
- ಹರಿಹರದಲ್ಲಿರುವ ಪ್ರೊ. ಬಿ ಕೃಷ್ಣಪ್ಪ ಅವರ ಸ್ಮಾರಕದಿಂದ ಜಾಥಾ ಪ್ರಾರಂಭ
- ಡಿಸೆಂಬರ್ 11 ರಿಂದ ಫ್ರೀಡಂ ಪಾರ್ಕ್ ಬಳಿ ಅನಿರ್ದಿಷ್ಟಾವಧಿ ಹೋರಾಟ
ಎ ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಐಕ್ಯ ಹೋರಾಟ ಸಮಿತಿ’ ನೇತೃತ್ವದಲ್ಲಿ ಹರಿಹರದಲ್ಲಿರುವ ಪ್ರೊ. ಬಿ ಕೃಷ್ಣಪ್ಪ ಅವರ ಸ್ಮಾರಕದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಜಾಥಾ ಆರಂಭಿಸಲಾಗಿದೆ
ಈ ಕುರಿತು ಐಕ್ಯ ಹೋರಾಟ ಸಮಿತಿಯ ಮುಖಂಡರಾದ ಕರಿಯಪ್ಪ ಗುಡಿಮನಿ, ಈ ದಿನ.ಕಾಮ್ ಜೊತೆಗೆ ಮಾತನಾಡಿ, "ಎ ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಹರಿಹರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಒಳ ಮೀಸಲಾತಿಯಲ್ಲಿ ಅಸ್ಪೃಶ್ಯ ಜಾತಿಗಳಿಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಎ ಜೆ ಸದಾಶಿವ ಆಯೋಗ ವರದಿಯನ್ನು ಸುಲಭವಾಗಿ ಜಾರಿಗೊಳಿಸಬಹುದು” ಎಂದರು.
“ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯು ಶೇಕಡ 15 ಇದ್ದಿದ್ದನ್ನು ಶೇ 17 ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯು ಶೇ 3ರಷ್ಟು ಇದ್ದಿದ್ದನ್ನು ಶೇ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದೆ. ಹಾಗಾಗಿ ಒಳಮೀಸಲಾತಿ ಜಾರಿ ಮಾಡಿದರೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ 101 ಜಾತಿಗಳಿಗೆ ಅನುಕೂಲವಾಗಲಿದೆ” ಎಂದು ಹೇಳಿದರು.

“ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ, ಮಾದಿಗ ಮೀಸಲಾಗಿ ಹೋರಾಟ ಸಮಿತಿ, ಮಾದಿಗ ದಂಡೋರ ಸೇರಿದಂತೆ ರಾಜ್ಯದಾದ್ಯಂತ ಇರುವ ದಲಿತ, ಮಾದಿಗ, ಆದಿಜಾಂಬವ ಸಂಘಟನೆಗಳು ಒಂದುಗೂಡಿ ಐಕ್ಯ ಹೋರಾಟ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಸಮುದಾಯದ ಜನರು ಬೆಂಗಳೂರಿಗೆ ಬರುತ್ತಾರೆ. ಡಿಸೆಂಬರ್ 11ರಂದು ಫ್ರೀಡಂ ಪಾರ್ಕ್ ಬಳಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಕುಂಬಳಕಾಯಿ ಕೇಳುವ ಧೈರ್ಯ ಬೆಳೆಸಿಕೊಳ್ಳಲು ಸತೀಶ್ ಜಾರಕಿಹೊಳಿ ಕರೆ
ಪಾದಯಾತ್ರೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಐಕ್ಯ ಹೋರಾಟ ಸಮಿತಿಯ ಮುಖಂಡರಾದ ಪ್ರೊ. ಸಿ ಕೆ ಮಹೇಶ್, ಎಚ್ ಮಲ್ಲೇಶ್, ಹೆಣ್ಣೂರು ಶ್ರೀನಿವಾಸ, ಅಂಬಣ್ಣ ಆರೋಲಿಕರ್, ಶಿವರಾಯ ಅಕ್ಕರಕಿ, ಕುಂದುವಾಡ ಮಂಜುನಾಥ, ಪಿ ಜೆ ಮಹಾಂತೇಶ್, ಹೆಗ್ಗೆರೆ ರಂಗಪ್ಪ, ಡಿ ಹನುಮಂತಪ್ಪ, ಎಸ್ ಕೇಶವ, ಎಲ್ ನಿರಂಜನಮೂರ್ತಿ, ರಾಯಚೂರು ಹನುಮಂತಪ್ಪ ಕಕ್ಕರಗಲ್, ಬಿ ಎನ್ ಗಂಗಾಧರ ಚಿಕ್ಕಬಳ್ಳಾಪುರ, ಮುಂಡಗೋಡು ಫಕೀರಪ್ಪ, ಎ ಹನುಮಂತಪ್ಪ, ನರಸಪ್ಪ ದಂಡೋರ, ಹೆಣ್ಣೂರು ಶ್ರೀನಿವಾಸ್, ಬಸವರಾಜ್ ಕೌತಾಳ್, ಮೋಹನ್ ರಾಜ್ ಹಾಗೂ ಇತರರು ಭಾಗವಹಿಸಿದ್ದಾರೆ.