
- ಶಾಂತಿ, ಸಮಾನತೆಗಾಗಿ ವಿಶಿಷ್ಟ ಕಾರ್ಯಕ್ರಮ
- ಸೌಹಾರ್ದದ ಮುನ್ನುಡಿ ಬರೆಯುವಂತಾಗಲಿ ಎಂದು ಹಾರೈಕೆ
ಮಂಗಳೂರಿನ ಹೃದಯ ಭಾಗದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಜೈನ ಧರ್ಮ ಅನುಯಾಯಿಗಳು ಸೇರಿ 'ಇಫ್ತಾರ್ ಕೂಟ' ನಡೆಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು.
ಮಂಗಳೂರಿನ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ದಿನೇಶ್ ಹೆಗ್ಡೆ ಉಳೇಪಾಡಿ ನೇತೃತ್ವದ 'ಸಹಕಾರ ನ್ಯಾಯ ಕೂಟ'ದ ವತಿಯಿಂದ 'ಇಫ್ತಾರ್ ಮುಸ್ಸಂಜೆ' ಕಾರ್ಯಕ್ರಮ ಶುಕ್ರವಾರ ನಡೆಯಿತು.
ನಗರದ ಬಲ್ಮಠ ಸಹೋದಯ ಸಭಾಂಗಣದ ಹತ್ತಿರದ ಹೆಬಿಕ್ ತಾಂತ್ರಿಕ ತರಬೇತಿ ಸಂಸ್ಥೆಯ ಆವರಣದ ಆಲದ ಮರದಡಿಯಲ್ಲಿ ಸಮಾನ ಮನಸ್ಕರೆಲ್ಲ ಸೇರಿದ್ದು, ವಿಶಿಷ್ಟವಾಗಿ ಕಾರ್ಯಕ್ರಮ ಮೂಡಿಬಂತು.
ಕಾರ್ಯಕ್ರಮದಲ್ಲಿ ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಡಾ ಎಂ ಎಸ್ ಎಂ ಝೈನಿ ಕಾಮಿಲ್ ಅವರು ಮಾತನಾಡಿ, "ಇಸ್ಲಾಂ ಧರ್ಮದ ಬಗ್ಗೆ ಕೆಲವರಿಗೆ ಅಪನಂಬಿಕೆ, ಅಸಹಿಷ್ಣುತೆ ಇದೆ. ಪರಸ್ಪರ ಅರ್ಥ ಮಾಡಿಕೊಂಡರೆ ಸಮಸ್ಯೆ ದೂರವಾಗಬಹುದು. ನ್ಯಾಯವಾದಿ ದಿನೇಶ್ ಹೆಗ್ಡೆ ಇಂತಹ ವೇದಿಕೆಯ ಮೂಲಕ ಧರ್ಮಗಳ ಸಮನ್ವಯತೆಗೆ ನಾಂದಿ ಹಾಡಿರುವುದು ಅಭಿನಂದನೀಯ" ಎಂದರು.
ಇದನ್ನು ಓದಿದ್ದೀರಾ? ಲಾರ್ಡ್ಸ್ ಮೈದಾನದಲ್ಲಿ ಮೊದಲ ಬಾರಿಗೆ ಇಫ್ತಾರ್ ಕೂಟ
"ಇಸ್ಲಾಂ ಧರ್ಮ ಯಾವತ್ತೂ ಮತಾಂತರ ಮತ್ತು ಲವ್ ಜಿಹಾದ್ಗೆ ಕರೆ ನೀಡಿಲ್ಲ. ಇಸ್ಲಾಂ ಧರ್ಮದ ತಿರುಳನ್ನು ಅರ್ಥೈಸಿಕೊಳ್ಳಲಾಗದವರು ಎಲ್ಲದಕ್ಕೂ ಸಂಕುಚಿತ ಅರ್ಥ ಕಲ್ಪಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಆಸ್ಪದ ನೀಡಿದ್ದಾರೆ. ಹಾಗಾಗಿ ಯುವಜನರನ್ನು ದಾರಿ ತಪ್ಪಿಸುವ ವರ್ಗದ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ. ಮುಸ್ಲಿಮರನ್ನು ಕಂಡರೆ ಸಂಶಯಿಸುವ ಗುಂಪುಗಳಿಗೆ ಈ ವೇದಿಕೆಯೇ ಸೌಹಾರ್ದದ ಮುನ್ನುಡಿ ಬರೆಯುವಂತಾಗಲಿ" ಎಂದು ಆಶಿಸಿದರು.
ಮಂಗಳೂರಿನ ರಾಮಕೃಷ್ಣ ಮಿಷನ್ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಮಾತನಾಡಿ, "ನಮ್ಮಲ್ಲಿ ಹಲವು ಮತ, ಪಂಥಗಳು ಇರಬಹುದು. ಆದರೆ ಸಮನ್ವಯತೆಗೆ, ಭಾತೃತ್ವಕ್ಕೆ ಎಂದೂ ಧಕ್ಕೆಯಾಗಬಾರದು. ಸಮಾನತೆ, ಸರಳತೆ ಈ ದೇಶದ ಭವ್ಯ ಸಂಸ್ಕೃತಿಯಾಗಿದೆ ಹಾಗಾಗಿ ಪ್ರಸ್ತುತದ ದಿನಗಳಲ್ಲಿ ಅದರ ಅಗತ್ಯ, ಅನಿವಾರ್ಯ ಹಾಗೂ ಸೂಕ್ಷ್ಮತೆಯನ್ನು ಮನಗಂಡು ಸೌಹಾರ್ದದ ಬದುಕು ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ" ಎಂದು ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಅವರು ಮಾತನಾಡಿ, "ದೇಶದ 121 ಕೋಟಿ ಜನಸಂಖ್ಯೆಯಲ್ಲಿ ಗರಿಷ್ಠ 1 ಕೋಟಿಯಷ್ಟು ಜನರು ಸೌಹಾರ್ದ ಕದಡಬಹುದು. ಆದರೆ ದೇಶದ 120 ಕೋಟಿ ಜನರು ಸೌಹಾರ್ದ ಬಯಸುತ್ತಾರೆ ಎಂಬುದನ್ನು ಮರೆಯಬಾದರು. ಈ ವೇದಿಕೆ ಆ ಸೌಹಾರ್ದತೆಗೆ ಸಾಕ್ಷಿಯಾಗಲಿ" ಎಂದರು.
ಚಿಂತಕ ಅರವಿಂದ ಚೊಕ್ಕಾಡಿ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೆಥೆಡ್ರಲ್ನ ಸಭಾಪಾಲಕ ರೆವರೆಂಡ್ ಎಂ ಪ್ರಭುರಾಜ್ ಸೇರಿದಂತೆ ಹಲವರು ಭಾಗವಹಿಸಿದರು.