
- ಎಂಟು ಜನರನ್ನು ಸದಸ್ಯರನ್ನಾಗಿ ನೇಮಿಸಿದ ರಾಜ್ಯ ಸರ್ಕಾರ
- ಮೂರು ವರ್ಷಗಳ ಅವಧಿಗೆ ಷರತ್ತಿಗೊಳಪಡಿಸಿ ಸಮಿತಿ ರಚನೆ
ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಧಾರ್ಮಿಕ ಕ್ಷೇತ್ರವಾದ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಗೆ ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರ ಆಡಳಿತ ಮಂಡಳಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಮೂರು ದಿನಗಳ ಹಿಂದೆ ಕಡೂರಿನಲ್ಲಿ ನಡೆಸಿದ್ದ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಸಿ ಟಿ ರವಿ, 'ಶನಿವಾರದ ಒಳಗೆ ಸರ್ಕಾರ ಆದೇಶ ಹೊರಡಿಸಲಿದೆ' ಎಂದು ಹೇಳಿದ್ದರು. ಇದೀಗ, ಸರ್ಕಾರ ಆಡಳಿತ ಮಂಡಳಿ ರಚಿಸಿ ಶುಕ್ರವಾರ ಸಂಜೆಯೇ ಆದೇಶ ಹೊರಡಿಸಿದೆ.
ಕಳೆದ ನಾಲ್ಕೈದು ದಶಕಗಳಿಂದ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರ ಎಂಬ ಪ್ರಸಿದ್ದಿಯ ಜತೆಗೆ ಹಲವು ವಿವಾದಗಳ ಕಾರಣಕ್ಕೆ ಈ ಜಾಗ ಕುಖ್ಯಾತಿ ಪಡೆದುಕೊಂಡಿತ್ತು.
ಇದೀಗ ಆಡಳಿತ ಮಂಡಳಿ ರಚಿಸಿರುವ ಸರ್ಕಾರ, ದತ್ತಪೀಠಕ್ಕೆ ಅರ್ಚಕರ ನೇಮಕ ಕುರಿತಂತೆ ನಿರ್ಧಾರ ಮಾಡುವ ಅಧಿಕಾರವನ್ನು ಆಡಳಿತ ಮಂಡಳಿಗೇ ನೀಡಿದೆ. ಈ ಆಡಳಿತ ಮಂಡಳಿಗೆ ಸದಸ್ಯರಾಗಲು ಸರ್ಕಾರಕ್ಕೆ 42 ಜನ ಅರ್ಜಿ ಸಲ್ಲಿಸಿದ್ದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅರ್ಜಿದಾರರ ಅರ್ಹತೆ, ಅನರ್ಹತೆ, ವಿದ್ಯಾಭ್ಯಾಸ, ವಿಳಾಸ ಸೇರಿದಂತೆ ಎಲ್ಲರ ಮಾಹಿತಿ ಸಂಗ್ರಹಿಸಿದ್ದರು.


ಅಂತಿಮವಾಗಿ, ಶುಕ್ರವಾರ ಸಂಜೆ ರಾಜ್ಯ ಸರ್ಕಾರ ಎಂಟು ಜನರ ಆಡಳಿತ ಮಂಡಳಿ ಸದಸ್ಯರನ್ನ ನೇಮಕ ಮಾಡಿದೆ. ಇಬ್ಬರು ಮಹಿಳೆಯರು, ಓರ್ವ ಮುಸ್ಲಿಂ ವ್ಯಕ್ತಿ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಸಮಿತಿ ಶೀಘ್ರದಲ್ಲೇ ಸಭೆ ಸೇರಿ, ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ಪೂಜೆ ಹೇಗಿರಬೇಕು? ಅಲ್ಲಿನ ಆಡಳಿತ ವ್ಯವಸ್ಥೆ ಹೇಗಿರಬೇಕು? ಹಿಂದೂ-ಮುಸ್ಲಿಮರು ವಾರದಲ್ಲಿ ಎಷ್ಟು ದಿನ ಪೂಜೆ ಮಾಡಬೇಕು? ಅರ್ಚಕರು ಯಾರಾಗಬೇಕು ಎಂಬ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಲಿದೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಜೆಡಿಎಸ್ ಪಕ್ಷದ ‘ಪಂಚರತ್ನ ರಥ ಯಾತ್ರೆ’ಗೆ ಮುಳಬಾಗಿಲಿನಲ್ಲಿ ಅದ್ದೂರಿ ಚಾಲನೆ
ಕಳೆದ ನಾಲ್ಕೈದು ದಶಕಗಳಿಂದ ಈ ಜಾಗ ವಿವಾದದ ಕೇಂದ್ರಬಿಂದುವಾಗಿದೆ. “ಇನಾಂ ದತ್ತಾತ್ರೇಯ ಪೀಠ ಹಿಂದೂಗಳದ್ದು ಹಾಗೂ ನಾಗೇನಹಳ್ಳಿಯಲ್ಲಿರುವ ದರ್ಗಾ ಮುಸಲ್ಮಾನರಿಗೆ ಸೇರಿದ್ದು” ಎಂದು ಸಂಘ ಪರಿವಾರದ ಕೆಲವರು ವಾದಿಸುತ್ತಾ ಬಂದಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯದತ್ತಿಗಳ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್ 25ರ ಅನ್ವಯ ಹಾಗೂ ಹೈಕೋರ್ಟ್ನಲ್ಲಿ ದಾಖಲಾಗಿರುವ ರಿಟ್ ಅಪೀಲಿನ ಅಂತಿಮ ಆದೇಶಕ್ಕೆ ಒಳಪಟ್ಟು ಮೂರು ವರ್ಷಗಳ ಅವಧಿಗೆ ಷರತ್ತಿಗೊಳಪಡಿಸಿ ಸಮಿತಿ ರಚಿಸಲಾಗಿದೆ.
ಸತೀಶ್ ಕೆ, ಲೀಲಾ ಸಿ.ಜೆ, ಶೀಲಾ ವೆಂಕಟೇಶ್, ಸುಮಂತ್ ಎನ್.ಎಸ್, ಕೆ.ಎಸ್ ಗುರುವೇಶ್, ಜಿ.ಹೆಚ್ ಹೇಮಂತ್ ಕುಮಾರ್, ಎಸ್.ಎಂ ಭಾಷಾ, ಸಿ.ಎಸ್ ಚೇತನ್ ಸೇರಿದಂತೆ ಒಟ್ಟು ಎಂಟು ಜನ ಚಿಕ್ಕಮಗಳೂರು ಮೂಲದವರನ್ನು ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡಲಾಗಿದೆ.