
- ವಿಧಾನಸಭೆ ಚುನಾವಣೆ ಕಣಕ್ಕಿಳಿಯುವ 100 ಅಭ್ಯರ್ಥಿಗಳ ಪಟ್ಟಿ ಸಿದ್ಧ
- ಸೂಕ್ತ ದಿನ ನೋಡಿಕೊಂಡು ದೇವೇಗೌಡರಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸಭೆ ಚುನಾವಣೆ ಕಣಕ್ಕಿಳಿಯುವ 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಆದರೆ, ಸದ್ಯ ಪಟ್ಟಿ ಬಿಡುಗಡೆಗೆ ನಮ್ಮ ಪಕ್ಷದ ಜ್ಯೋತಿಷಿಗಳಾದ ಎಚ್ ಡಿ ರೇವಣ್ಣ ಅವರಿಂದ ತಕರಾರು ಬಂದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ದಿನ ನೋಡಿಕೊಂಡು ಬಿಡುಗಡೆ ಮಾಡಲಿದ್ದೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ ಎಚ್ ಡಿ ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿಗಳಾಗಿದ್ದಾರೆ. ಶುಕ್ರವಾರ ಸಮಯ ಪ್ರಸಕ್ತವಾಗಿಲ್ಲ ಎಂದು ಅವರು ಹೇಳಿದ್ದರಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂದೂಡಲಾಗಿದೆ” ಎಂದರು.
“ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ ಮತ್ತು ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಅವರ ನೇತೃತ್ವದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶತಶತಮಾನಗಳ ಕಾಲ ವಿದ್ಯೆ, ಸಂಪತ್ತು ಅನುಭವಿಸಿದವರಿಗೆ ಮೀಸಲಾತಿ ನೀಡಬೇಕಾ?: ಸಿದ್ದರಾಮಯ್ಯ
ದೇವಾಲಯ, ಜ್ಯೋತಿಷ್ಯ ಶಾಸ್ತ್ರದ ಮೇಲೆ ಅಪಾರ ನಂಬಿಕೆ ಇಟ್ಟಿರುವ ರೇವಣ್ಣ ಅವರು ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದರೂ ಅಳೆದು ತೂಗಿ ಯೋಚಿಸುವುದು ಎಲ್ಲರಿಗೂ ತಿಳಿದ ಸತ್ಯ. ಇನ್ನು ನಿಂಬೆಹಣ್ಣು ವಿಚಾರದಲ್ಲಂತೂ ಅವರು ಹೆಚ್ಚು ವೈರಲ್ ಆಗಿದ್ದು, “ಮಾಟ ಮಂತ್ರ ಮಾಡುತ್ತಾರೆ ಅಲ್ವಾ, ಹೀಗಿದ್ದಾಗ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕು, ಅದಕ್ಕಾಗಿ ನಾನು ಕೂಡ ನಿಂಬೆಹಣ್ಣು ಇಟ್ಟುಕೊಂಡಿದ್ದೇನೆ” ಎಂದೂ ಹೇಳಿದ್ದರು.