ಹಾಸನ | ಅಂಬೇಡ್ಕರ್ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡದಂತೆ ಮನವಿ

  • ಶಾಸಕ ಎಚ್ ಕೆ ಕುಮಾರಸ್ವಾಮಿ ಅವರಿಗೆ ವೇಣು ಭಾರತೀಯ ಬಹಿರಂಗ ಪತ್ರ
  • ಸಕಲೇಶಪುರದಲ್ಲಿ 2021ರ ಡಿ. 5ರಂದು ಅಂಬೇಡ್ಕರ್ ಪುತ್ಥಳಿ ನಿರ್ಮಿಸಲಾಗಿತ್ತು

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಹಳೆಯ ಬಸ್ ನಿಲ್ದಾಣದ ಬಳಿ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಿಸುವುದಕ್ಕೆ ನಾನಾ ನೆಪವೊಡ್ಡಿ ಕೆಲವರು ತಡೆಯೊಡ್ಡಿದ್ದರು. ಶಾಸಕ ಎಚ್ ಕೆ ಕುಮಾರಸ್ವಾಮಿ ಅವರೂ ಕೂಡ ಕಾನೂನು ಸಮಸ್ಯೆ ಇರುವುದಾಗಿ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ವೇಣು ಭಾರತೀಯ ಇಲ್ಲಿನ ಶಾಸಕ ಎಚ್ ಕೆ ಕುಮಾರಸ್ವಾಮಿ ಅವರಿಗೆ ಬಹಿರಂಗ ಪತ್ರ ಬರೆದು ಆಕ್ರೋಶ ಹೊರಹಾಕಿದ್ದಾರೆ.

ಅವರು ತಾವು ಬರೆದ ಬಹಿರಂಗ ಪತ್ರದಲ್ಲಿ “ಮಂಗಳವಾರ ನೀವು ನೀಡಿದ ಪತ್ರಿಕಾ ಹೇಳಿಕೆಯ ಅರ್ಥವಾದರೂ ಏನು? ದಲಿತ ಸಮುದಾಯ ಹಳೆ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಅಂಬೇಡ್ಕರ್ ಪ್ರತಿಮೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನದ ವಿರುದ್ಧವಾಗಿದೆಯೇ? ನೀವು ಹಾಗೂ ತಾಲೂಕು ಆಡಳಿತ ಮಿನಿ ವಿಧಾನಸೌಧದ ಎದುರು ನಿರ್ಮಿಸಿರುವ ಅಂಬೇಡ್ಕರ್ ಅವರ ಕಲ್ಲಿನ ಪ್ರತಿಮೆಯನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ನಿರ್ಮಿಸಿದ್ದೀರಾ? ನಮಗೆ ಒಂದು ಕಾನೂನು, ನಿಮಗೆ ಒಂದು ಕಾನೂನಾ?” ಎಂದು ವೇಣು ಭಾರತೀಯ ಪ್ರಶ್ನಿಸಿದ್ದಾರೆ.

“ನ್ಯಾಯಾಲಯದ ಆದೇಶ ಇದ್ದರೆ ಅದನ್ನು ಬಹಿರಂಗಪಡಿಸಿ. ರಾಜ್ಯ ಸರ್ಕಾರದ ಪೌರಾಡಳಿತ ಇಲಾಖೆ 2012 ರಲ್ಲಿ ಪ್ರತಿಮೆ ಸ್ಥಾಪನೆ ಮಾಡಲು ಸುತ್ತೋಲೆ ಹೊರಡಿಸಿದೆ. ಆದರೆ ನ್ಯಾಯಾಲಯ ಆದೇಶ ನೀಡಿಲ್ಲ. ತಾಲೂಕಿನ ಜನರನ್ನು ಸುಮ್ಮನೆ ದಿಕ್ಕು ತಪ್ಪಿಸಿ ಒಡೆದು ಆಳುತ್ತಾ ಅಂಬೇಡ್ಕರ್ ಪ್ರತಿಮೆ ಹೆಸರಲ್ಲೂ ರಾಜಕೀಯ ಮಾಡುತ್ತಿರುವುದು ನಿಮಗೆ ಶೋಭೆ ತರುವ ಕೆಲಸವಲ್ಲ” ಎಂದು ಅವರು ಕಿಡಿ ಕಾರಿದ್ದಾರೆ.

“ಪುರಸಭೆ ಮುಂಭಾಗ ಡಾ. ಬಿ ಆರ್ ಅಂಬೇಡ್ಕರ್, ಬಸವಣ್ಣ ಮತ್ತು ಕೆಂಪೇಗೌಡರ ಪ್ರತಿಮೆಗಳನ್ನು ನಿರ್ಮಾಣ ಮಾಡಲು ಇಚ್ಚಿಸಿರುವುದು, ತಾಲೂಕು ಆಡಳಿತ ಮತ್ತು ಪುರಸಭೆಯ ಜತೆ ಚರ್ಚಿಸಲಾಗುವುದು ಎಂದು ಹೇಳಿರುವುದು ಸಂತೋಷದ ವಿಚಾರ. ಆದರೆ, ನಮ್ಮ ಸಮುದಾಯದ ಮುಖಂಡರು ಇದೇ ಪುರಸಭೆ ಮುಂಭಾಗ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡೋಣ ಎಂದಾಗ ಹಾಗೂ ಹಳೆಯ ಬಸ್ ನಿಲ್ದಾಣದ ಹತ್ತಿರ ನಿಮ್ಮ ಪುರಸಭೆ ಅನುಮೋದಿಸಿರುವ ಜಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಿರುವುದಕ್ಕೆ ಹೈಕೋರ್ಟ್ ನಿರ್ದೇಶನ, ಹೈವೇ ಸಮಸ್ಯೆ, ಎಲ್ಲಾ ಕಾನೂನು ತೊಡಕುಗಳು ನಮಗೆ ಬರುತ್ತವೆ. ನಿಮಗೆ ಬೇಕಾದಾಗ ಯಾವ ಕಾನೂನುಗಳು ಅಡ್ಡಿ ಬರುವುದಿಲ್ಲವಾ ಸರ್?” ಎಂದು ಪ್ರಶ್ನಿಸಿದ್ದಾರೆ.

“ನಿಮ್ಮ ಇಬ್ಬಗೆಯ ನೀತಿಗೆ ನಮ್ಮ ಸಮಾಜದ ಧಿಕ್ಕಾರವಿರುತ್ತದೆ. ಈ ವಿಚಾರದಲ್ಲಿ ನಿಮ್ಮ ನಡವಳಿಕೆ ಹೇಗಿದೆಯೆಂದರೆ, ಕಳೆದ ಒಂದು ಕಾಲು ವರ್ಷದಿಂದ ಹಳೆಯ ಬಸ್ ನಿಲ್ದಾಣದ ಬಳಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಆಗಬೇಕೆಂದು ನಿರಂತರವಾಗಿ ನಡೆಯುತ್ತಿರುವ ಹೋರಾಟಕ್ಕೆ ನೀವು ಮಾಡುತ್ತಿರುವ ಅವಮಾನದಂತಿದೆ” ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ದಲಿತರಿಗೆ ಮೊದಲು ಭೂಮಿ ಹಕ್ಕು ನೀಡಿದ್ದು ಟಿಪ್ಪು ಸುಲ್ತಾನ್ : ಬಸವಲಿಂಗ ಸ್ವಾಮೀಜಿ

“ನಮ್ಮ ಸಮುದಾಯದ ಬಂಧುಗಳು ಹೋರಾಟ ಮಾಡುತ್ತಾ 53 ದಿನ ಬೀದಿಯಲ್ಲಿ ಮಲಗಿದಾಗಲೂ ನಿಮ್ಮ ಕಲ್ಲು ಮನಸ್ಸಿಗೆ ಏನೂ ಅನ್ನಿಸಲಿಲ್ಲ. ಇಷ್ಟು ದಿನವಾದರೂ ಒಂದು ಸಮಸ್ಯೆಯನ್ನು ಬಗೆಹರಿಸಲಾರದಷ್ಟು ಅಸಹಾಯಕರೆ ನೀವು? ಅಥವಾ ದಲಿತ ಸಮುದಾಯದ ಮೇಲಿರುವ ನಿಮ್ಮ ಅಸಡ್ಡೆತನವೋ? ಇವರು ಯಾವ ಲೆಕ್ಕ, ಚುನಾವಣೆಯಲ್ಲಿ ನೋಡಿಕೊಂಡರಾಯಿತು ಎನ್ನುವ ನಿಮ್ಮ ರಾಜಕೀಯ ಮನಸ್ಥಿತಿಯೋ?” ಎಂದು ವೇಣು ಕಿಡಿ ಕಾರಿದ್ದಾರೆ.

“ಶಾಸಕರೇ, ನೀವು ಇನ್ನೂ ಹಲವು ಮಹಾತ್ಮರ ಪ್ರತಿಮೆಗಳನ್ನು ನಿರ್ಮಾಣ ಮಾಡಿ ನಮ್ಮದೇನೂ ತಕರಾರಿಲ್ಲ. ಆದರೆ ನಮ್ಮ ಸಮುದಾಯದ ಬೇಡಿಕೆಯಂತೆ ಪುರಸಭೆ ಅನುಮೋದನೆ ಮಾಡಿರುವ ಹಾಗೂ ಸ್ಥಳವನ್ನು ಗುರುತು ಮಾಡಿರುವ ಜಾಗದಲ್ಲಿ ಸಮುದಾಯದವರು ನಿರ್ಮಿಸಿರುವ ಪ್ರತಿಮೆಯ ಜಾಗವನ್ನು ಖಾತೆ ಮಾಡಿಕೊಡಲು ಪುರಸಭೆಗೆ ನಿರ್ದೇಶನ ನೀಡಲು ನಿಮ್ಮದೇನು ತಕರಾರು? ನಿಮ್ಮ ಸ್ವಪ್ರತಿಷ್ಠೆಯಾದರೂ ಏನು?” ಎಂದು ಅವರು ಪ್ರಶ್ನಿಸಿದ್ದಾರೆ.

“ನಮ್ಮ ಸಮುದಾಯದ ಸ್ವಾಭಿಮಾನದ ಹಣದಿಂದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡೇ ಮಾಡುತ್ತೇವೆ. ನಿಮಗೆ ಸಮುದಾಯದ ಮೇಲೆ ಕಿಂಚಿತ್ತು ಅಭಿಮಾನ, ಕಾಳಜಿ ಮತ್ತು ಗೌರವ ಇದ್ದರೆ ದಯಮಾಡಿ ಸಹಕರಿಸಿ. ಪ್ರತಿಮೆಗಳ ವಿಚಾರದಲ್ಲೂ ನಿಮ್ಮ ರಾಜಕೀಯವನ್ನು ಬೆರೆಸಬೇಡಿ” ಎಂದು ವೇಣು ಭಾರತೀಯ ಪತ್ರದಲ್ಲಿ ತಿಳಿಸಿದ್ದಾರೆ.

ಮಾಸ್ ಮೀಡಿಯಾ ಹಾಸನ‌ ಜಿಲ್ಲಾ ಸಂಯೋಜಕಿ ಗಿರಿಜಾ ಮಾಹಿತಿ ಆದರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್