ಕೊಡಗು | ಮಡಿಕೇರಿ-ಮಂಗಳೂರು ರಸ್ತೆ ಪುನಶ್ಚೇತನಕ್ಕೆ ತ್ವರಿತ ಕಾಮಗಾರಿ

kodagu
  • ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬೆಟ್ಟ ಬಿರುಕು
  • ಭೂಕುಸಿತದಿಂದ ಸಂಪರ್ಕ ಕಡಿತ

ಭಾರೀ ಮಳೆಗೆ ಕೊಡಗು ಜಿಲ್ಲೆಯ ಕರ್ತೋಜಿ ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬೆಟ್ಟವೊಂದು ಬಿರುಕು ಬಿಟ್ಟು ಭೂಕುಸಿತ ಉಂಟಾಗಿದೆ. ಇದರಿಂದಾಗಿ ಮಡಿಕೇರಿ-ಮಂಗಳೂರು ಸಂಪರ್ಕ ಕಡಿತಗೊಂಡಿದೆ. ಎರಡು ನಗರಗಳ ರಸ್ತೆ ಸಂಪರ್ಕ ಸರಿಪಡಿಸಲು ಶುಕ್ರವಾರ ತ್ವರಿತ ಕಾಮಗಾರಿ ನಡೆಯುತ್ತಿದೆ.

ಮಳೆಗೆ ಮಲೆನಾಡು ಸಮೀಪದ ಕರ್ತೋಜಿಯಲ್ಲಿ ಭಾರೀ ಪ್ರಮಾಣದ ಮಣ್ಣು ಸವಕಳಿಯಾಗಿತ್ತು. 2018ರಲ್ಲಿ ಭೂಕುಸಿತವಾಗಿದ್ದ ಬೆಟ್ಟದ ಸ್ಥಳದಲ್ಲೇ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಅಗೆಯುವ ಯಂತ್ರಗಳನ್ನು ಬಳಸಿ ರಸ್ತೆ ತೆರವುಗೊಳಿಸಲಾಗುತ್ತಿದೆ. ಮಣ್ಣನ್ನು ಟಿಪ್ಪರ್‍‌ಗಳ ಮೂಲಕ ಬೇರೆಡೆಗೆ ಸಾಗಿಸಲಾಗುತ್ತಿದೆ. 30ಕ್ಕೂ ಹೆಚ್ಚು ಕಾರ್ಮಿಕರು ಸಂಪರ್ಕ ಸರಿಪಡಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಮಡಿಕೇರಿ ತಾಲೂಕಿನಲ್ಲಿ 3,700 ಮಿ.ಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,000 ಮಿ.ಮೀ ಮಳೆ ಹೆಚ್ಚಾಗಿ ಸುರಿದಿದೆ. ವಿರಾಜಪೇಟೆ ತಾಲೂಕಿನಲ್ಲಿ ಈ ವರ್ಷ ಸರಾಸರಿ 2,030 ಮಿಮೀ ಮಳೆಯಾಗಿದೆ. ಕಳೆದ ವರ್ಷದ ದಾಖಲೆಗಿಂತ 500 ಮಿ.ಮೀ ಹೆಚ್ಚು ಮಳೆಯಾಗಿದೆ. ಸೋಮವಾರಪೇಟೆಯಲ್ಲಿ 2,100 ಮಿ.ಮೀ ಮಳೆಯಾಗಿದ್ದು, 530 ಮಿ.ಮೀ ಹೆಚ್ಚು ಮಳೆ ಸುರಿದಿದೆ.

ಈ ಸುದ್ದಿ ಓದಿದ್ದೀರಾ?: ಬೀದರ್ | ಮೊದಲು ರಾಷ್ಟ್ರ ಪ್ರೇಮ, ನಂತರ ಧರ್ಮ:  ಬಸವಲಿಂಗ ಪಟ್ಟದೇವರು

“ಸಂಚಾರಕ್ಕೆ ಅಡ್ಡಿಯಾಗದಂತೆ ತಡೆಯಲು ತ್ವರಿತವಾಗಿ ದುರಸ್ತಿ ಕೆಲಸ ನಡೆಸಲಾಗುತ್ತಿದೆ. ಮಲೆನಾಡು ಬಳಿಯ ಗುಡ್ಡದ ಮೇಲಿನ ಬಿರುಕನ್ನು ಎಚ್ಚರಿಕೆಯಿಂದ ದುರಸ್ತಿ ಮಾಡಲಾಗುತ್ತಿದೆ. ಹೆಚ್ಚಿನ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಜಿಲ್ಲಾಧಿಕಾರಿ ಸತೀಶ ಬಿ.ಸಿ ಹೇಳಿದ್ದಾರೆ.

2018, 2019 ಮತ್ತು 2020ರಲ್ಲಿಯೂ ಮಳೆಯಿಂದಾಗಿ ರಸ್ತೆಗೆ ತೀವ್ರ ಹಾನಿಯಾಗಿತ್ತು. ಹೆದ್ದಾರಿ ಪ್ರಾಧಿಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದು, ರಸ್ತೆ ಸುರಕ್ಷತೆ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದರು.

ಹೈಡ್ರಾಲಿಕ್ ಯಂತ್ರಗಳ ಮೂಲಕ 35ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ರಸ್ತೆಯ ಇನ್ನೊಂದು ಬದಿಗೆ ಸ್ಥಳಾಂತರಿಸಲಾಗಿದೆ. ದುರಸ್ತಿ ಕೆಲಸ ಮಾಡುವಾಗ ಕಂಬ ಬಿದ್ದರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಆದ್ದರಿಂದ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಲು ‘ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ’ಕ್ಕೆ ಹೆದ್ದಾರಿ ಪ್ರಾಧಿಕಾರಿವು ಸಲಹೆ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್