ಇದು ನಮ್ಮ ಸೌಹಾರ್ದ | ಮಸೀದಿ ನಿರ್ಮಾಣಕ್ಕೆ ಜಾಗ ನೀಡಿದ ರೈತ ಮುಖಂಡ

  • 1990ರಲ್ಲಿಯೇ ಮಸೀದಿ ನಿರ್ಮಾಣಕ್ಕೆ ಜಾಗ ನೀಡಿದ್ದ ಸಹೃದಯಿ
  • ಕೋಮುಗಲಭೆಯಿಂದಾಗಿ ಗ್ರಾಮದಲ್ಲೂ ಸಾಮಾಜಿಕ ಅಶಾಂತಿ

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಅವರ ಜಾಗದಲ್ಲಿ ಮಸೀದಿ ತಲೆ ಎತ್ತಿದೆ. ದಾವಣಗೆರೆ ಜಿಲ್ಲೆಯ ಸೌಹಾರ್ದ ಬದುಕಿಗೆ ಮಾದರಿಯಾಗಿ ನಿಂತಿದೆ. 

ದಾವಣಗೆರೆ ತಾಲ್ಲೂಕಿನ ಬಲ್ಲೂರು ಗ್ರಾಮದಲ್ಲಿ 4 ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಅವರು ಪ್ರಾರ್ಥನೆ ಸಲ್ಲಿಸಲು ಮಂದಿರವಿರಲಿಲ್ಲ. ಮೊಹರಂ, ರಂಜಾನ್ ಸೇರಿದಂತೆ ಇತೆ ಸಂದರ್ಭದಲ್ಲಿ ರಸ್ತೆಯಲ್ಲಿಯೇ ನಿಂತು ನಮಾಜ್ ಮಾಡಬೇಕಿತ್ತು. 

Eedina App

ಇದೆಲ್ಲವನ್ನು ಗಮನಿಸಿದ ಸಹೃದಯಿ ರವಿಕುಮಾರ್‌ ಅವರು ಅನ್ಯಕೋಮಿನ ಜನರ ಧಾರ್ಮಿಕ ಕಾರ್ಯಗಳಿಗೆ ಅನುಕೂಲವಾಗಲೆಂದು 30 ವರ್ಷಗಳ ಹಿಂದೆಯೇ 40*40 ಅಳತೆಯ ತಮ್ಮ ಪಿತ್ರಾರ್ಜಿತ ಜಾಗವನ್ನು ಮಸೀದಿಗಾಗಿ ದಾನ ಮಾಡಿದ್ದರು. ಇದೀಗ, ಆ ಜಾಗದಲ್ಲಿ ಸುಂದರ ಮದೀಸಿ ನಿರ್ಮಾಣಗೊಂಡಿದೆ. 

ಈ ಬಗ್ಗೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ರೈತ ಮುಖಂಡ ಬಲ್ಲೂರು ರವಿಕುಮಾರ್, “1990ರಲ್ಲಿಯೇ ಮಸೀದಿ ನಿರ್ಮಾಣಕ್ಕೆ ಜಾಗ ನೀಡಿದ್ದೇವು. ಆದರೆ ಹಣಕಾಸಿನ ಸಮಸ್ಯೆಯಿಂದ ಕಾಮಗಾರಿ ಪೂರ್ಣ ಆಗಿರಲಿಲ್ಲ. ಈಗ ಕೆಲವು ದಿನಗಳಿಂದ ಕಾಮಗಾರಿಯನ್ನು ಮುಂದುವರೆಸಿದ್ದಾರೆ. ಮುಸ್ಲಿಂ ಸೋದರರಿಗೆ ಮಸೀದಿಯ ಅವಶ್ಯಕತೆ ಇತ್ತು. ಹಾಗಾಗಿ ಮಾನವೀಯತೆ ದೃಷ್ಠಿಯಿಂದ ಜಾಗ ನೀಡಿದ್ದೇವೆ” ಎಂದು ತಿಳಿಸಿದರು.

AV Eye Hospital ad

“ಹಿಂದಿನಿಂದಲೂ ಎರಡು ಸಮದಾಯದವರು ವಿಶ್ವಾಸದಿಂದ ಇದ್ದೇವೆ. ಎಲ್ಲ ಧರ್ಮದಲ್ಲಿಯೂ ಕೆಲವರು ಕೆಟ್ಟವರು ಇರುತ್ತಾರೆ. ಅದಕ್ಕಾಗಿ ಇಡೀ ಸಮುದಾಯವನ್ನೇ ದೂಷಣೆ, ದ್ವೇಷ ಮಾಡುವುದು ಸರಿಯಲ್ಲ. ರಾಜಕಾರಣಿಗಳು ಓಟಿಗಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ. ಮಾಧ್ಯಮ ಕೂಡ ತನ್ನ ಜವಾಬ್ದಾರಿ ಮರೆತು ಧಾರ್ಮಿಕ ಮುಖಂಡರು, ಸಂಘ-ಸಂಸ್ಥೆಯವರನ್ನು ಕರೆದು ಚರ್ಚೆ ನಡೆಸಿ ವಿವಾದವನ್ನು ವೈಭವೀಕರಿಸುತ್ತಿವೆ” ಎಂದು ಸರ್ಕಾರ ಮತ್ತು ಮಾಧ್ಯಮದ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಸಷ್ಣುತೆ ಬೆಳೆಯುತ್ತಿರುವ ಸಂದರ್ಭದಲ್ಲಿ ಮಸೀದಿ ನಿರ್ಮಾಣ ಮತ್ತು ಗ್ರಾಮದ ಸ್ಥಿತಿಗತಿಗಳ ಕುರಿತು ಮುಕ್ಬಾಲ್‌ ಸಾಬ್ ಈ ದಿನ.ಕಾಮ್‌ನೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

"ರವಿಕುಮಾರ್‌ ಅವರು ಈ ಹಿಂದೆಯೇ ಮಸೀದಿಗಾಗಿ ಜಾಗ ನೀಡಿದ್ದರು. ಅಲ್ಲದೆ, ಅವರೇ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಮುತುವರ್ಜಿ ವಹಿಸಿದ್ದರು. ವಕ್ಫ್ ಬೋರ್ಡ್‌ನಿಂದ 3 ಲಕ್ಷರೂ ಅನುದಾನ ಮತ್ತು ಹಲವರ ದೇಣಿಗೆ ಹಣದಿಂದ ಕಾಮಗಾರಿ ನಡೆದಿದೆ. ಈಗ ಮಸೀದಿಯ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಆದರೆ ಊರಿನ ಕೆಲವು ಮಂದಿ - ಮಸೀದಿ ಕಟ್ಟಲು ಜಾಗ ಕೊಡಬೇಡಿ, ವಾಪಸ್‌ ಪಡೆಯಿರಿ ಎಂದು ಗಲಾಟೆ ಮಾಡಿದ್ದರು. ಆದರೆ ರವಿಕುಮಾರ್‌ ಅವರ ಸಹಕಾರವೇ ಇವತ್ತಿನ ಸಂದರ್ಭದಲ್ಲಿ ನಮಗೆ ರಕ್ಷಾಕವಚದಂತಿದೆ” ಎಂದು ಅವರು ನಿಟ್ಟುಸಿರುಬಿಟ್ಟರು. 

ಇದನ್ನು ಓದಿದ್ದೀರಾ? ಮುಳ್ಳುಹಾದಿಗೆ ಮಣ್ಣು ಹೊತ್ತವರು | ಪದವಿ ಪಡೆದ ಭಾರತದ ಮೊದಲ ದಲಿತ ಮಹಿಳೆ ದಾಕ್ಷಾಯಿಣಿ ವೇಲಾಯುಧನ್

“ಊರಿನಲ್ಲಿ ಮುಂಚೆ ನಮ್ಮೊಂದಿಗೆ ಎಲ್ಲರೂ ಚೆನ್ನಾಗಿದ್ದರು. ಆದರೆ, ರಾಜ್ಯದಲ್ಲಿ ಇತ್ತಿಚ್ಚಿನ ದಿನಗಳಲ್ಲಿ ನಡೆದ ಘಟನೆಗಳಿಂದ ಊರ ಜನರು ಹೆದರಿ ನಮ್ಮನ್ನು ತಪ್ಪುತಿಳಿದುಕೊಂಡಿದ್ದಾರೆ. ನಾವಿರುವ 4 ಕುಟುಂಬಗಳಲ್ಲಿ ಯಾರಿಗೂ ಕಲ್ಮಾ ಓದಲು ಬರುವುದಿಲ್ಲ. ಹಾಗಾಗಿ ಪಕ್ಕದ ಊರಿಂದ ಜನ ಕರೆಸಿ ಕಲ್ಮಾ ಓದಿಸುತ್ತಿದ್ದೆವು. ಆದರೆ ಊರವರು ಅದಕ್ಕೆ ನಿಷೇಧ ಹೇರಿದ್ದಾರೆ. 'ನೀವು ಹೊರಗಿನವರನ್ನು ಕರೆತಂದು ಜನ ಜಾಸ್ತಿ ಆಗಿ ನಮಗೆ ತೊಂದರೆ ಮಾಡುತ್ತಿರಿ. ಹಾಗಾಗಿ ನೆರೆ ಊರಿನ ನಿಮ್ಮ ಸಮುದಾಯದವರು ಯಾರು ಮಸೀದಿಗೆ ಬರುವಂತಿಲ್ಲ' ಎಂದು ಕೆಲವರು ನಿರ್ಬಂಧ ಹಾಕಿದ್ದಾರೆ. ನಾವು ಕೂಡ ಊರಿನವರ ವಿರೋಧ ಕಟ್ಟಿಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ಇನ್ನೊಮ್ಮೆ ಊರ ಮುಖಂಡರನ್ನು ಮನವಿ ಮಾಡಿ ಅವಕಾಶ ಕೇಳಲು ತೀರ್ಮಾನಿಸಿದ್ದೇವೆʼ ಎಂದು ಮುಕ್ಬಾಲ್ ಮಮ್ಮಲ ಮರುಗಿದರು.

ಗ್ರಾಮದ ಮುಸ್ಲಿಂ ಸಮುದಾಯ ತಮ್ಮ ಧಾರ್ಮಿಕ ಆಚರಣೆಯ ವಸ್ತುಗಳನ್ನು ಇಲ್ಲಿನ ದೇವಸ್ಥಾನದಲ್ಲಿ ಇಟ್ಟುಕೊಳ್ಳುತ್ತಿದ್ದರು. ಆದರೆ 1990ರಲ್ಲಿ ಜಿಲ್ಲೆಯೊಳಗೆ ಕೋಮುಗಲಭೆ ನಡೆದಿದ್ದರಿಂದ ಊರಿನ ಕೆಲವರು ಪೂಜಾ ಸಾಮಾಗ್ರಿಗಳನ್ನು ದೇವಸ್ಥಾನದಿಂದ ಹೊರಹಾಕಿದ್ದರು. ಆ ವೇಳೆ ಮುಸ್ಲಿಂ ಸಮುದಾಯಕ್ಕೆ ಸ್ಥೈರ್ಯ ತುಂಬಿದ ರೈತ ಮುಖಂಡ ರವಿಕುಮಾರ್‌ ಅವರು ಮಸೀದಿ ನಿರ್ಮಾಣಕ್ಕೆ ಜಾಗ ನೀಡಿದ್ದರು ಎಂದು ಅವರು ವಿವರಿಸಿದ್ದಾರೆ.

ಈಗ ನಿರ್ಮಾಣವಾಗಿರುವ ಜಾಮಿಯಾ ಮಸೀದಿ ಮುಂಭಾಗದಲ್ಲಿ ರವಿಕುಮಾರ್‌ ಅವರ ತಾತ ಬಿ.ಎಂ ಚನ್ನಯ್ಯ ಅವರ ಹೆಸರಿನ ಫಲಕವನ್ನು ಇರಿಸುವ ಮೂಲಕ ಮುಸ್ಲಿಂ ಸಮುದಾಯ ಧನ್ಯತೆ ತೋರಿದೆ.

ಬಲ್ಲೂರಿನಲ್ಲಿ ಮುಸ್ಲಿಂ ಸಮುದಾಯದ 4 ಕುಟುಂಬಗಳು ಮಾತ್ರ ಇವೆ. ಜೀವನೋಪಾಯಕ್ಕೆ ಸಣ್ಣ ಪ್ರಮಾಣದಲ್ಲಿ ಉಳುಮೆ ಮಾಡುವುದರ ಜೊತೆಗೆ ಮೀನು ಮಾರಾಟ ಮಾಡುವುದನ್ನು ಆಶ್ರಹಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app