ಸಾಮಾಜಿಕ ಸಾಮರಸ್ಯ ಕದಡುವ ಸಂಘಟನೆಗಳ ವಿರುದ್ಧ ಹೋರಾಡಬೇಕಿದೆ: ಡಿ ಕೆ ಶಿವಕುಮಾರ್‌

D K Shivakumar
  • ಕಾಂಗ್ರೆಸ್ ಭವನದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ
  • “ಸಂವಿಧಾನದ ಮೌಲ್ಯ ಎತ್ತಿ ಹಿಡಿಯಲು ನಾವು ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕೋಣʼ

"ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟುಹಾಕಿ ಸಾಮಾಜಿಕ ಸಾಮರಸ್ಯ ಕದಡುವ ಸಂಘಟನೆಗಳ ವಿರುದ್ಧ ಹೋರಾಡುವ ಮೂಲಕ ಸ್ವಾತಂತ್ರ್ಯ ಕಾಪಾಡಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಪ್ರತಿಪಾದಿಸಿದರು.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿ, “ಸ್ವಾತಂತ್ರ್ಯ ಹೋರಾಟಗಾರರ ಪರಂಪರೆ ಎತ್ತಿ ಹಿಡಿದು, ಯುವ ಪೀಳಿಗೆಗೆ ತಿಳಿಸೋಣ” ಎಂದರು. 

“ಸ್ತ್ರೀಯರ ಅಸಮಾನತೆ, ಶೋಷಣೆ, ಜಾತಿ ಅಸಮಾನತೆ, ನಿರುದ್ಯೋಗ, ಆರ್ಥಿಕ ಸಮಸ್ಯೆ, ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ. ಇವುಗಳಿಗೆ ಪರಿಹಾರ ತಂದು, ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿ ಸಾಮಾಜಿಕ ಪ್ರಗತಿ ಸಾಧಿಸಬೇಕು” ಎಂದರು.

“ಸೋಮವಾರ ಆಯೋಜಿಸಿರುವ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು ದಾಖಲೆ ನಿರ್ಮಿಸಿದ್ದಾರೆ. ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವು ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಬೇಕಿದೆ” ಎಂದು ತಿಳಿಸಿದರು.

“ನಮ್ಮ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ. ಹೀಗಾಗಿ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಕ್ಷ, ಜಾತಿ, ಧರ್ಮ ವ್ಯತ್ಯಾಸ ಮರೆತು ಹೆಜ್ಜೆ ಹಾಕೋಣ. ಈ ಕಾರ್ಯಕ್ರಮ ನಡೆಯುವಾಗ ರಾಷ್ಟ್ರಧ್ವಜ ಕೆಳಗೆ ಬಿದ್ದಿದ್ದರೆ ಅದನ್ನು ಎತ್ತಿಕೊಂಡು ಗೌರವ ಸಲ್ಲಿಸಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಆಗದಂತೆ ನೋಡಿಕೊಳ್ಳಬೇಕು” ಎಂದು ಸೇವಾದಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

“ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನಿಂದ ನಾವೆಲ್ಲರೂ ನಮ್ಮ ಹಿರಿಯರ ತ್ಯಾಗ ಬಲಿದಾನ ಸ್ಮರಿಸಿ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಮಾಡಲು ಸೇರಿದ್ದೇವೆ. ನಾವು ಬಹಳ ಅದೃಷ್ಟವಂತರು. ಸ್ವಾತಂತ್ರ್ಯ ಬಂದಾಗ ನಾವು ಹುಟ್ಟಿರಲಿಲ್ಲ. ಆದರೆ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸಿಹಿ ಅನುಭವಿಸುತ್ತಿದ್ದೇವೆ” ಎಂದು ಬಣ್ಣಿಸಿದರು.

“ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಅಳವಡಿಸಿಕೊಂಡು ಈ ಸ್ವಾತಂತ್ರ್ಯ ಕಾಪಾಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. 1790ರ ದಶಕದಲ್ಲಿ ಶಿವಮೊಗ್ಗದ ಚನ್ನಗಿರಿಯ ಧೋಂಡಿಯಾ ವಾಘ್ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದ. ಹೈದರ್ ಅಲಿ ಮತ್ತು ಟಿಪ್ಪು ಕೂಡ ಬ್ರಿಟಿಷರ ವಿರುದ್ಧ ಹೋರಾಡಿ ಆಂಗ್ಲೋ ಮೈಸೂರು ಯುದ್ಧ ಮಾಡಿದ್ದರು. ಈ ಇತಿಹಾಸ ತಿರುಚಲು ಸಾಧ್ಯವಿಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ದೇಶದ ಸ್ವಾತಂತ್ರ್ಯದಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ನ ಪಾತ್ರವೇನು: ಭೂಪೇಶ್ ಬಘೇಲ್

“1824ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, 1830ರ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 1841 ರಲ್ಲಿ ಬಾದಾಮಿ ಬಂಡಾಯದಲ್ಲಿ ನರಸಿಂಗ ದತ್ತಾತ್ರೇಯ ಪೆಟ್ಕರ್ ಪಾತ್ರ ಸ್ಮರಣಾರ್ಹ. 1957-58 ರಲ್ಲಿ ಸುರಪುರದ ವೆಂಕಟಪ್ಪ ನಾಯಕ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರು. ಹೀಗೆ ದೇಶದೆಲ್ಲೆಡೆ ಒಂದೊಂದೇ ಬಂಡಾಯ ಧ್ವನಿ ಏಳುತ್ತಿದ್ದ ಸಮಯದಲ್ಲಿ 1885 ರಲ್ಲಿ ಕಾಂಗ್ರೆಸ್ ರಚನೆ ಆಯಿತು” ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ನೇತೃತ್ವ ವಹಿಸಿ ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮ ಕೊಟ್ಟರು. ಗಾಂಧೀಜಿ ಅವರು ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿ ಅವರ ನಾಯಕತ್ವ, ಕಾಂಗ್ರೆಸ್ ನೇತೃತ್ವದಲ್ಲಿ ದೇಶದೆಲ್ಲೆಡೆ ಅಹಿಂಸಾ ಚಳವಳಿ ಆರಂಭವಾಯಿತು. ಇವರ ಹೋರಾಟದ ಕಿಚ್ಚು ಆರಿಸಲು ಬ್ರಿಟಿಷರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು” ಎಂದು ಡಿ ಕೆ ಶಿವಕುಮಾರ್ ವಿವರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್