ಇದು ನಮ್ಮ ಸೌಹಾರ್ದ: ರಾಮ ಭಜನೆಯಲ್ಲಿ ಮುಸ್ಲಿಂ ಯುವಕರಿಂದ ಜೈ ಶ್ರೀರಾಮ್‌ ಘೋಷಣೆ

  • ರಂಜಾನ್‌ ಪ್ರಾರ್ಥನೆ ನಂತರ ರಾಮ ಜಪ ಮಾಡಿ ಸೌಹಾರ್ದ ಸಂದೇಶ 
  • ಹನುಮ ಮಾಲಾಧಾರಿಗಳಿಗೆ ಮುಸಲ್ಮಾನರಿಂದ ಹಣ್ಣು ಹಂಪಲು ವಿತರಣೆ

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನಲ್ಲಿ ಹನುಮ ಮಾಲಾಧಾರಿಗಳಿಗೆ ಮುಸಲ್ಮಾನ ಬಾಂದವರು ಹೂವಿನ ಹಾರ ಹಾಕಿ, ಎಳೆನೀರು, ಹಣ್ಣು ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ.

ರಾಮನವಮಿಯಂದು ಮುಸ್ಲಿಂ ಯುವಕರು ರಂಜಾನ್‌ ಉಪವಾಸದ ನಂತರ ಹನುಮ ದೇವರ ಪೂಜಾ ಮಂದಿರಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದಲ್ಲಿ ಆಯೋಜಿಸಿದ್ದ ಭಜನೆಯಲ್ಲಿಯೂ ಪಾಲ್ಗೊಂಡು, ʼಜೈ ಶ್ರೀರಾಮ್‌ʼ ಘೋಷಣೆ ಕೂಗಿ ಭಾವೈಕ್ಯತೆ ಸಾರಿದ್ದಾರೆ. ಅಲ್ಲಿ ಪೂಜಾ ನಿರತರಾಗಿದ್ದ ಹಿಂದೂಗಳಿಗೆ ಪ್ರಸಾದ ವಿತರಸಿ, ನಂತರ ಸ್ಥಳ ಸ್ವಚ್ಚತೆ ಕಾರ್ಯದಲ್ಲೂ ಭಾಗಿಯಾಗಿದ್ದಾರೆ. 

ಶ್ರೀದೇವಿ ಬೀರೇಶ್ವರ ಬೆಟ್ಟದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಹಾಗೂ ತಂಡದವರು ಹನುಮ ಮಾಲೆ ಧರಿಸಿ ಯಾತ್ರೆ ಮಾಡಿದ್ದರು. ಈ ವೇಳೆ ಕಾರಟಗಿಯ ರಜಬ್‌ವಲಿ, ಖಾದರ್‌ ಭಾಷಾ, ರಹೆಮಾನ್ ಮುಲ್ಲಾ, ಫಕೃದ್ಧೀನ್, ವಲಿಭಾಷಾ ನೇತೃತ್ವದ ಮುಸ್ಲಿಂ ಯುವಕರ ತಂಡ ಬೆಟ್ಟಕ್ಕೆ ತೆರಳಿ, ಮಾಲಾಧಾರಿಗೊಳೊಂದಿಗೆ ಹಮುಮಾನ್ ಚಾಲೀಸ್‌ ಪಠಿಸಿದೆ. 

ಹಿಂದೂ-ಮುಸಲ್ಮಾನರ ಸೌಹಾರ್ದ ಭೇಟಿ ವೇಳೆ ಶಿವರಾಜ ತಂಗಡಗಿ ಮಾತನಾಡಿದರು. "ಸಮಾಜದಲ್ಲಿ ಧರ್ಮಬೇಧವಿಲ್ಲದೆ ಪ್ರತಿಯೊಬ್ಬರೂ ಸೌಹಾರ್ದತೆ, ಸಹಬಾಳ್ವೆಯಿಂದ ಬದುಕುವುದೇ ಎಲ್ಲಾ ಧರ್ಮಗಳ ಸಾರವಾಗಿದೆ. ಜನಾಂಗೀಯ ದ್ವೇಷ ಯಾವ ಧರ್ಮ ಗ್ರಂಥಗಳಲ್ಲಿಯೂ ಇಲ್ಲ. ಕೆಲವತು ತಮ್ಮ ಸ್ವಾರ್ಥಕ್ಕಾಗಿ ಧರ್ಮಗಳ ನಡುವೆ ಕಲಹ ಸೃಷ್ಠಿಸುತ್ತಿದ್ದಾರೆ. ಅಂತವರಿಗೆ ಶ್ರೀರಾಮ ಮತ್ತು ಆತನ ಭಂಟ ಹನುಮ ಒಳ್ಳೆಯ ಬುದ್ಧಿ ಕರುಣಿಸಲಿ" ಎಂದು ಮಾಜಿ ಸಚಿವರು ಹೇಳಿದ್ದಾರೆ. 

"ಸ್ವಧರ್ಮದ ಮೇಲಿನ ಪ್ರೇಮದ ಜೊತೆಗೆ ಸರ್ವಧರ್ಮಗಳನ್ನು ಗೌರವಿಸುವುದು ನಿಜವಾದ ಧರ್ಮ. ಮನುಷ್ಯ ಮನುಷ್ಯರನ್ನು ಪ್ರೀತಿ, ಸೌಹಾರ್ದತೆ, ನಂಬಿಕೆ, ಗೌರವಗಳಿಂದ ಕಾಣಬೇಕು. ಇಲ್ಲಿ ನಾವು ರಾಮನ ಪೂಜೆ, ಭಜನೆಯಲ್ಲಿ ಪಾಲ್ಗೊಂಡದ್ದರ ಸಾರ ಕೂಡ ಇದೆಯಾಗಿದೆ" ಎಂದು ಮುಸ್ಲಿಂ ಯುವಕರ ತಂಡದಲ್ಲಿ ಒಬ್ಬರಾದ ರಜಬ್‌ವಲಿ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್