜ್ಯಗಳ ಬಗ್ಗೆ ನ್ಯಾಯಾಲಯವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  ನ್ಯಾಯಾಲಯದಲ್ಲಿ ಇತ್ಯರ್ಥವಾಗದಂತಹ ವಿವಾದಗಳನ್ನು ಪ್ರಾಧಿಕಾರದ ಮೂಲಕ ಇತ್ಯರ್ಥಪಡಿಸುವ ಅವಕಾಶವಿದೆ.  ಆ ಮೂಲಕ ದಾವೆದಾರರಿಗೆ ಮತ್ತು ನ್ಯಾಯಾಂಗಕ್ಕೆ ಹೆಚ್ಚು ಉಪಯೋಗವಾಗುತ್ತದೆ ಎಂದು ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕಾ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್