ಇದು ನಮ್ಮ ಸೌಹಾರ್ದ | ರಂಝಾನ್ - ರಾಮನವಮಿ ಹಬ್ಬದಲ್ಲಿ ಭಕ್ತರ ಬಾಂಧವ್ಯ

  • ರಾಮಸಾಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವ್ಯ
  • ಪರಸ್ಪರ ಶುಭಕೋರಿ ರಾಮನವಮಿ ಮತ್ತು ರಂಝಾನ್‌ ಪ್ರಾರ್ಥನೆ

ರಾಮಸಾಗರದ ಹಿಂದೂ ಮತ್ತು ಮುಸ್ಲಿಂ ಬಾಂಧವರು ರಾಮನವಮಿ ಮತ್ತು ರಂಝಾನ್‌ ಪ್ರಾರ್ಥನೆ ವೇಳೆ ಪರಸ್ಪರ ಶುಭ ಹಾರೈಸುವ ಮೂಲಕ "ನಾವೆಲ್ಲ ಒಂದೇ" ಎಂಬ ಸಂದೇಶ ಸಾರಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ಜನರು ರಾಮನವಮಿಗೆ ಹೊಸಪೇಟೆ ತಾಲೂಕಿನ ವೆಂಕಟಾಪುರದ ಸಮೀಪವಿರುವ ಮಾಲ್ಯವಂತ ಬೆಟ್ಟದ ಮೇಲಿನ ರಾಮ ದೇವಸ್ಥಾನಕ್ಕೆ ಪಾದಯಾತ್ರೆ ಹೋಗುವುದು ವಾಡಿಕೆ. ಈ ವೇಳೆ ರಾಮ ಭಕ್ತರಿಗೆ ಮುಸ್ಲಿಂ ಬಂಧುಗಳು ಕೇಸರಿ ಶಾಲು ಹೊದಿಸಿ ಶುಭ ಹಾರೈಸಿದ್ದಾರೆ.

ರಂಜಾನ್‌ ಉಪವಾಸದ ಪ್ರಯುಕ್ತ ಮಂಗಳವಾರ ಸಂಜೆ ರಾಮಸಾಗರ ಗ್ರಾಮದ ಮುಸ್ಲಿಂ ಸಮುದಾಯ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಹಿಂದೂಗಳು ಮಸೀದಿಗೆ ಭೇಟಿ ನೀಡಿ ಶುಭ ಕೋರಿದ್ದಾರೆ. ಅಲ್ಲದೆ, ಮುಸ್ಲಿಂ ಸೋದರರಿಗೆ ಹಣ್ಣುಹಂಪಲು ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ಇದನ್ನು ಓದಿದ್ದೀರಾ? ಇದು ನಮ್ಮ ಸೌಹಾರ್ದ: ಕಲ್ಬುರ್ಗಿಯಲ್ಲಿ ಶ್ರೀರಾಮನ ಭಕ್ತರಿಗೆ ಮುಸ್ಲಿಂ ಸಹೋದರರ ಆತಿಥ್ಯ

ಈ ಬಗ್ಗೆ ರಾಮಸಾಗರ ಗ್ರಾಮದ ಯುವಕ ಭುವನ್‌ ಅವರು ಈ ದಿನ.ಕಾಂ ಜೊತೆಗೆ ವಿವರ ಹಂಚಿಕೊಂಡಿದ್ದಾರೆ. "ಧಾರವಾಡದಲ್ಲಿ ನಬೀ ಸಾಬ್‌ ಅವರ ಕಲ್ಲಂಗಡಿ ಹಣ್ಣಿನ ಅಂಗಡಿ ಧ್ವಂಸ ಪ್ರಕರಣ, ಹಿಜಾಬ್‌ ಪ್ರಕರಣ, ಆಜಾನ್‌ ಕೂಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಘಟನೆಗಳೆಲ್ಲ ಎರಡು ಸಮುದಾಯಗಳ ನಡುವೆ ಸಾಮರಸ್ಯ ಕದಡಲು ಕಾರಣವಾಗಿತ್ತು. ನಮ್ಮ ನೆರೆಹೊರೆಯವರನ್ನು ಶತ್ರುಗಳಂತೆ ಕಾಣುವ ವಿಷಮ ಸ್ಥಿತಿ ಮೀರಿ, ಒಂದಾಗಿ ಬಾಳುವ ಸಂದೇಶ ಸಾರುವ ಉದ್ದೇಶದಿಂದ ಈ ಸೌಹಾರ್ದ ಕಾರ್ಯಕ್ರಮ ನಡೆದಿದೆ" ಎಂದು ಭುವನ್‌ ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್