ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಸನ ಪೌರಕಾರ್ಮಿಕರ ಧರಣಿ

protest

ಹೊರಗುತ್ತಿಗೆ ಪೌರ ಕಾರ್ಮಿಕರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಹಾಸನ ನಗರಸಭೆ ಎದುರು ಗುರುವಾರ ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ ಪ್ರತಿಭಟಿಸಿದರು.

ಸೇವಾ ಭದ್ರತೆ, ಸಾಮಾಜಿಕ ಭದ್ರತೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಸನ ನಗರಸಭೆ ಮುಂದೆ ಹೊರಗುತ್ತಿಗೆ ಪೌರ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಹತ್ತಾರು ವರ್ಷಗಳಿಂದ ನಗರಸಭೆಯಲ್ಲಿ ಹೊರ ಗುತ್ತಿಗೆಯಡಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಸೇವಾ ಭದ್ರತೆ, ಸಾಮಾಜಿಕ ಭದ್ರತೆ ಇಲ್ಲ. ಇವರ ಹುದ್ದೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು. 

ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು, ನೀರುಗಂಟಿಗಳು, ಕಸ ಸಾಗಣೆ ಆಟೋ ಚಾಲಕರು, ಕಂಪ್ಯೂಟರ್ ಆಪರೇಟರ್‌ಗಳು, ಯುಜಿಡಿ ಕಾರ್ಮಿಕರು, ಕಚೇರಿ ಸಹಾಯಕರು ಕೊರೊನಾ ಸಂಕಷ್ಟ ಕಾಲದಲ್ಲೂ ಕೆಲಸ ಮಾಡಿದ್ದಾರೆ. ಆದರೆ ಇವರಿಗೆ ಅಗತ್ಯ ಸೇವೆ ಒದಗಿಸಿಲ್ಲ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಹೇಳಿದ್ದಾರೆ.

ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸ್ಥಳೀಯ ಸಂಸ್ಥೆಗಳು ಕೂಡ ನಿರ್ಲಕ್ಷ್ಯ ಮಾಡುತ್ತಿವೆ ಎಂದು ಧರ್ಮೇಶ್ ಅಸಮಾಧಾನ ವ್ಯಕ್ತಪಡಿಸಿದರು. ಬೇಡಿಕೆಗಳನ್ನು ಈಡೇರಿಸುವಂತೆ ಪೌರಕಾರ್ಮಿಕರು ನಗರಸಭೆ ಅಧ್ಯಕ್ಷ ಆರ್. ಮೋಹನ್ ಅವರಿಗೆ ಮನವಿ ಸಲ್ಲಿಸಿದರು. 

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಮಂಜುನಾಥ್, ಡಿಎಚ್‌ಎಸ್ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಹಾಗೂ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.

ಪೌರ ಕಾರ್ಮಿಕರ ಬೇಡಿಕೆಗಳು

  • ಎಲ್ಲ ಪೌರ ಕಾರ್ಮಿಕರಿಗೆ ನೇರ ಪಾವತಿಯಡಿ ಸಂಬಳ ನೀಡಬೇಕು.
  • ಸುಪ್ರೀಂಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ, ಸಮಾನ ವೇತನ ನೀತಿ ಅನ್ವಯಿಸಬೇಕು. 
  • ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ನಿಯಮದಡಿ ಕಾರ್ಮಿಕರಿಂದ ಕೆಲಸ ಮಾಡಿಸುವ ಪದ್ಧತಿ ಕೈಬಿಡಬೇಕು. 
  • ವಾರದಲ್ಲಿ ಸಂಬಳ ಸಹಿತ ರಜೆ ಮತ್ತು ರಾಷ್ಟ್ರೀಯ ಹಬ್ಬಗಳಂದು ರಜೆ ನೀಡಬೇಕು.
  • ಸರ್ಕಾರದ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಉಚಿತ ನಿವೇಶನ ನೀಡಿ, ವಸತಿ ನಿರ್ಮಿಸಿ ಕೊಡಬೇಕು.
  • ಸಮವಸ್ತ್ರ ಮತ್ತು ಸುರಕ್ಷತಾ ಸಲಕರಣೆಗಳಾದ ಕೈಗವಸು, ಮಾಸ್ಕ್‌, ಶೂಗಳನ್ನು ಕಡ್ಡಾಯವಾಗಿ ವಿತರಿಸಬೇಕು.
  • ಕಾರ್ಮಿಕರ ತಿಂಗಳ ಕನಿಷ್ಠ ವೇತನ 26 ಸಾವಿರ ರೂಪಾಯಿ ಇರಬೇಕು.
  • ಸೇವೆಯಲ್ಲಿದ್ದು ಮೃತರಾದ ಪೌರ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ನಷ್ಟ ಭರಿಸಬೇಕು.

 

ನಿಮಗೆ ಏನು ಅನ್ನಿಸ್ತು?
0 ವೋಟ್