ಗೃಹ ಸಚಿವರ ರಾಜೀನಾಮೆ ಅವಶ್ಯಕತೆ ಇಲ್ಲ ; ವಿಪಕ್ಷಗಳ ಆಗ್ರಹಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು

  • ಗೃಹ ಸಚಿವರು ರಾಜೀನಾಮೆ ಕೊಡಬೇಕಿಲ್ಲ:  ಸಿಎಂ 
  • ಗೃಹಸಚಿವರ ದಕ್ಷತೆಯಿಂದಲೇ ಪ್ರಕರಣ ಹೊರಬಂದಿದ್ದು: ಬಸವರಾಜ ಬೊಮ್ಮಾಯಿ

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿದ್ದ ವಿಪಕ್ಷಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಸಚಿವರು ರಾಜೀನಾಮೆ ನೀಡುವ ಪ್ರಸಂಗವೇ ಇಲ್ಲ. ಗೃಹ ಸಚಿವರು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರು ಗಟ್ಟಿ ಆಗಿದ್ದರಿಂದಲೇ ಅಕ್ರಮದ ಪ್ರಕರಣ ಹೊರಬಂದಿದೆ. ಈ ವಿಚಾರ ಹೊರಬಂದ ಕೂಡಲೇ ಸಿಐಡಿ ತನಿಖೆಗೆ ವಹಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ಎಡಿಜಿಪಿ ಅಮೃತ್ ಪಾಲ್ ಬಂಧನ ಬೆನ್ನಲ್ಲೇ ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ನೀಡುವಂತೆ ಆಗ್ರಹಿಸಿದ ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸೇರಿದಂತೆ ಇತರ ಕಾಂಗ್ರೆಸ್‌ ನಾಯಕರುಗಳು ಸರ್ಕಾರವನ್ನು ಒತ್ತಾಯಿಸಿದ್ದರು. ಈ ವಿಚಾರವಾಗಿ ತಮ್ಮ ಬೆಂಗಳೂರಿನ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. 

ಈ ಸುದ್ದಿ ಓದಿದ್ದೀರಾ? : ಪಿಎಸ್ ಐ ಹಗರಣ | ನಮ್ಮ ಸರ್ಕಾರವಾಗಿದ್ದಕ್ಕೆ ಪಾರದರ್ಶಕ ತನಿಖೆ: ಸಿಎಂ ಬೊಮ್ಮಾಯಿ 

 ಕಾಂಗ್ರೆಸ್ ನವರ ಕಾಲದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಪ್ರಕರಣ ದಾಖಲಾಗಿ ಹಿರಿಯ ಪೋಲಿಸ್ ಅಧಿಕಾರಿ ಆರೋಪಿಯಾಗಿದ್ದರು. ಮುಂದೆ ಏನಾಯಿತು?  ಬಂಧನ ದೂರದ ಮಾತು, ಅವರ  ವಿಚಾರಣೆಯನ್ನೂ ಕಾಂಗ್ರೆಸ್ ಮಾಡಲಿಲ್ಲ. ಅದನ್ನು ಬಿಟ್ಟು ನಮ್ಮಂತೆ ಈಗಿನ  ದಿಟ್ಟ ಕ್ರಮವನ್ನು  ಅವರು ತೆಗೆದುಕೊಳ್ಳುತ್ತಿದ್ದರೇ ಎಂದು ಮುಖ್ಯಮಂತ್ರಿಗಳು ಕಾಂಗ್ರೆಸ್‌ ನವರಿಗೆ ಮರುಪ್ರಶ್ನೆ ಹಾಕಿದರು. 

ನಮ್ಮ ಆಡಳಿತದ ಅವಧಿಯಲ್ಲಿ ಅಧಿಕಾರಿಗಳು ಯಾವುದೇ ಮುಲಾಜಿಗೆ ಒಳಗಾಗದೆ ತನಿಖೆ ಕೈಗೊಳ್ಳಲು ಮುಕ್ತ ಅಧಿಕಾರವನ್ನು ನೀಡಲಾಗಿದೆ. ನಮಗೆ ಇಂಥ ಚಟುವಟಿಕೆಗಳ ಬಗ್ಗೆ ಜೀರೋ ಟಾಲರೆನ್ಸ್ ಇದೆ. ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಇಚ್ಚೆ ಇದೆ . ಹೀಗಾಗಿ ದೊಡ್ಡವರಾಗಲೀ, ಸಣ್ಣವರಾಗಲಿ  ಬೇಧವಿಲ್ಲದೆ ಸ್ವಚ್ಛ ಮಾಡುವ ಕೆಲಸ ನಿರಂತರವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ನವರು  ಇದ್ದಿದ್ದರೆ, ಇದೇ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುತ್ತಿದ್ದರು. ಹಿಂದೆ ಹೀಗೆ ಮಾಡಿದ್ದಾರೆ. ಆ ವಿವರಗಳನ್ನು ಕೊಡಲು ನಾನು  ಸಿದ್ಧ ಎಂದು ಬೊಮ್ಮಾಯಿ ತಿಳಿಸಿದರು. 

ಈಗಾಗಲೇ ಪ್ರಕರಣದಲ್ಲಿ 50 ಜನರನ್ನು ಬಂಧಿಸಲಾಗಿದ್ದು, ಇದರಲ್ಲಿ 20 ಜನ ಪೊಲೀಸ್ ಅಧಿಕಾರಿಗಳೇ ಇದ್ದಾರೆ.  ಯಾರನ್ನು , ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಬಹಳ ನಿಯತ್ತಿನಿಂದ  ದಕ್ಷತೆಯಿಂದ ನಮ್ಮ ಗೃಹ ಇಲಾಖೆ ಮತ್ತು ಸಿಬ್ಬಂದ್ದಿಗಳು ಕೆಲಸ ಮಾಡಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಿದ್ದರೆ, ಪ್ರಕರಣ ಹೊರಗೆ ಬರುತ್ತಿರಲಿಲ್ಲ. ಸಿಐಡಿ, ಎಸಿಬಿಯವರು ಒಳ್ಳೆ ಕೆಲಸ ಮಾಡಿದ್ದಾರೆ. ಎಲ್ಲಿ ಪುರಾವೆ ಇದೆಯೋ ಅಲ್ಲಿ ತನಿಖೆ ಮಾಡಲಾಗಿದೆ. ಪುರಾವೆ ಇಲ್ಲದೆ ಏನೂ ಮಾಡಲಾಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಕಾರಣದಿಂದಲೇ ಪ್ರಕರಣ ಅಂತಿಮ ಘಟ್ಟ ಮುಟ್ಟಿದೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.  

ಈ ಸುದ್ದಿ ಓದಿದ್ದೀರಾ? : ಮುಖ್ಯಮಂತ್ರಿಗಳೇ, ನೀವೇ ರಾಜೀನಾಮೆ ಕೊಡುವಿರೋ ಅಥವಾ ಗೃಹ ಸಚಿವರನ್ನು ಕೈಬಿಡುವಿರೋ?: ಕಾಂಗ್ರೆಸ್‌ ಪ್ರಶ್ನೆ

ಈ ಬೆಳವಣಿಗೆ ನಡುವೆಯೇ ತಡರಾತ್ರಿ ವೇಳೆಗೆ ಅಕ್ರಮದ ಉರುಳಲ್ಲಿ ಸಿಲುಕಿ ಬಂಧನಕ್ಕೊಳಗಾದ ಅಮೃತ್‌ ಪೌಲ್‌ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಜೊತೆಗೆ ಲಂಚ ಸ್ವೀಕಾರದ ಆರೋಪದಲ್ಲಿ ಎಸಿಬಿ ಬಲೆಗೆ ಬಿದ್ದು ಜೈಲು ಪಾಲಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್‌ ಅವರನ್ನೂ ಅಮಾನತಿನಲ್ಲಿರಿಸಿ ಸರ್ಕಾರ  ಆದೇಶ ಹೊರಡಿಸಿದೆ. 

ಇದೇ ವೇಳೆ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆ ಹಾನಿ ಪ್ರದೇಶಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿರುವ ಸಿಎಂ, ಸಂತ್ರಸ್ತರಿಗೆ ಅಗತ್ಯ ಪರಿಹಾರ ಕ್ರಮ ನಿಡುವಂತೆ ಸೂಚಿಸಿರುವುದಾಗಿ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180