ಇದು ನಮ್ಮ ಸೌಹಾರ್ದ: ಬೇಲೂರು ರಥೋತ್ಸವದಲ್ಲಿ ಸಾಂಪ್ರದಾಯಿಕ ಕುರಾನ್‌ ಪಠಣ

  • ಬೇಲೂರು ಚನ್ನಕೇಶವ ದೇವಾಲಯ ರಥೋತ್ಸವಕ್ಕೆ ಚಾಲನೆ
  • ಸರ್ವ- ಧರ್ಮದವರು ವ್ಯಾಪಾರ ನಡೆಸಲು ಅವಕಾಶ

ಹಾಸನ ಜಿಲ್ಲೆಯ ಬೇಲೂರಿನ ಐತಿಹಾಸಿಕ ದೇಗುಲ ಚನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ಸಾಂಪ್ರದಾಯಿಕ ಪದ್ಧತಿಯಂತೆ ಮೌಲ್ವಿ ಸೈಯ್ಯದ್‌ ಸಜ್ಜಾದ್ ಬಾಷಾ ಕುರಾನ್ ಪಠಿಸುವ ಮೂಲಕ ಸೌಹಾರ್ದಯುತ ಆಚರಣೆಗೆ ಚಾಲನೆ ನೀಡಿದರು.

ದೇವಾಲಯದ ಸಂಕೀರ್ಣದಲ್ಲಿ ಮುಸ್ಲಿಂ ಮಾರಾಟಗಾರರ ತೆರವಿಗೆ ದೇವಸ್ಥಾನದ ಆಡಳಿತ ಸಮಿತಿ ನೊಟೀಸ್ ನೀಡಿದ  ಘಟನೆ ಹಿನ್ನೆಲೆಯಲ್ಲಿ ದೇಗುಲದ ರಥೋತ್ಸವದ ಸಾಂಪ್ರದಾಯಿಕ ಕುರಾನ್‌ ಪಠಣದ ಆಚರಣೆ ಕುತೂಹಲ ಮೂಡಿಸಿತ್ತು.

ಚನ್ನಕೇಶವ ಸ್ವಾಮಿ ರಥೋತ್ಸವಕ್ಕೆ ಬುಧವಾರದಿಂದ ಅಧಿಕೃತ ಚಾಲನೆ ಸಿಕ್ಕಿದ್ದು, ರಥೋತ್ಸವ ಆರಂಭಕ್ಕೆ ಮುನ್ನ ಪದ್ಧತಿಯಂತೆ ಬೇಲೂರು ತಾಲೂಕಿನ ದೊಡ್ಡಮಳೂರು ಗ್ರಾಮದ ಮುಸ್ಲಿಂ ಧರ್ಮಗುರು ಸೈಯದ್ ಸಜ್ಜಾದ್ ಬಾಷಾ ಕುರಾನ್ ಪಠಣ ಮಾಡಿದರು. 

ಪಠಣದ ನಂತರ ಸೈಯದ್ ಸಜ್ಜಾದ್ ಬಾಷಾ ಮಾತನಾಡಿ "ನಾವು ವಂಶ ಪಾರಂಪರ್ಯವಾಗಿ ಚನ್ನಕೇಶವನಿಗೆ ಈ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಈ ಸೇವೆಗೆ ಪ್ರತಿ ವರ್ಷ ಧವಸ-ಧಾನ್ಯವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ನನ್ನ ನಂತರವೂ ರಥೋತ್ಸವದಲ್ಲಿ ಕುರಾನ್‌ ಪಠಣ ಸೇವೆಯನ್ನು ನಮ್ಮ ಕುಟುಂಬ ಮುಂದುವರಿಸುತ್ತದೆ" ಎಂದು ಅಭಿಮಾನದಿಂದ ನುಡಿದರು. 

"ರಾಜ್ಯದೆಲ್ಲೆಡೆ ಮಳೆ-ಬೆಳೆ ಹುಲುಸಾಗಲಿ. ಎಲ್ಲರಿಗೂ ಒಳಿತಾಗಲಿ, ಶುಭವಾಗಬೇಕು. ವಿಶ್ವದಲ್ಲೆಡೆ ಶಾಂತಿ-ಸೌಹಾರ್ದ ನೆಲೆಸಲಿ. ಎಲ್ಲ ಧರ್ಮದವರು ನೆಮ್ಮದಿಯಿಂದ ಬದುಕುವಂತಾಗಲಿ" ಎಂದು ಪ್ರಾರ್ಥಿಸಿದ್ದಾಗಿ ಹೇಳಿದರು.

ಇದನ್ನು ಓದಿದೀರಾ? ಕುರಾನ್‌ ಪಠಣ ಮಾಡಿ ಸಾಮರಸ್ಯ ಸಾರಿದ ಬೇಲೂರು ದೇಗುಲದಲ್ಲಿ ಹಿಂದುಯೇತರ ವ್ಯಾಪಾರಿಗೆ ನಿರ್ಬಂಧ

ರಾಜ್ಯದೆಲ್ಲೆಡೆ ಸಂಭವಿಸಿದ ಹಿಜಾಬ್‌-ಹಲಾಲ್‌ ವಿಚಾರಗಳು ಸಾಮಾಜಿಕ ಅಶಾಂತಿಗೆ ಕಾರಣವಾಗಿದ್ದವು. ಧಾರವಾಡದ ನುಗ್ಗೀಕೇರಿ ಹನುಮಗುಡಿ ಮುಂದೆ ನಭೀಸಾಬ್‌ ಅಂಗಡಿ ಧ್ವಂಸ ಪ್ರಕರಣವಂತೂ ಮನುಷ್ಯತ್ವದ ಇರುವಿಕೆಯನ್ನೇ ಪ್ರಶ್ನಿಸುವಂತೆ ಮಾಡಿತ್ತು. ಇಂಥ ಅಹಿತಕರ ಪ್ರಕರಣಗಳು ಸರಣಿಯೋಪಾದಿಯಲ್ಲಿ ನಡೆಯುವ ಇಂಥ ಸಂದರ್ಭದಲ್ಲಿ ಬೇಲೂರಿನ ಚನ್ನಕೇಶವ ಸ್ವಾಮಿ ರಥೋತ್ಸವದ ಕುರಾನ್‌ ಪಠಣ ದೇಶದ ಸೌಹಾರ್ದ ಬದುಕಿನ ಇತಿಹಾಸದ ಸಂದೇಶ ನೀಡಿದಂತಿತ್ತು.

Image

ಶ್ರೀ ಚನ್ನಕೇಶ್ವರ ಸ್ವಾಮಿ 4 ಮೂಲೆ ಅಡ್ಡೆಗಾರರ ಸಂಘದ ಪದಾಧಿಕಾರಿ ತಾರೇಶ್‌ ಈದಿನ.ಕಾಮ್‌ನೊಂದಿಗೆ ಮಾತನಾಡಿ "ಮುಜುರಾಯಿ ಇಲಾಖೆ, ಜಿಲ್ಲಾಡಳಿತದಿಂದ ಮುಸ್ಲಿಂ ವ್ಯಾಪಾರಸ್ಥರಿಗೆ ಜಾತ್ರೆಯಲ್ಲಿ ಅನನುಕೂಲವಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಹೊಯ್ಸಳರ ಕಾಲದಿಂದ ನಡೆದು ಬಂದ ಕುರಾನ್‌ ಪಠಣದ ಜವಾಬ್ದಾರಿಯನ್ನು ಸೈಯ್ಯದ್‌ ಕುಟುಂಬಸ್ಥರೇ ಈ ಬಾರಿಯೂ ನಿರ್ವಹಿಸಿದರು" ಎಂದು ತಿಳಿಸಿದರು. 

ಮುಸ್ಲಿಂ ವ್ಯಾಪಾರಿಗಳಿಗೆ ಮುಕ್ತ ಅವಕಾಶ 

ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ದೇಗುಲ ಆಡಳಿತ ಮಂಡಳಿ ನೊಟೀಸ್‌ ನೀಡಿದ್ದ ಬೆನ್ನಲ್ಲೇ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳ ಪಾಲ್ಗೊಳ್ಳುವಿಕೆಯ ವಿಚಾರದಲ್ಲಿ ಗೊಂದಲವಿತ್ತು. ಈ ಕಾರಣದಿಂದ ಜಾತ್ರೆಯಲ್ಲಿ ಅಂಗಡಿ ಹಾಕಲು ಬಿಡ್ ಕೂಗಲು ಮುಸ್ಲಿಮರು ಮುಂದೆ ಬಂದಿರಲಿಲ್ಲ. ಆದರೆ ಗುತ್ತಿಗೆ ಪಡೆದಿದ್ದ ಗಿರೀಶ್- ಸಿದ್ದೇಶ್ ಎಂಬುವರು ಜಿಲ್ಲಾಡಳಿತದ ಸೂಚನೆ ಮೇರೆಗೆ ಮುಸ್ಲಿಮರು ಸೇರಿದಂತೆ ಎಲ್ಲರಿಗೆ ರಥೋತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. 15ಕ್ಕೂ ಅಧಿಕ ಮುಸ್ಲಿಂ ವ್ಯಾಪಾರಿಗಳು ವಿವಿಧ ಅಂಗಡಿ ತೆರೆದು ವ್ಯಾಪಾರ ನಡೆಸಿದರು.

Image

ಕರ್ನಾಟಕ ಮುಜರಾಯಿ ಇಲಾಖೆ ಮತ್ತು ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಚನ್ನಕೇಶವ ದೇವಾಲಯಕ್ಕೂ ಹಿಂದೂಯೇತರರನ್ನು ದೇಗುಲ ಆವರಣದ ವ್ಯಾಪಾರ ಸ್ಥಳದಿಂದ ಹೊರಗಿರಿಸುವ ಪ್ರಯತ್ನ ನಡೆದದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ರಥೋತ್ಸವದಲ್ಲಿ ಜನಸಾಗರ, ಅಪ್ಪು ಅಮರ

ಹೊರ ರಾಜ್ಯ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯ ಜನರು ರಥೋತ್ಸವದಲ್ಲಿ ನೆರೆದಿದ್ದರು. ರಥೋತ್ಸವದಲ್ಲಿ ಕನ್ನಡ ಬಾವುಟ ರಾರಾಜಿಸಿದವು. ಅಪ್ಪು ಅಭಿಮಾನಿಗಳು ಅವರ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು. 

ಶಾಸಕ ಕೆ ಎಸ್‌ ಲಿಂಗೇಶ್, ಮಾಜಿ ಸಚಿವ ಎಚ್‌ ಡಿ ರೇವಣ್ಣ, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ದೇಗುಲದ ಆಡಳಿತಾಧಿಕಾರಿ ವಿದ್ಯುಲ್ಲತಾ ಇತರರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. 

18 ರವರೆಗೆ ವಿವಿಧ ಕಾರ್ಯಕ್ರಮಗಳು

ರಥೋತ್ಸವ ನಿಮಿತ್ತ ಯುಗಾದಿಯಿಂದ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಗುರುವಾರ  ಕಿರು ತೇರು ನಡೆಯಿತು. ಏ.18 ರವರೆಗೆ ವಿವಿಧ ಆಚರಣೆಗಳು ನಡೆಯುತ್ತವೆ. 

ನಿಮಗೆ ಏನು ಅನ್ನಿಸ್ತು?
0 ವೋಟ್